ದಶಕದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ ಎಫ್ಡಿಎ; ಕುಟುಂಬಕ್ಕೆ ಪರಿಹಾರ ಮೊತ್ತ ಹೆಚ್ಚಿಸಿದ ಹೈಕೋರ್ಟ್
- by Prashanth Basavapatna
- April 13, 2026
- 17 Views
ಬೆಂಗಳೂರು: ಹತ್ತು ವರ್ಷದ ಹಿಂದೆ ನಂಜನಗೂಡು-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟಿದ್ದ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಒಬ್ಬರ ಕುಟುಂಬಕ್ಕೆ ಪರಿಹಾರದ ಮೊತ್ತವನ್ನು ಹೈಕೋರ್ಟ್ 51.6 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಿದೆ.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ನಿಗದಿಪಡಿಸಿದ್ದ 41.5 ಲಕ್ಷ ರೂ. ಪರಿಹಾರವನ್ನು ಪ್ರಶ್ನಿಸಿ ವಿಮಾ ಕಂಪನಿ ಹಾಗೂ ಪರಿಹಾರ ಹೆಚ್ಚಳ ಕೋರಿ ಮೃತನ ಕುಟುಂಬದವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಅಪಘಾತದ ನಡೆದ ಸ್ಥಳದಲ್ಲಿ ಕೇರಳ ನೋಂದಾಯಿತ ಕಾರು ಎಡಭಾಗದಲ್ಲಿ 25 ಅಡಿ ದೂರದಲ್ಲಿತ್ತು. ಆದರೆ, ಮೃತ ಮತ್ತು ಗಾಯಗೊಂಡವರು ಪ್ರಯಾಣಿಸುತ್ತಿದ್ದ ಕಾರು ಎಡಭಾಗದಲ್ಲಿ ಕೇವಲ 15 ಅಡಿ ದೂರದಲ್ಲಿತ್ತು. ಕೇರಳ ಮೂಲದ ಕಾರಿನ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತಯೇ ಅಪಘಾತ ಸಂಭವಿಸಲು ಕಾರಣ ಎಂಬುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮೃತ ವ್ಯಕ್ತಿ ತಿಂಗಳಿಗೆ 2 ಲಕ್ಷ ರೂ. ಮಿಲಿಟರಿ ಪಿಂಚಣಿ ಪಡೆಯುತ್ತಿದ್ದರು, ಅದನ್ನು ನ್ಯಾಯಮಂಡಳಿ ಪರಿಗಣಿಸಬೇಕಾಗಿತ್ತು, ಅದನ್ನು ಪರಿಗಣಿಸುವಲ್ಲಿ ಎಂಎಸಿಟಿ ವಿಫಲವಾಗಿದೆ ಎಂದು ಹೇಳಿರುವ ವಿಭಾಗೀಯ ನ್ಯಾಯಪೀಠವು, ಅದೇ ಅಂಶವನ್ನು ಆಧರಿಸಿ ಪರಿಹಾರ ಮೊತ್ತವನ್ನು 51.6 ಲಕ್ಷ ರೂ.ಗಳ ಹೆಚ್ಚಿಸಿದೆ. ಜತೆಗೆ, ಮೃತರ ಮಗಳಿಗೆ ನಿಗದಿಪಡಿಸಿದ್ದ ಪರಿಹಾರವನ್ನು 3.9 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿರುವ ನ್ಯಾಯಪೀಠ, ಮಗನಿಗೆ ನೀಡಲಾದ ಪರಿಹಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಪ್ರಕರಣವೇನು?
ಮಿಲಿಟರಿ ಸೇವೆಯಲ್ಲಿದ್ದು ನಿವೃತ್ತಿ ನಂತರ ಶಹಾಬುದ್ದೀನ್ ಖಾನ್ ಬೆಂಗಳೂರಿನ ಕಂದಾಯ ಇಲಾಖೆಯಲ್ಲಿ ಎಫ್ಡಿಎ ಆಗಿ ಕೆಲಸ ಮಾಡುತ್ತಿದ್ದರು. ಅವರು 2016ರ ಅಕ್ಟೋಬರ್ 10ರಂದು ಬೆಂಗಳೂರಿನಿಂದ ಊಟಿಗೆ ಕಾರಿನಲ್ಲಿ ತೆರಳುತ್ತಿದ್ದರು. ನಂಜನಗೂಡು-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಕೇರಳದ ಕಡೆಯಿಂದ ಬರುತ್ತಿದ್ದ ಕಾರೊಂದು ಇವರ ಕಾರಿಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಖಾನ್ ಮೃತಪಟ್ಟಿದ್ದರು. ಕಾರಿನಲ್ಲಿದ್ದ 16 ವರ್ಷದ ಪುತ್ರಿ ಹಾಗೂ 18 ವರ್ಷದ ಪುತ್ರ ಸಹ ಗಾಯಗೊಂಡಿದ್ದರು.
ಮೃತರ ಪತ್ನಿ, ಪುತ್ರಿ ಹಾಗೂ ಪುತ್ರ ಪರಿಹಾರ ಕೋರಿ ಎಂಎಸಿಟಿ ಮುಂದೆ ಮೂರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಆ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮಂಡಳಿ 2023ರ ಜೂನ್ 23ರಂದು ಮೃತರ ಪತ್ನಿಗೆ 41.5 ಲಕ್ಷ, ಪುತ್ರನಿಗೆ 4.7ಲಕ್ಷ ಹಾಗೂ ಪುತ್ರಿಗೆ 3.5 ಲಕ್ಷ ರೂ. ಪರಿಹಾರವನ್ನು ನಿಗದಿ ಮಾಡಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ವಿಮಾ ಕಂಪನಿ, ನ್ಯಾಯಮಂಡಳಿ ಕಾರು ಚಲಾವಣೆ ಮಾಡುತ್ತಿದ್ದ ಶಹಾಬುದ್ದೀನ್ ನಿರ್ಲಕ್ಷ್ಯವನ್ನು ಪರಿಗಣಿಸಿಯೇ ಇಲ್ಲ ಎಂದು ವಾದಿಸಿತ್ತು. ಮತ್ತೊಂದೆಡೆ ಮೃತರ ಕುಟುಂಬದವರು, ಅಪಘಾತ ನಡೆದ ಸ್ಥಳದ ನಕ್ಷೆ (ಸ್ಕೆಚ್) ಸಲ್ಲಿಸಿ ಅದರ ಪ್ರಕಾರ ಕೇರಳ ನೋಂದಾಯಿತ ಕಾರು ಡಿಕ್ಕಿ ಹೊಡೆದಿರುವುದು ಸ್ಪಷ್ಟವಾಗಿದೆ. ಆದರೆ, ಅದನ್ನು ಎಂಎಸಿಟಿ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದ್ದರು.
Related Articles
Thank you for your comment. It is awaiting moderation.



Comments (0)