ಸಿವಿಲ್ ದಾವೆ ಬಾಕಿ ಇದ್ದ ಮಾತ್ರಕ್ಕೆ ಕ್ರಿಮಿನಲ್ ತನಿಖೆಗೆ ಅಡ್ಡಿಯಾಗದು; ಎಫ್ಐಆರ್ ರದ್ದತಿಗೆ ಹೈಕೋರ್ಟ್ ನಕಾರ
- by Jagan Ramesh
- January 31, 2026
- 84 Views
ಬೆಂಗಳೂರು: ಸಿವಿಲ್ ಮೊಕದ್ದಮೆಗಳು ಬಾಕಿ ಇದ್ದ ಮಾತ್ರಕ್ಕೆ ಗಂಭೀರ ಮತ್ತು ಸಂಜ್ಞೇಯ (ಕಾಗ್ನೈಜಬಲ್) ಅಪರಾಧಗಳ ತನಿಖೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಫೋರ್ಜರಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಮೌಲ್ಯದ ಜಮೀನು ಕಬಳಿಸಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದೆ.
ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ವೆಂಕಟ ರಾಮ ನಾಯ್ಡು ಕೋಲ (8ನೇ ಆರೋಪಿ) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಜಮೀನಿನ ನಿಜವಾದ ಮಾಲೀಕರ ಸೋಗಿನಲ್ಲಿ ವಂಚನೆ ಎಸಗಿದವರು ಯಾರು ಎಂಬ ಸತ್ಯ ತಿಳಿಯಲು ತನಿಖೆ ಅತ್ಯಗತ್ಯವಾಗಿದೆ. ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇರುವ ದಾವೆಯು ಅರ್ಜಿದಾರರ ವಿರುದ್ಧದ ತನಿಖೆಯನ್ನು ಅಡ್ಡಿಪಡಿಸುವುದಿಲ್ಲ. ವ್ಯಕ್ತಿಯ ಸೋಗು ಹಾಗೂ ಫೋರ್ಜರಿಯಂಥ ಗಂಭೀರ ಅಪರಾಧಗಳ ತನಿಖೆಗೆ ಸಿವಿಲ್ ದಾವೆಗಳು ಅಡ್ಡಿಯಾಗುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ತನಿಖಾ ಸಂಸ್ಥೆಯು ಕಾನೂನಿನ ಪ್ರಕಾರ ಕ್ರಮ ಕೈಗೊಂಡು, ಶೀಘ್ರ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದು ನಿರ್ದೇಶಿಸಿದೆ.
ಪ್ರಕರಣವೇನು?
ದೂರುದಾರೆ ಆರ್. ರಾಧಾ (ಪವರ್ ಆಫ್ ಅಟಾರ್ನಿ ವೆಂಕಟಪ್ಪ ಕೆ. ಮೂಲಕ ದೂರು ದಾಖಲಿಸಿರುವವರು) ಅವರ ಪತಿ ಎಸ್. ಕೃಷ್ಣನ್ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಬಂಡಾಪುರ ಗ್ರಾಮದ 3 ವಿವಿಧ ಸರ್ವೆ ನಂಬರ್ಗಳಲ್ಲಿ 13 ಎಕರೆ 29 ಗುಂಟೆ ಜಮೀನುಗಳನ್ನು 1978ರ ಅಕ್ಟೋಬರ್ 6ರಂದು ಕ್ರಯ ಪತ್ರದ ಮೂಲಕ ಖರೀದಿಸಿದ್ದರು. ಕೃಷ್ಣನ್ ಅವರು 1986ರ ಮೇ 29ರಂದು ಮೃತಪಟ್ಟಿದ್ದರು. ಯಾವುದೇ ವಿಲ್ ಮಾಡದ ಕಾರಣ ಎಲ್ಲ ಆಸ್ತಿಗಳಿಗೆ ಅವರ ಪತ್ನಿ ರಾಧಾ ಅವರೇ ಏಕೈಕ ಉತ್ತರಾಧಿಕಾರಿಯಾಗಿದ್ದರು. ಈ ಜಮೀನುಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ರಾಧಾ ಅವರ ಹೆಸರಿಗೆ ವರ್ಗಾವಣೆ (ಮ್ಯುಟೇಶನ್) ಆಗಿತ್ತು. ಪತಿಯ ಮರಣದ ನಂತರ ತಮಿಳುನಾಡಿನ ತವರು ಮನೆಗೆ ತೆರಳಿದ್ದ ರಾಧಾ ಆಗಾಗ ಬೆಂಗಳೂರಿನಲ್ಲಿರುವ ಜಮೀನುಗಳಿಗೆ ಭೇಟಿ ನೀಡುತ್ತಿದ್ದರು.
