ಮಕ್ಕಳಿಗೆ ಬಿಸಿ ಚಾಕುವಿನಿಂದ ಬರೆಯಿಟ್ಟು, ಹಲ್ಲೆ ಆರೋಪ; ತಾಯಿ, ಮಲತಂದೆ ಸೇರಿ ನಾಲ್ವರಿಗೆ ನಿರೀಕ್ಷಣಾ ಜಾಮೀನು

ಬೆಂಗಳೂರು: ಮಕ್ಕಳ ಕೈ-ಕಾಲು ಹಾಗೂ ಬೆನ್ನಿಗೆ ಬಿಸಿ ಚಾಕುವಿನಿಂದ ಬರೆಯಿಟ್ಟ ಹಾಗೂ ಬಾಸುಂಡೆ ಬರುವಂತೆ ಕೋಲಿನಿಂದ ಹೊಡೆದ ಆರೋಪ ಪ್ರಕರಣದಲ್ಲಿ‌ ಮಕ್ಕಳ ತಾಯಿ, ಮಲತಂದೆ, ಅಜ್ಜ-ಅಜ್ಜಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಚಾಮರಾಜನಗರದ ಜಿಲ್ಲೆಯ ಗುಂಡ್ಲುಪೇಟೆಯ ಕಳ್ಳೀಪುರ ಗ್ರಾಮದ ನಿವಾಸಿಗಳಾದ ಮಕ್ಕಳ ತಾಯಿ ರಂಜಿತಾ, ಮಲತಂದೆ ಕೆಂಡಗಣ್ಣ ಸ್ವಾಮಿ, ಆತನ ತಂದೆ ಸ್ವಾಮಿ ಮತ್ತು ರಂಜಿತಾ ತಾಯಿ ಮಹದೇವಮ್ಮ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಆರೋಪಿಗಳು ತಲಾ 50 ಸಾವಿರ ರೂ. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರ ಶ್ಯೂರಿಟಿ ಒದಗಿಸಬೇಕು.‌ ಸಾಕ್ಷ್ಯಾಧಾರಗಳನ್ನು ತಿರುಚಲು ಅಥವಾ ನಾಶಪಡಿಸಲು ಯತ್ನಿಸಬಾರದು. ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕು. ನ್ಯಾಯಾಲಯದ ಪೂರ್ವಾನುಮತಿ ಪಡೆಯದೇ ಚಾಮರಾಜನಗರ ಜಿಲ್ಲೆ ತೊರೆಯಬಾರದು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಅರ್ಜಿದಾರರು ಈಗಾಗಲೇ ತನಿಖಾಧಿಕಾರಿಯ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದು, ತನಿಖೆಗೆ ಸಹಕರಿಸಿದ್ದಾರೆ‌. ತನಿಖಾಧಿಕಾರಿ ತನಿಖೆಪೂರ್ಣಗೊಳಿಸಿ ಸಕ್ಷಮ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪ ಪಟ್ಟಿ ಪ್ರಕಾರ ಅರ್ಜಿದಾರರ ಬಂಧನ ಅಗತ್ಯವಿರುವುದು ಕಂಡುಬರುತ್ತಿಲ್ಲ. ಆದ್ದರಿಂದ, ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?
ರಂಜಿತಾ ಮೊದಲ ಪತಿ ಮೃತ ನಂಜೇಗೌಡ ಅವರ ತಂದೆ ಮಾದೇಗೌಡ‌ ನೀಡಿದ ಮಾಹಿತಿ ಆಧರಿಸಿ ಚಾಮರಾನಗರ ಜಿಲ್ಲೆಯ ಮಕ್ಕಳ ಸಂರಕ್ಷಣಾ ಘಟಕದ ಸಮನ್ವಯ ಅಧಿಕಾರಿ ಎಲ್‌. ಸಿದ್ದರಾಜು 2025ರ ಡಿಸೆಂಬರ್ 4ರಂದು ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಎಫ್‌ಐಆರ್ ಪ್ರಕಾರ, ರಂಜಿತಾ ತಮ್ಮ ಮೊದಲ ಪತಿ ನಂಜೇಗೌಡ ಅವರಿಂದ ಒಂದು ಗಂಡು (ಸದ್ಯ 6 ವರ್ಷ), ಒಂದು ಹೆಣ್ಣು (4 ವರ್ಷ) ಮಗುವನ್ನು ಪಡೆದಿದ್ದರು. ಮೊದಲ ಪತಿ 2024ರ ಮಾರ್ಚ್‌ನಲ್ಲಿ ನಿಧನರಾದ ಬಳಿಕ ಕಳ್ಳೀಪುರ ಗ್ರಾಮದ ಕೆಂಡಗಣ್ಣ ಸ್ವಾಮಿ ಅವರನ್ನು ಎರಡನೇ ಮದುವೆಯಾಗಿದ್ದರು. ದಂಪತಿ ಕಳ್ಳೀಪುರದಲ್ಲೇ ಮಕ್ಕಳೊಂದಿಗೆ ನೆಲೆಸಿದ್ದರು.

ಕೆಂಡಗಣ್ಣ ಸ್ವಾಮಿ 2025ರ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರವರ ಅವಧಿಯಲ್ಲಿ ಮದ್ಯ ಸೇವಿಸಿ ಬಂದು ಮಕ್ಕಳಿಗೆ ಹೊಡೆಯುತ್ತಿದ್ದರು. ಕೈ-ಕಾಲು, ಬೆನ್ನಿನ ಮೇಲೆ ಬಿಸಿ ಚಾಕುವಿನಿಂದ ಬರೆ ಇಟ್ಟಿದ್ದಲ್ಲದೆ, ತಲೆಗೆ ಹೊಡೆದು, ಕಾಲಿನಿಂದ ಒದ್ದಿದ್ದಾರೆ. ಮೇಲಕ್ಕೆ ಎತ್ತಿ ಕುಕ್ಕಿ, ಬೆನ್ನಿಗೆ ಬಾಸುಂಡೆ ಬರುವಂತೆ ಕೋಲಿನಿಂದ ಹೊಡೆದಿದ್ದಾರೆ.‌ ಕೆಂಡಗಣ್ಣ ತಂದೆ ಸ್ವಾಮಿ ಮದ್ಯಪಾನ ಮಾಡಿ ಬಂದು ಮಕ್ಕಳನ್ನು ಬಲವಂತವಾಗಿ ತಮ್ಮ ಬಳಿ ಮಲಗಿಸಿಕೊಳ್ಳುತ್ತಿದ್ದರು.

ಮತ್ತೊಬ್ಬ ಆರೋಪಿ ಮಹದೇವಮ್ಮ ಮಕ್ಕಳನ್ನು ತಾಯಿ ರಂಜಿತಾ ಜತೆ ಇರಲು ಬಿಡದೆ, ಹೊಡೆದು ಬಲವಂತವಾಗಿ ತಮ್ಮ ಬಳಿ ಮಲಗಿಸಿಕೊಳ್ಳುತ್ತಿದ್ದರು ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿತ್ತು. ಆರೋಪಿಗಳಿಗೆ ಚಾಮರಾಜನಗರದ ಜಿಲ್ಲಾ ಪ್ರಧಾನ ಸಿವಿಲ್ (ಹಿರಿಯ) ಮತ್ತು ಸಿಜೆಎಂ ನ್ಯಾಯಾಲಯ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು 2026ರ ಜನವರಿ 12ರಂದು ವಜಾಗೊಳಿಸಿತ್ತು. ಇದರಿಂದ, ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment