ಪೌಷ್ಟಿಕ ಆಹಾರ ವಿತರಣೆಗೆ ಮುಖ ಗುರುತಿಸುವಿಕೆ ಕಡ್ಡಾಯ ಪ್ರಶ್ನಿಸಿ ಅರ್ಜಿ; ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್

ಬೆಂಗಳೂರು: ಪೋಷಣ್ 2 ಅಭಿಯಾನದಡಿ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ವಿತರಿಸುವಾಗ ಮುಖ ಗುರುತಿಸುವಿಕೆ ತಂತ್ರಜ್ಞಾನದ (ಎಫ್‌ಆರ್‌ಎಸ್) ಮೂಲಕ ಕಡ್ಡಾಯವಾಗಿ ಮುಖ ಗುರುತು ಸೆರೆಹಿಡಿಯಬೇಕೆಂಬ ಷರತ್ತನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಎಫ್‌ಆರ್‌ಎಸ್ ಕಡ್ಡಾಯಗೊಳಿಸಿ 2025ರ ಮೇ 3ರಂದು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ರದ್ದುಕೋರಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ‌ ನ್ಯಾಯಪೀಠ ಪ್ರತಿವಾದಿಗಳಾದ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ, ರಾಜ್ಯ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿತು.

ಅರ್ಜಿದಾರರ ಆಕ್ಷೇಪವೇನು?
​ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪೌಷ್ಟಿಕ ಆಹಾರ ಪಡೆಯುವುದು ಶಾಸನಬದ್ಧ ಹಕ್ಕಾಗಿದೆ. ಪೌಷ್ಟಿಕ ಆಹಾರ ವಿತರಿಸುವ ಸಂದರ್ಭದಲ್ಲಿ ಎಫ್‌ಆರ್‌ಎಸ್‌ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ, ಕಳಪೆ ನೆಟ್‌ವರ್ಕ್, ಮಕ್ಕಳ ಮುಖಚರ್ಯೆಯಲ್ಲಿನ ಬದಲಾವಣೆ, ಆರೋಗ್ಯ ಕಾರಣಗಳು, ವಯಸ್ಸಿಗೆ ಸಂಬಂಧಿಸಿದ ಮುಖಚರ್ಯೆ ಬದಲಾವಣೆ ಇನ್ನಿತರ ಕಾರಣಗಳಿಂದಾಗಿ ಎಫ್‌ಆರ್‌ಎಸ್ ವ್ಯವಸ್ಥೆಯು ಪದೇಪದೆ ವಿಫಲವಾಗುತ್ತಿದೆ. ಇದರಿಂದ ಹಸುಗೂಸುಗಳಿಗೆ, ಮಕ್ಕಳಿಗೆ ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದರಿಗೆ ಹಾಗೂ ಪ್ರೌಢಾವಸ್ಥೆ ತಲುಪಿದ ಹೆಣ್ಣುಮಕ್ಕಳಿಗೆ ಈ ಸೌಲಭ್ಯ ಸಿಗದಂತಾಗುತ್ತಿದೆ. ಈ ವೈಫಲ್ಯಗಳು ಪೌಷ್ಟಿಕ ಆಹಾರ ವಿತರಣೆಯಲ್ಲಿ ಗಮನಾರ್ಹ ವಿಳಂಬ ಹಾಗೂ ನಿರಾಕರಣೆಗೆ ಕಾರಣವಾಗುತ್ತಿದ್ದು, ಇದು ಸಂವಿಧಾನದ ವಿಧಿ 14 ಹಾಗೂ 21ರ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಸರ್ಕಾರದಿಂದ ಅಗತ್ಯ ಪ್ರಮಾಣದ ಉಪಕರಣಗಳು, ಸಿಬ್ಬಂದಿ ಹಾಗೂ ತರಬೇತಿ ದೊರೆಯದ ಕಾರಣ ಎಫ್‌ಆರ್‌ಎಸ್‌ಗಾಗಿ ಅಂಗನವಾಡಿ ಕಾರ್ಯಕರ್ತರು ತಮ್ಮ ಸ್ವಂತ ಮೊಬೈಲ್ ಮತ್ತು ಡೇಟಾವನ್ನು ಬಳಸುವಂತಾಗಿದೆ. ತಾಂತ್ರಿಕ ದೋಷಗಳಿಂದ ಉಂಟಾಗುವ ಸಮಸ್ಯೆಗಳಿಗೆ ಕಾರ್ಯಕರ್ತರನ್ನೇ ಹೊಣೆಗಾರರನ್ನಾಗಿಸಿ ದಂಡ ವಿಧಿಸಲಾಗುತ್ತಿದೆ. ಜತೆಗೆ, ಯಾವುದೇ ಕಾನೂನು ಚೌಕಟ್ಟಿಲ್ಲದೆ ಮಹಿಳೆಯರು ಮತ್ತು ಮಕ್ಕಳ ಬಯೋಮೆಟ್ರಿಕ್ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಇದು ಕೆ.ಎಸ್. ಪುಟ್ಟಸ್ವಾಮಿ ಮತ್ತು ಇತರರು ಹಾಗೂ ಕೇಂದ್ರ ಸರ್ಕಾರ ಮತ್ತು ಇತರರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 2018ರಲ್ಲಿ ನೀಡಿರುವ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಎಫ್‌ಆರ್‌ಎಸ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ 2025ರ ಮೇ 3ರಂದು ಹೊರಡಿಸಿರುವ ಮಾರ್ಗಸೂಚಿ ರದ್ದುಪಡಿಸಬೇಕು ಹಾಗೂ ಪೌಷ್ಟಿಕ ಆಹಾರ ವಿತರಣೆಗೆ ಎಫ್‌ಆರ್‌ಎಸ್ ಬಳಕೆಯ ಷರತ್ತನ್ನು ತಕ್ಷಣವೇ ತಡೆ ಹಿಡಿಯುವಂತೆ ಹಾಗೂ ಬಯೋಮೆಟ್ರಿಕ್ ಅಲ್ಲದ ಪರ್ಯಾಯ ವಿಧಾನಗಳ ಮೂಲಕ ವಿತರಣೆಗೆ ಅನುಮತಿ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment