ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕಾಗಿದ್ದು ಆದ್ಯತೆ ಮೇರೆಗೆ ಮಂಜೂರು ಮಾಡಬೇಕು; ಹೈಕೋರ್ಟ್
- by Ramya B T
- February 25, 2026
- 104 Views
ಬೆಂಗಳೂರು: ಮಕ್ಕಳ ಆರೈಕೆ ರಜೆ (ಸಿಸಿಎಲ್) ಎನ್ನುವುದು ಮಗುವಿನ ಹಕ್ಕು. ಬೇರೆ ಎಲ್ಲ ರಜೆಗಳನ್ನು ನೀಡುವ ವಿವೇಚನಾ ಅಧಿಕಾರ ಉದ್ಯೋಗದಾತರಿಗೆ ಇದೆಯಾದರೂ, ಸಿಸಿಎಲ್ ಕೋರಿಕೆ ಬಂದಾಗ ನಿರಾಕರಿಸದೆ ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಕೇಂದ್ರ ಸರ್ಕಾರದ ಸೆಂಟರ್ ಫಾರ್ ಡೆವಲಪಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ನಲ್ಲಿ (ಸಿಡಾಕ್) ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಯೊಬ್ಬರಿಗೆ ಸಿಸಿಎಲ್ ಮಂಜೂರು ಮಾಡುವಂತೆ ನಿರ್ದೇಶಿಸಿದೆ.
ಕವಿತಾ ವಡ್ಡೆ ಎಂಬುವರಿಗೆ ಮಕ್ಕಳ ಆರೈಕೆ ರಜೆ ನೀಡುವಂತೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಫೆಬ್ರವರಿ 5ರಂದು ನೀಡಿದ್ದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ತಾಯಿಯ ರಜೆ ನಿರಾಕರಿಸಿದರೆ ಅದು ಮಕ್ಕಳ ಮೇಲೆ ಒತ್ತಡವಾಗಬಹುದು. ಆದ್ದರಿಂದ, ಸಿಸಿಎಲ್ ಮಗುವಿನ ಹಕ್ಕೆಂದು ಅಭಿಪ್ರಾಯಪಟ್ಟು ಸಿಎಟಿ ಆದೇಶವನ್ನು ಎತ್ತಿಹಿಡಿದಿರುವ ನ್ಯಾಯಪೀಠ, ಕವಿತಾ ವಡ್ಡೆ ಅವರಿಗೆ ಫೆಬ್ರವರಿ 6ರಿಂದ ಅನ್ವಯವಾಗುವಂತೆ ಮೇ 20ರವರೆಗೆ ಸಿಸಿಎಲ್ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಉದ್ಯೋಗಿಗಳಿಗೆ ಇತರ ಎಲ್ಲ ರಜೆಗಳನ್ನು ಮಂಜೂರು ಮಾಡುವುದು ಅಥವಾ ಬಿಡುವುದು ಉದ್ಯೋಗದಾತರ ವಿವೇಚನೆಗೆ ಬಿಟ್ಟಿದ್ದು. ಆದರೆ, ಮಕ್ಕಳ ಆರೈಕೆ ರಜೆಯ ವಿಚಾರ ಬಂದಾಗ ಅದರಲ್ಲಿ ವಿವೇಚನೆ ಅಧಿಕಾರದ ಪ್ರಶ್ನೆಯೇ ಇಲ್ಲ. ಅದು ಮಕ್ಕಳ ಆರೈಕೆಗೆಂದೇ ಮೀಸಲಿರುವುದರಿಂದ ಅದನ್ನು ನೀಡಲೇಬೇಕಾಗುತ್ತದೆ. ಮಕ್ಕಳಿಗೆ ತಾಯಿಯ ಆರೈಕೆ ಬೇಕಾಗುತ್ತದೆ. ಆದ್ದರಿಂದ, ತಾಯಿ ಸಿಸಿಎಲ್ ಅನ್ನು ತನ್ನ ಹಕ್ಕನ್ನಾಗಿ ಕೋರಬಹುದು ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣವೇನು?
ಕೇಂದ್ರ ಸರ್ಕಾರಿ ನಿಯಮದಲ್ಲಿ ಅಪ್ರಾಪ್ತ ಮಕ್ಕಳ ಆರೈಕೆಗಾಗಿ ಸೇವಾವಧಿಯಲ್ಲಿ 730 ದಿನ ಸಿಸಿಎಲ್ ರಜೆ ಪಡೆಯಲು ಮಹಿಳಾ ಉದ್ಯೋಗಿ ಮತ್ತು ಒಂಟಿ ಪೋಷಕ ಪುರುಷ ಉದ್ಯೋಗಿಗೆ ಅವಕಾಶವಿದೆ. ಅದರಂತೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಡಾಕ್ನಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ವಡ್ಡೆ ತಮ್ಮ ಮಗನ 10ನೇ ತರಗತಿ ಪರೀಕ್ಷೆಗೆ ನೆರವಾಗಲು 5 ತಿಂಗಳು ಸಿಸಿಎಲ್ ಕೋರಿದ್ದರು. ಆದರೆ, ಆ ಮನವಿ ನಿರಾಕರಿಸಿ ಕೇವಲ 18 ದಿನ ಮಾತ್ರ ರಜೆ ನೀಡಲಾಗಿತ್ತು. ಇದನ್ನು ಕವಿತಾ ಸಿಎಟಿಯಲ್ಲಿ ಪ್ರಶ್ನಿಸಿದ್ದರು.
