ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೋರ್ಟ್‌ ಕಾರಿಡಾರ್‌ನಲ್ಲೇ ಎ10 ವಿನಯ್‌ಗೆ ವಕೀಲರಿಂದ ಕಪಾಳಮೋಕ್ಷ

ಬೆಂಗಳೂರು: ನಟ ದರ್ಶನ್‌, ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ 10ನೇ ಆರೋಪಿ ವಿನಯ್‌ಗೆ ಆತನ ವಕೀಲರೇ ಕೋರ್ಟ್‌ ಕಾರಿಡಾರ್‌ನಲ್ಲಿ ಕಪಾಳಮೋಕ್ಷ ಮಾಡಿದ ಘಟನೆ ಸೋಮವಾರ ನಡೆದಿದೆ. ಇದೇ ವೇಳೆ, ಮಧ್ಯಾಹ್ನದ ಕಲಾಪಕ್ಕೆ ವಿನಯ್‌ ಹಾಜರಾಗದ ಕಾರಣಕ್ಕೆ ಆತನ ವಿರುದ್ಧ ನ್ಯಾಯಾಲಯ ಜಾಮೀನುರಹಿತ ಬಂಧನ ವಾರಂಟ್‌ (ಎನ್‌ಬಿಡಬ್ಲ್ಯು) ಜಾರಿಗೊಳಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಿತು. ಬೆಳಗಿನ ಕಲಾಪದ ವೇಳೆ 10ನೇ ಆರೋಪಿ ವಿನಯ್‌ ಪರ ನೂತನ ವಕೀಲರೊಬ್ಬರು ಹಾಜರಾಗಿ, ವಿನಯ್‌ ಪರ ವಕಾಲತ್ತು ಸಲ್ಲಿಸಿ, ಇನ್ನು ಮುಂದೆ ವಿನಯ್‌ ಅವರನ್ನು ತಾವು ಪ್ರತಿನಿಧಿಸುವುದಾಗಿ ತಿಳಿಸಿದರು.

ಆಗ ವಿನಯ್ ಅವರನ್ನು ಇದುವರೆಗೆ ಪ್ರತಿನಿಧಿಸಿದ್ದ ವಕೀಲ ನಟರಾಜ್‌ ಹಾಜರಾಗಿ, ಸ್ವಾಮಿ ನಾನು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿಲ್ಲ. ನನ್ನ ಬದಲಿಗೆ ಬೇರೊಬ್ಬರನ್ನು ನಿಯೋಜಿಸಿಕೊಳ್ಳುತ್ತಿರುವ ಬಗ್ಗೆ ವಿನಯ್‌ ನನ್ನ ಗಮನಕ್ಕೂ ತಂದಿಲ್ಲ ಎಂದು ನ್ಯಾಯಾಧೀಶರಿಗೆ ವಿವರಿಸಿದರು. ಇದರಿಂದ, ಕೋರ್ಟ್‌ ಹಾಲ್‌ನಲ್ಲಿದ್ದ ವಿನಯ್‌ ಮತ್ತು ನಟರಾಜ್‌ ನಡುವೆ ಮಾತಿನ ಚಕಮಕಿ ನಡೆಯಿತು.

ಅದಕ್ಕೆ ನ್ಯಾಯಾಧೀಶರು, ಇಂಥ ವಿಚಾರವನ್ನು ಕೋರ್ಟ್‌ ಹೊರಗಡೆ ಚರ್ಚಿಸಿಕೊಂಡು ಬಗೆಹರಿಸಿಕೊಳ್ಳಿ ಎಂದು ಸೂಚಿಸಿದರಲ್ಲದೆ, ಸಾಕ್ಷಿಗಳ ಹಾಜರಾತಿ ಮತ್ತು ಸಾಕ್ಷ್ಯ ದಾಖಲಿಸಿಕೊಂಡು ವಿಚಾರಣೆಯನ್ನು ಮಧ್ಯಾಹ್ನ 3.15ಕ್ಕೆ ಮುಂದೂಡಿದರು.

ಕೋರ್ಟ್‌ ಹೊರಗಡೆ ಬಂದ ವಕೀಲ ನಟರಾಜ್‌ ಮತ್ತು ವಿನಯ್‌ ನಡುವೆ ಕಾರಿಡಾರ್‌ನಲ್ಲಿ ವಾಗ್ವಾದ ನಡೆದಿತ್ತು. ಈ ವೇಳೆ ವಿನಯ್‌ ಏರು ಧ್ವನಿಯಲ್ಲಿ ಮಾತನಾಡುತ್ತಾ ಘಟನೆ ದೃಶ್ಯವಳಿಯನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಳ್ಳಲು ಪ್ರಯತ್ನಿಸಿದರು. ಇದರಿಂದ, ಆಕ್ರೋಶಗೊಂಡ ವಕೀಲ ನಟರಾಜ್‌, ವಿನಯ್‌ ಕಪಾಳಕ್ಕೆ ಐದಾರು ಏಟು ನೀಡಿದರು. ಪೆಟ್ಟು ತಿಂದು ಕುಪಿತನಾದ ವಿನಯ್‌, ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು, ನಂತರ ಪೊಲೀಸರಿಗೆ ದೂರು ನೀಡುವುದಾಗಿ ನಟರಾಜ್‌ಗೆ ಎಚ್ಚರಿಸಿ ಸ್ಥಳದಿಂದ ನಿರ್ಗಮಿಸಿದರು.

ಪ್ರಕರಣವನ್ನು ಮಧ್ಯಾಹ್ನ 3.15ಕ್ಕೆ ಮತ್ತೆ ವಿಚಾರಣೆಗೆ ಕರೆದಾಗ, ಜೈಲಿನಲ್ಲಿರುವ ನಟ ದರ್ಶನ್‌ ಸೇರಿ 7 ಆರೋಪಿಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಗೂ ಜಾಮೀನು ಮೇಲಿರುವ ಇತರ ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾದರು. ಆದರೆ, 10ನೇ ಆರೋಪಿ ವಿನಯ್‌ ಆಗಲಿ, ಅವರ ಪರ ವಕೀಲರಾಗಲಿ ಹಾಜರಾಗಿರಲಿಲ್ಲ. ಇದರಿಂದ, ನ್ಯಾಯಾಲಯ ವಿನಯ್ ವಿರುದ್ಧ ಎನ್‌ಬಿಡಬ್ಲ್ಯು ಜಾರಿಗೊಳಿಸಿತು.

ಸೋಮವಾರ ಒಟ್ಟು ನಾಲ್ವರು ಸಾಕ್ಷಿಗಳ ಸಾಕ್ಷ್ಯ ದಾಖಲಿಸಿಕೊಂಡ ನ್ಯಾಯಾಧೀಶರು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.

Related Articles

Comments (0)

Leave a Comment