ಘನತ್ಯಾಜ್ಯ ಟೆಂಡರ್ ಅಂತಿಮಗೊಳಿಸಲು ಲಂಚಕ್ಕೆ ಬೇಡಿಕೆ ಆರೋಪ; ಅರ್ಜಿದಾರರಿಂದ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಕೆ
- by Jagan Ramesh
- April 24, 2026
- 6 Views
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಘನತ್ಯಾಜ್ಯ ಟೆಂಡರ್ ಅಂತಿಮಗೊಳಿಸಲು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿ (ಬಿಎಸ್ಡಬ್ಲ್ಯುಎಂಎಲ್) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕರಿಗೌಡ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಮಾಡಿರುವ ಆರೋಪವನ್ನು ಪ್ರಮಾಣೀಕರಿಸಿ ಬೆಂಗಳೂರು ನಗರ ಸ್ವಚ್ಛತೆ, ಲಾರಿ ಮಾಲೀಕರ ಮತ್ತು ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಮಣಿಯಂ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಘನ ತ್ಯಾಜ್ಯ ಟೆಂಡರ್ ಅಂತಿಮಗೊಳಿಸಲು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಕರಿಗೌಡ ಅವರು ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಅವರ ವಿರುದ್ದ ಎಫ್ಐಆರ್ ದಾಖಲಿ ತನಿಖೆ ನಡೆಸಲು ನಿರ್ದೇಶಿಸುವಂತೆ ಕೋರಿ ಗುತ್ತಿಗೆದಾರ ಎಸ್.ಎನ್. ಬಾಲಸುಬ್ರಮಣಿಯನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿ ಕುರಿತು ಗುರುವಾರ ನಡೆದ ವಿಚಾರಣೆ ವೇಳೆ ಅರ್ಜಿದಾರರ ಆರೋಪಗಳನ್ನು ಸರ್ಕಾರ ನಿರಾಕರಿಸಿತ್ತು. ಇದರಿಂದ, ಅರ್ಜಿಯಲ್ಲಿ ಮಾಡಲಾಗಿರುವ ಆರೋಪವನ್ನು ಪ್ರಮಾಣೀಕರಿಸಿ ಪ್ರಮಾಣಪತ್ರ ಸಲ್ಲಿಸುವುದಾಗಿ ಬಾಲಸುಬ್ರಮಣಿಯನ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದನ್ನಯ ಪರಿಗಣಿಸಿದ್ದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.
ಶುಕ್ರವಾರ ಅರ್ಜಿದಾರರ ಪರ ವಕೀಲ ಪಿ. ಪ್ರಸನ್ನ ಕುಮಾರ್ ಹಾಜರಾಗಿ, ಅರ್ಜಿಯಲ್ಲಿ ಮಾಡಲಾದ ಆರೋಪ ಹಾಗೂ ಅದನ್ನು ದೃಢಪಡಿಸುವ ಕೆಲ ಪ್ರಾಥಮಿಕ ಸಾಕ್ಷ್ಯಗಳನ್ನು ಅಡಕಗೊಳಿಸಿದ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಜತೆಗೆ, ತುಷಾರ್ ಗಿರಿನಾಥ್ ಹಾಗೂ ಕರಿಗೌಡ ಲಂಚಕ್ಕೆ ಬೇಡಿಕೆ ಇರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರವಾಗಿ ಪ್ರತಿಫಲಾಪೇಕ್ಷೆ ವ್ಯಕ್ತಪಡಿಸಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಸಂಗತಿಗೆ ಸಾಕ್ಷ್ಯವಾಗಬಲ್ಲ ಬಿಎಸ್ಡಬ್ಲ್ಯುಎಂಎಲ್ ಕಚೇರಿಯಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳು, ಹಾರ್ಡ್ ಡ್ರೈವ್ಸ್, ಟವರ್ ಡಂಪ್ ಲೊಕೇಷನ್ ಮತ್ತು ಪರಸ್ಪರ ಸಂಭಾಷಿಸಿರುವ ಮೊಬೈಲ್ ಕಾಲ್ಗಳ ವಿವರಗಳನ್ನು ಸಂಗ್ರಹಿಸಿ ಇರಿಸಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಇದೇ ವೇಳೆ ಮಧ್ಯಂತರ ಅರ್ಜಿಯನ್ನೂ ಸಲ್ಲಿಸಿದರು.
ಅರ್ಜಿದಾರರ ಪ್ರಮಾಣಪತ್ರ ಸ್ವಿಕರಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.



Comments (0)