- ಟ್ರಯಲ್ ಕೋರ್ಟ್
- Like this post: 50
ಯೋಗೀಶ ಗೌಡರ್ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ ಕುಲಕರ್ಣಿ ದೋಷಿ; ಜನಪ್ರತಿನಿಧಿಗಳ ಕೋರ್ಟ್ ತೀರ್ಪು
- by Jagan Ramesh
- April 15, 2026
- 16 Views
ಬೆಂಗಳೂರು: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 17 ಮಂದಿಯನ್ನು ದೋಷಿ ಎಂದು ತೀರ್ಮಾನಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಜತೆಗೆ, ಎಲ್ಲ ಅಪರಾಧಿಗಳನ್ನು ವಶಕ್ಕೆ ಪಡೆದು, ಜೈಲಿಗೆ ಕಳುಹಿಸುವಂತೆ ನ್ಯಾಯಾಲಯ ಸಿಬಿಐಗೆ ನಿರ್ದೇಶಿಸಿದೆ.
ದಶಕದ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ವಿಚಾರಣೆ ಪೂರ್ಣಗೊಳಿಸಿ ಏಪ್ರಿಲ್ 2ರಂದು ಕಾಯ್ದಿರಿಸಿದ್ದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಬುಧವಾರ ಪ್ರಕಟಿಸಿದ್ದು, ಎಲ್ಲ ಅಪರಾಧಿಗಳನ್ನು ತಕ್ಷಣ ವಶಕ್ಕೆ ಪಡೆದು, ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ಸಿಬಿಐಗೆ ನ್ಯಾಯಾಲಯ ನಿರ್ದೇಶಿಸಿದ್ದು, ಶಿಕ್ಷೆಯ ಪ್ರಮಾಣ ನಿಗದಿಪಡಿಸಲು ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಇದೇ ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಹೇಳಿದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ.
ಕೋರ್ಟ್ ಆದೇಶದಲ್ಲೇನಿದೆ?
ಆರೋಪಿಗಳಾದ ವಿಕ್ರಮ್, ಕೀರ್ತಿ ಕುಮಾರ್, ಸಂದೀಪ್ ಸವದತ್ತಿ, ವಿನಾಯಕ್ ಕಟಗಿ, ಮಹಾಬಲೇಶ್ವರ್ ಹೊಂಗಲ್ ಅಲಿಯಾಸ್ ಮುದಕ, ಸಂತೋಷ್ ಸವದತ್ತಿ, ಎಂ. ದಿನೇಶ್, ಎಸ್. ಅಶ್ವತ್, ಕೆ.ಎಸ್. ಸುನೀಲ್, ನಜೀರ್ ಅಹ್ಮದ್, ಶನ್ವಾಜ್, ಕೆ. ನೂತನ್, ಸಿ. ಹರ್ಷಿತ್, ವಿನಯ್ ಕುಲಕರ್ಣಿ, ಚಂದ್ರಶೇಖರ್ ಇಂಡಿ ಅಲಿಯಾಸ್ ಚಂದ್ರು ಮಾಮ, ವಿಕಾಸ್ ಕಲಬುರ್ಗಿ ಮತ್ತು ಚನ್ನಕೇಶವ ಟಿಂಗರಿಕರ್ ಅವರು ಯೋಗೀಶ ಗೌಡರ್ ಕೊಲೆಗೆ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 120ಬಿ ಅಡಿ ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ವಿಕ್ರಮ್, ಕೀರ್ತಿ ಕುಮಾರ್, ಸಂದೀಪ್ ಸವದತ್ತಿ, ವಿನಾಯಕ್ ಕಟಗಿ, ಮಹಾಬಲೇಶ್ವರ್ ಹೊಂಗಲ್ ಅಲಿಯಾಸ್ ಮುದಕ, ಸಂತೋಷ್ ಸವದತ್ತಿ, ಎಂ. ದಿನೇಶ್, ಎಸ್. ಅಶ್ವತ್, ಕೆ.ಎಸ್. ಸುನೀಲ್, ನಜೀರ್ ಅಹ್ಮದ್, ಶನ್ವಾಜ್, ಕೆ. ನೂತನ್, ಸಿ. ಹರ್ಷಿತ್, ವಿನಯ್ ಕುಲಕರ್ಣಿ, ಚಂದ್ರಶೇಖರ್ ಇಂಡಿ ಅಲಿಯಾಸ್ ಚಂದ್ರು ಮಾಮ ಮತ್ತು ವಿಕಾಸ್ ಕಲಬುರ್ಗಿ ಅವರು ಐಪಿಸಿ ಸೆಕ್ಷನ್ 302 (ಕೊಲೆ) ಜತೆಗೆ 120 ಬಿ ಅಡಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಮೇಲಿನ ಎಲ್ಲ ಆರೋಪಿಗಳ ಜತೆಗೆ ಚನ್ನಕೇಶವ ಟಿಂಗರಿಕರ್ ಸೇರಿ ಎಲ್ಲರೂ ಐಪಿಸಿ ಸೆಕ್ಷನ್ 201 (ಅಪರಾಧದ ಸಾಕ್ಷ್ಯಗಳು ಕಣ್ಮರೆಯಾಗಲು ಕಾರಣವಾಗುವುದು ಅಥವಾ ಅಪರಾಧಿಗಳನ್ನು ಮುಚ್ಚಿಡಲು ಸುಳ್ಳು ಮಾಹಿತಿ ನೀಡುವುದು) ಜತೆ 120B ಜತೆಗೆ 149 (ಅಕ್ರಮ ಕೂಟ ರಚನೆ) ಅಡಿ ಅಪರಾಧಿಗಳು ಎಂದು ನ್ಯಾಯಾಲಯ ತೀರ್ಮಾನಿಸಿದೆ. 19ನೇ ಆರೋಪಿ ಚನ್ನಕೇಶವ ಟಿಂಗರಿಕರ್ ಐಪಿಸಿ ಸೆಕ್ಷನ್ 218 ಜತೆಗೆ 120ಬಿ ಹಾಗೂ 149 ಅಡಿ ಅಪರಾಧಿ ಎಂದು ಸಾರಲಾಗಿದೆ.
ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಅವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್‌ಗಳಾದ 3, 5, 8, 25 ಮತ್ತು 29ರ ಅಡಿ ಅಪರಾಧದಿಂದ ಅವರನ್ನು ಖುಲಾಸೆಗೊಳಿಸಲಾಗಿದೆ. 20ನೇ ಆರೋಪಿ ವಾಸುದೇವ ರಾಮ ನಿಲೇಕಣಿ ಮತ್ತು 21ನೇ ಆರೋಪಿ ಸೋಮಶೇಖರ್ ಬಸಪ್ಪ ನ್ಯಾಮಗೌಡ ಅವರಿಗೆ ಅನುಮಾನದ ಲಾಭ ನೀಡಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಅಪ್ರೂಪರ್‌ನಿಂದ ಬದಲಾಗಿ ಸಾಕ್ಷಿಯಾಗಿದ್ದ ಆನಂತರ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದ ಶಿವಾನಂದ ಶ್ರೀಶೈಲ ಬಿರಾದರ್‌ನನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಅಗತ್ಯ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ನೀಡಿದೆ.
ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶನ:
ಪ್ರಕರಣದಲ್ಲಿ ಸಾಕ್ಷಿಗಳಾಗಿದ್ದ ಪೊಲೀಸ್ ಅಧಿಕಾರಿಗಳಾದ ಶಿವಾನಂದ ಛಲವಾದಿ, ಬಾಬು ಕಟಗಿ, ಶಂಕರಗೌಡ ಬಸನಗೌಡ ಪಾಟೀಲ್ ಮತ್ತು ಇತರ ಸ್ವತಂತ್ರ ಸಾಕ್ಷಿಗಳಾದ ಡಾ. ದತ್ತಾತ್ರೇಯ ಗುಡಗಂಟಿ, ಆನಂದ ಈರಪ್ಪ ಉದ್ದಣ್ಣವರ್, ವಿನಾಯಕ ಬಿಂಜಿಯವರ್, ಮೋಹನ್ ಈಚರಪ್ಪ ಮುಲ್ಮುಟ್ಟಳ್, ವಿವೇಕಾನಂದ ದಳವಾಯಿ, ನಟರಾಜ್ ಸರದೇಸಾಯಿ ಮತ್ತು ವಿಜಯ್ ಕುಲಕರ್ಣಿ ಅವರು ಸುಳ್ಳು ಸಾಕ್ಷಿ ಹೇಳಿದ್ದಕ್ಕಾಗಿ ಅವರ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 340ರ ಅಡಿ ಪ್ರಕರಣ ದಾಖಲಿಸಲು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ನ್ಯಾಯಾಲಯ ನಿರ್ದೇಶಿಸಿದೆ.
ಪ್ರಕರಣವೇನು?
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಯೋಗೀಶ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಮೊದಲಿಗೆ ತನಿಖೆ ನಡೆಸಿದ್ದ ಧಾರವಾಡ ಪೊಲೀಸರು 6 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶಾಸಕ ವಿನಯ ಕುಲಕರ್ಣಿ ಹೆಸರು ಕೈಬಿಡಲಾಗಿತ್ತು. ನಂತರ ಸಿಬಿಐ ತನಿಖೆ ನಡೆಸಿ, ದೋಷಾರೋಪ ಪಟ್ಟಿಯಲ್ಲಿ ಹೊಸದಾಗಿ 7ರಿಂದ 21 ಆರೋಪಿಗಳನ್ನು ಸೇರ್ಪಡೆ ಮಾಡಲಾಗಿತ್ತು. ಪ್ರಕರಣದಲ್ಲಿ ವಿನಯ ಕುಲಕರ್ಣಿ ಅವರು 15ನೇ ಆರೋಪಿಯಾಗಿದ್ದಾರೆ.
Related Articles
Thank you for your comment. It is awaiting moderation.



Comments (0)