ಈ ನಡುವೆ ರಾಧಾ ಅವರ ಅನುಪಸ್ಥಿತಿಯಲ್ಲಿ ಕೆಲ ಆರೋಪಿಗಳು, ನಕಲಿ ದಾಖಲೆಗಳನ್ನು ಸೃಷ್ಟಿ ಜಮೀನು ಲಪಟಾಯಿಸಲು ಸಂಚು ರೂಪಿಸಿದ್ದಾರೆ. ಆರೋಪಿಗಳದ್ದೇ ಮೂರು ಬೇರೆ ಬೇರೆ ಗುಂಪುಗಳಿದ್ದು, ರಾಧಾ ಎಂಬ ಹೆಸರಿನ ನಾಲ್ವರು ಉಪ ನೋಂದಣಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಿದ್ದಾರೆ. ಈ ಮೂಲಕ ಫೋರ್ಜರಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಸಿವಿಲ್ ನ್ಯಾಯಾಲಯದಲ್ಲೂ ದಾವೆ ಹೂಡಲಾಗಿತ್ತು. ಆರೋಪಿಗಳ ಎರಡನೇ ಗುಂಪಿನಲ್ಲಿದ್ದ ಅರ್ಜಿದಾರರನ್ನು ಪೊಲೀಸರು 8ನೇ ಆರೋಪಿಯನ್ನಾಗಿಸಿದ್ದರು. ಇದರಿಂದ, ಪ್ರಕರಣದ ಎಫ್ಐಆರ್ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಾದ-ಪ್ರತಿವಾದ:
ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ್ ಅವರು, ಪ್ರಕರಣ ಸಂಪೂರ್ಣವಾಗಿ ಸಿವಿಲ್ ಸ್ವರೂಪದ್ದಾಗಿದೆ. ದೂರುದಾರರಾಗಿರುವ ವೆಂಕಟಪ್ಪ (ವಿಶೇಷ ಪವರ್ ಆಫ್ ಅಟಾರ್ನಿ) ಅವರು ಸಿವಿಲ್ ಕೋರ್ಟ್ನಲ್ಲಿಯೂ ದಾವೆ ಹೂಡಿದ್ದಾರೆ. ಸಿವಿಲ್ ಪ್ರಕರಣವನ್ನು ಕ್ರಿಮಿನಲ್ ಪ್ರಕರಣವೆಂದು ಬಿಂಬಿಸಲಾಗಿದ್ದು, ಅದರಲ್ಲಿ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದರಲ್ಲದೆ, ಈ ಸಂಬಂಧ ರಾಜೇಶ್ಭಾಯ್ ಮುಲ್ಜಿಭಾಯ್ ಪಟೇಲ್ ಹಾಗೂ ಗುಜರಾತ್ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಪೀಠದ ಮುಂದಿಟ್ಟಿದ್ದರು.
ವೆಂಕಟಪ್ಪ ಪರ ಹಿರಿಯ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಈ ಪ್ರಕರಣದಲ್ಲಿ ದೊಡ್ಡಮಟ್ಟದಲ್ಲಿ ವಂಚನೆ ನಡೆದಿದ್ದು, ರಾಧಾ ಎಂಬ ಹೆಸರಿನ ನಾಲ್ವರು ಸಬ್ ರಿಜಿಸ್ಟ್ರಾರ್ ಮುಂದೆ ಹಾಜರಾಗಿ ಕ್ರಯಪತ್ರಕ್ಕೆ ಸಹಿ ಹಾಕಿದ್ದಾರೆ. ನಿಜವಾದ ರಾಧಾ ಅವರು ವೆಂಕಟಪ್ಪ ಅವರಿಗೆ ವಿಶೇಷ ಪವರ್ ಆಫ್ ಅಟಾರ್ನಿ ನೀಡಿದ್ದು, ಅವರು ಎಂದಿಗೂ ಸಬ್ ರಿಜಿಸ್ಟ್ರಾರ್ ಮುಂದೆ ಹಾಜರಾಗಿಯೇ ಇಲ್ಲ. ರಾಧಾ ಹಾಗೂ ಅವರ ಕುಟುಂಬ ಸದಸ್ಯರ ಸೋಗಿನಲ್ಲಿ ಎಲ್ಲ ಆರೋಪಿಗಳೂ ಒಟ್ಟಾಗಿ ವಂಚನೆಯಿಂದ ಹೆಚ್ಚಿನ ಮೌಲ್ಯದ ಭೂಮಿಯ ದಾಖಲೆ ಪತ್ರಗಳನ್ನು ಸೃಷ್ಟಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ನಿಜವಾದ ಅಪರಾಧಿ ಯಾರು?
ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳನ್ನು ಹಾಲಿ ಪ್ರಕರಣಕ್ಕೆ ಅನ್ವಯಿಸಿದಾಗ, ಇಲ್ಲಿನ ಆರೋಪಗಳು ಕೇವಲ ಒಪ್ಪಂದದ ಉಲ್ಲಂಘನೆ ಅಥವಾ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ವಂಚನೆ, ವ್ಯಕ್ತಿಯ ಸೋಗು (Impersonation), ನಕಲಿ ದಾಖಲೆ ಸೃಷ್ಟಿ ಹಾಗೂ ವ್ಯವಸ್ಥಿತ ವಂಚನೆಯ ವ್ಯಾಪ್ತಿಗೆ ಒಳಪಡುತ್ತದೆ. ನಿಜವಾದ ಮಾಲೀಕನ ಅನುಪಸ್ಥಿತಿಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ, ಕುಟುಂಬದ ಗುರುತುಗಳನ್ನು ಹೇಗೆ ಸೃಷ್ಟಿಸಲಾಗಿದೆ ಮತ್ತು ನಕಲಿ ಸಹಿ ಹಾಗೂ ವ್ಯಕ್ತಿಗಳ ಮೂಲಕ ಸರ್ಕಾರಿ ಕಚೇರಿಗಳನ್ನು ಹೇಗೆ ದಾರಿತಪ್ಪಿಸಲಾಗಿದೆ ಎಂಬುದನ್ನು ಪ್ರಕರಣದ ದೂರು ವಿವರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿ ಛದ್ಮವೇಷಧಾರಿಗಳು ಅಥವಾ ಅಪರಾಧಿಗಳು ಯಾರು ಎಂಬುದನ್ನು ತಿಳಿಯಲು ಸಮಗ್ರ ತನಿಖೆಯ ಅಗತ್ಯವಿದೆ. ಇಂತಹ ತನಿಖೆಯನ್ನು ಆರಂಭದಲ್ಲೇ ತಡೆ ಹಿಡಿಯುವುದರಿಂದ ಅವಧಿಗೂ ಮುನ್ನವೇ ನ್ಯಾಯದ ಬಾಗಿಲು ಮುಚ್ಚಿದಂತೆ ಹಾಗೂ ವಂಚನೆಯ ಗಂಭೀರ ಆರೋಪಗಳಿಗೆ ಉತ್ತರವಿಲ್ಲದ ಹಾಗೆ ಮಾಡಿದಂತಾಗುತ್ತದೆ. ಅರ್ಜಿದಾರರ ಪರ ವಕೀಲರು ಉಲ್ಲೇಖಿಸಿರುವ ತೀರ್ಪು ಈ ಪ್ರಕರಣದ ಸನ್ನಿವೇಶ ಮತ್ತು ವಾಸ್ತವಾಂಶಗಳಿಗೆ ಭಿನ್ನವಾಗಿದೆ. ಆ ತೀರ್ಪು ಚೆಕ್ ಅಮಾನ್ಯ ಮತ್ತು ಅದಕ್ಕೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ನೀಡಲಾದ ನಿರ್ಧಾರವಾಗಿದ್ದು, ಅದನ್ನು ಹಾಲಿ ಪ್ರಕರಣಕ್ಕೆ ಸಂಪೂರ್ಣವಾಗಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿದೆ.
Related Articles
Thank you for your comment. It is awaiting moderation.


Comments (0)