ಸ್ಥಳೀಯ ಪರಿಶೀಲನಾ‌ ಸಮಿತಿಯಿಂದ ಸೆನೆಟ್ ಸದಸ್ಯರು ಹೊರಗೆ; ಆರ್‌ಜಿಯುಎಚ್‌ಎಸ್ ಸಿಂಡಿಕೇಟ್ ಸಭೆ ನಿರ್ಣಯ ರದ್ದು

ಬೆಂಗಳೂರು: ಕಾಲೇಜುಗಳ ಮಾನ್ಯತೆ ಮುಂದುವರಿಕೆಗೆ ಸಂಬಂಧಿಸಿದ ಸ್ಥಳೀಯ ಪರಿಶೀಲನಾ ಸಮಿತಿಯಿಂದ (ಎಲ್‌ಐಸಿ) ಸೆನೆಟ್‌ ಸದಸ್ಯರನ್ನು ಹೊರಗಿಡುವ ಕುರಿತು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್‌) ಸಿಂಡಿಕೇಟ್‌ ಸಭೆ 2024ರಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಸಿಂಡಿಕೇಟ್ ಸಭೆಯ ನಿರ್ಣಯ ಪ್ರಶ್ನಿಸಿ ಜೆ.ನಂದೀಶ್‌ ಮತ್ತಿತರ ಆರ್‌ಜಿಯುಎಚ್‌ಎಸ್‌ ಸೆನೆಟ್‌ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಇ.ಎಸ್‌. ಇಂದಿರೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಶಾಸನವನ್ನು ತಿದ್ದುಪಡಿ ಮಾಡಲು ಅಥವಾ ರದ್ದುಗೊಳಿಸಲು, ಸಿಂಡಿಕೇಟ್‌ ತನ್ನ ಪ್ರಸ್ತಾವನೆಯನ್ನು ಒಪ್ಪಿಗೆ ನೀಡುವ ಅಧಿಕಾರ ಹೊಂದಿರುವ ಸೆನೆಟ್‌ಗೆ ಸಲ್ಲಿಸಬೇಕು. ನಂತರ ಸೆನೆಟ್‌ನ ಶಿಫಾರಸಿನೊಂದಿಗೆ ಅಂತಹ ನಿರ್ಣಯವನ್ನು ಒಪ್ಪಿಗೆಗಾಗಿ ರಾಜ್ಯ ಸರ್ಕಾರದ ಮುಂದಿಡಬೇಕಾಗುತ್ತದೆ. ಆದರೆ, ಇಲ್ಲಿ ಆ ನಿಯಮ ಪಾಲನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ನಿರ್ಣಯವನ್ನು ರದ್ದುಪಡಿಸಿ ಆದೇಶಿಸಿದೆ.

ಕಾಲೇಜುಗಳ ಮಾನ್ಯತೆ ಮುಂದುವರಿಸಲು ಸಹ, ಸ್ಥಳೀಯ ಪರಿಶೀಲನಾ ಸಮಿತಿ ಸದಸ್ಯರು ವಿವಿಧ ಅವಶ್ಯಕತೆಗಳಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ಕಡ್ಡಾಯ ನಿಬಂಧನೆಗಳ ಅನುಸರಣೆಯಲ್ಲಿ ಯಾವುದೇ ಲೋಪವಿದ್ದರೂ ಸಹ, ಸಂಬಂಧಪಟ್ಟ ಕಾಲೇಜಿನ ಮಾನ್ಯತೆಯನ್ನು ಹಿಂಪಡೆದುಕೊಳ್ಳುವುದು ಸಮಿತಿಯ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಕಾಲೇಜುಗಳ ಮಾನ್ಯತೆ ಮುಂದುವರಿಸಲು ಹಾಗೂ ಹೊಸ ಕಾಲೇಜಿಗೆ ಮಾನ್ಯತೆ ನೀಡುವ ಸಂಪೂರ್ಣ ಕಾರ್ಯವಿಧಾನವನ್ನು ಎಲ್‌ಐಸಿ ಅನುಸರಿಸಬೇಕು. ಈ ವಿಷಯದ ದೃಷ್ಟಿಯಿಂದ, ಸೆನೆಟ್‌ ಸದಸ್ಯರನ್ನು ಹೊರಗಿಡುವುದು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಅಡಿಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಆಕ್ಷೇಪವೇನು?
ಆರ್‌ಜಿಯುಎಚ್‌ಎಸ್‌ ಕಾಯ್ದೆಯಡಿಯಲ್ಲಿ ಶಾಸನಗಳನ್ನು ರೂಪಿಸಲು, ತಿದ್ದುಪಡಿ ಮಾಡಲು ಅಥವಾ ರದ್ದುಗೊಳಿಸಲು ಅಧಿಕಾರ ಹೊಂದಿರುವ ಸೆನೆಟ್‌ನ ಒಪ್ಪಿಗೆಯನ್ನು ಸಿಂಡಿಕೇಟ್‌ ಪಡೆದಿಲ್ಲ. ಆದ್ದರಿಂದ, ಸಿಂಡಿಕೇಟ್‌ ಕೈಗೊಂಡಿರುವ ನಿರ್ಣಯ ಊರ್ಜಿತವಾಗುವುದಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

Related Articles

Comments (0)

Leave a Comment