ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು; ಗುರುವಾರದವರೆಗೆ ಆದೇಶದ ಅನುಷ್ಠಾನ ಬೇಡವೆಂದ ಹೈಕೋರ್ಟ್
- by Jagan Ramesh
- March 24, 2026
- 1057 Views
ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಹೊರಡಿಸಲಾಗಿರುವ ಆದೇಶವನ್ನು ಗುರುವಾರದವರೆಗೆ (ಮಾರ್ಚ್ 26) ಅನುಷ್ಠಾನಗೊಳಿಸದಂತೆ ರಾಜ್ಯ ಸರ್ಕಾರ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿಗೆ ಹೈಕೋರ್ಟ್ ಮಧ್ಯಂತರ ನಿರ್ದೇಶನ ನೀಡಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ 2026ರ ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ (ಮೂರನೇ ಬಾರಿ) ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ಜತೆಗೆ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಪುತ್ತೂರು ಉಪ ವಿಭಾಗಾಧಿಕಾರಿ, ಬಂಟ್ವಾಳ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಳ್ತಂಗಡಿ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ತಿಮರೊಡಿ ಪರ ವಕೀಲ ಎಂ.ಆರ್. ಬಾಲಕೃಷ್ಣ ವಾದ ಮಂಡಿಸಿ, ಅರ್ಜಿದಾರರನ್ನು ಈ ಹಿಂದೆ 2025ರ ಸೆಪ್ಟೆಂಬರ್ 18ರಂದು ಹಾಗೂ ಡಿಸೆಂಬರ್ 16ರಂದು ನಿರ್ದಿಷ್ಟ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶಿಸಿದ್ದರು. ಈ ಎರಡೂ ಆದೇಶಗಳನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಎರಡು ಬಾರಿಯೂ ಪ್ರಕರಣವನ್ನು ಉಪ ವಿಭಾಗಾಧಿಕಾರಿಗೆ ಹಿಂದಿರುಗಿಸಿದ್ದ ಹೈಕೋರ್ಟ್, ಎಲ್ಲ ಅಂಶಗಳನ್ನು ಪರಿಶೀಲಿಸಿ ಹೊಸದಾಗಿ ಆದೇಶ ಮಾಡಲು ಸೂಚಿತ್ತು. ಇದೀಗ ಮೂರನೇ ಬಾರಿಗೆ ಗಡಿಪಾರು ಮಾಡಿ ಮಾರ್ಚ್ 13ರಂದು ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ಮಾಡಿದ್ದಾರೆ. ಅದನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ ಎಂದರು ವಿವರಿಸಿದರು.
ಮುಂದುವರಿದು, ಅರ್ಜಿದಾರರ ಮೇಲೆ ಹಲವು ಪ್ರಕರಣಗಳು ದಾಖಲಾಗಿದೆ ಎಂಬ ಕಾರಣ ನೀಡಿ ಗಡಿಪಾರು ಮಾಡಲಾಗಿದೆ. ಆದರೆ, ಅರ್ಜಿದಾರರ ವಿರುದ್ಧ 26 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಹಲವು ಪ್ರಕರಣಗಳು 30 ವರ್ಷಗಳ ಹಿಂದೆ ದಾಖಲಾಗಿರುವ ಪ್ರಕರಣಗಳಾಗಿವೆ. ಇನ್ನೂ ಅನೇಕ ಪ್ರಕರಣಗಳು ಖುಲಾಸೆಯೊಂದಿಗೆ ಅಂತ್ಯಕಂಡಿದ್ದು, 2 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಒಂದು ಪ್ರಕರಣದಲ್ಲಿ 50 ರೂ. ದಂಡ ವಿಧಿಸಲಾಗಿದೆ. ಇತ್ತೀಚೆಗೆ ಹೊಸದಾಗಿ ಆರೇಳು ಪ್ರಕರಣಗಳು ದಾಖಲಿಸಿ, ಅವುಗಳ ಆಧಾರದ ಮೇಲೆ ಗಡಿಪಾರು ಮಾಡಲಾಗಿದೆ. ಈ ವೇಳೆ ಅರ್ಜಿದಾರರ ವಾದವನ್ನು ಉಪ ವಿಭಾಗಾಧಿಕಾರಿ ಪರಿಗಣಿಸಿಲ್ಲ. ಆದ್ದರಿಂದ, ಗಡಿಪಾರು ಅದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.
Related Articles
Thank you for your comment. It is awaiting moderation.



Comments (0)