ಬೈಲಾ ಉಲ್ಲಂಘನೆ ಆರೋಪ; ಬ್ರಾಹ್ಮಣ ಮಹಾಸಭಾ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ
- by Prashanth Basavapatna
- February 25, 2026
- 13 Views
ಬೆಂಗಳೂರು: ಬೈಲಾ (ಉಪ ನಿಯಮ) ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಮಹಾಸಭಾದ ಸದಸ್ಯ ಕೆ. ಮೋಹನ್ ಎಂಬುವರ ದೂರು ಆಧರಿಸಿ ವಿಚಾರಣೆಗೆ ಆದೇಶಿಸಿರುವ ಮತ್ತು ತನಿಖೆಯನ್ನು ಅಧಿಕಾರ ವ್ಯಾಪ್ತಿ ಮೀರಿ ಸಹಕಾರ ಸಂಘಗಳ ಉಪ ನಿಬಂಧಕರು (ವಲಯ-3) ಇವರಿಂದ ಸಹಕಾರ ಸಂಘಗಳ ಉಪ ನಿಬಂಧಕರು (ವಲಯ-4) ಇವರಿಗೆ ವರ್ಗಾಯಿಸಿರುವ ಸಹಕಾರ ಸಂಘಗಳ ಜಂಟಿ ನಿಬಂಧಕರ ಆದೇಶ ಪ್ರಶ್ನಿಸಿ ಅಖಿಲ ಕರ್ನಾಟಕ ಮಹಾಸಭಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ವಿಚಾರಣೆಗೆ ಮಧ್ಯಂತರ ತಡೆ ನೀಡಿತಲ್ಲದೆ, ಅರ್ಜಿ ಸಂಬಂಧ ಸಹಕಾರ ಇಲಾಖೆ, ಸಹಕಾರ ಸಂಘಗಳ ಜಂಟಿ ನಿಬಂಧಕರು ಬೆಂಗಳೂರು ಪ್ರಾಂತ, ಉಪ ನಿಬಂಧಕರು-ವಲಯ 3 ಮತ್ತು ಉಪ ನಿಬಂಧಕರು ವಲಯ-4 ಇವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿತು.
ಪ್ರಕರಣವೇನು?
ಮಹಾಸಭಾದ ಆಡಳಿತ ಮಂಡಳಿಗೆ ಬೈಲಾ ಪ್ರಕಾರ 2025ರ ಏಪ್ರಿಲ್ 13ಕ್ಕೆ ಚುನಾವಣೆ ನಡೆದಿದ್ದು, ಬೈಲಾ ಉಲ್ಲಂಘನೆ ಆಗಿದೆ ಎಂದು ಕೆ. ಮೋಹನ್ ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು. ಈ ಸಂಬಂಧ ವಲಯ 3 ಉಪನಿಬಂಧಕರು ಮಹಾಸಭಾಗೆ ನೋಟಿಸ್ ನೀಡಿದ್ದರು. ಅದಕ್ಕೆ ಮಹಾಸಭಾದಿಂದ 2025ರ ಡಿಸೆಂಬರ್ 17ರಂದು ವಿವರವಾದ ಉತ್ತರ ಕೊಡಲಾಗಿತ್ತು.
ಈ ಮಧ್ಯೆ, ಮೋಹನ್ ಅವರ ಮನವಿ ಆಧರಿಸಿ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 25ರಡಿ ಉಪ ನಿಬಂಧಕರು ವಲಯ -4 ಇವರನ್ನು ತನಿಖಾಧಿಕಾರಿಯನ್ನಾಗಿ ಜಂಟಿ ನಿಬಂಧಕರು ನೇಮಿಸಿದ್ದರು. ಅದರಂತೆ ಉಪ ನಿಬಂಧಕರು ವಲಯ-4 ಮಹಾಸಭಾಗೆ ನೋಟಿಸ್ ಜಾರಿಗೊಳಿಸಿ 2026ರ ಫೆಬ್ರವರಿ 25ರೊಳಗೆ ಉತ್ತರಿಸುವಂತೆ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಮಹಾಸಭಾ ಹೈಕೋರ್ಟ್ ಮೆಟ್ಟಿಲೇರಿದೆ.
ಜಂಟಿ ನಿಬಂಧಕರು ಹಾಗೂ ಉಪ ನಿಬಂಧಕರ ಕ್ರಮ ಕಾನೂನುಬಾಹಿರ ಮತ್ತು ಏಕಪಕ್ಷೀಯವಾಗಿದೆ. ಅಧಿಕಾರ ವ್ಯಾಪ್ತಿ ಇಲ್ಲದೆ, ಸಹಜ ನ್ಯಾಯ ತತ್ವ ಉಲ್ಲಂಘಿಸಿ ಜಂಟಿ ನಿಬಂಧಕರು 2026ರ ಫೆಬ್ರವರಿ 9ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ವಿಚಾರಣಾ ಪ್ರಕ್ರಿಯೆ ಕಾನೂನು ಬಾಹಿರವೆಂದು ಘೋಷಿಸಬೇಕು. ಅರ್ಜಿಯ ಅಂತಿಮ ಇತ್ಯರ್ಥದವರೆಗೆ ಮಹಾಸಭಾದ ವಿರುದ್ಧದ ವಿಚಾರಣೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.


Comments (0)