ವಿಚಾರಣೆ ನಡೆಸಿದ್ದ ಸಿಎಟಿಯ ನ್ಯಾಯಾಂಗ ಸದಸ್ಯೆ ಎಸ್. ಸುಜಾತಾ ಹಾಗೂ ಆಡಳಿತ ಸದಸ್ಯ ಡಾ. ಸಂಜೀವ್ ಕುಮಾರ್ ಅವರಿದ್ದ ಪೀಠ ಕವಿತಾ ಅವರಿಗೆ ಸಿಸಿಎಲ್ ರಜೆ ನೀಡಲೇಬೇಕೆಂದು ಫೆ.5ರಂದು ಆದೇಶಿಸಿತ್ತು. ಅಲ್ಲದೆ, ಸಂಸ್ಥೆಯಲ್ಲಿ ಮಾನವ ಸಂಪನ್ಮೂಲದ ಕೊರತೆ ಇದೆ ಎಂಬ ಸಂಸ್ಥೆಯ ವಾದವನ್ನು ಒಪ್ಪಲಾಗದು. ಸಿಸಿಎಲ್ ಇರುವುದೇ ಮಕ್ಕಳ ಆರೈಕೆಗೆ, ಅರ್ಜಿದಾರರು ಎಲ್ಲ ರೀತಿಯಲ್ಲೂ ಸಿಸಿಎಲ್ ಪಡೆಯಲು ಅರ್ಹರಾಗಿದ್ದಾರೆ. ಅರ್ಜಿದಾರರ ಪುತ್ರ 10ನೇ ತರಗತಿಯಲ್ಲಿ ಓದುತ್ತಿದ್ದು, ಇದು ಮಗುವಿನ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಿದೆ. ಆಡಳಿತಾತ್ಮಕ ತೊಂದರೆ ಮತ್ತು ಮಾನವ ಸಂಪನ್ಮೂಲ ಕೊರತೆ ಕಾರಣಗಳಿಂದ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಳ್ಳಲಾಗದು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ಕವಿತಾ ಪರ ಪರ ವಾದ ಮಂಡಿಸಿದ್ದ ವಕೀಲ ಕೆ. ಸತೀಶ್ ಭಟ್, ಅಡ್ವಾನ್ಸಿಂಗ್ ಕಂಪ್ಯೂಟಿಂಗ್ ಕೇಂದ್ರದ ಉದ್ಯೋಗಿಯಾರುವ ಕವಿತಾ ಅವರು 5 ತಿಂಗಳು ಸಿಸಿಎಲ್ ಕೋರಿದರೆ ಕೇವಲ 18 ದಿನಗಳ ರಜೆ ನಿಡಲಾಗಿದೆ. ಇದು ಕೇಂದ್ರೀಯ ನಾಗರಿಕ ಸೇವಾ ರಜೆ ನಿಯಮ 43ಸಿ ಉಲ್ಲಂಘನೆಯಾಗಿದ್ದು, ಅರ್ಜಿದಾರರ ಹಕ್ಕಿಗೆ ಧಕ್ಕೆಯಾಗಿದೆ. ಸದ್ಯ ಪರೀಕ್ಷೆ ನಡೆಯುತ್ತಿರುವುದರಿಂದ ಅರ್ಜಿದಾರರು ರಜೆಯ ವಿಚಾರಕ್ಕೆ ಒತ್ತಡದಲ್ಲಿದ್ದಾರೆ. ಅಪ್ರಾಪ್ತ ಮಕ್ಕಳ ಹಕ್ಕು ರಕ್ಷಿಸಲು ಈ ನಿಯಮವನ್ನು ರೂಪಿಸಲಾಗಿದೆ. ಮಗುವಿನ ಅಭಿವೃದ್ದಿಗೆ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಆದ್ದರಿಂದ, ಫೆಬ್ರವರಿ 6 ರಿಂದ ಮೇ 20ರವರೆಗೆ ರಜೆ ನೀಡಲು ಸಿಎಟಿ ಆದೇಶಿಸಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
Related Articles
Thank you for your comment. It is awaiting moderation.



Comments (0)