‘ಪಾಕಿಸ್ತಾನ್.. ಪಾಕಿಸ್ತಾನ್’ ಘೋಷಣೆ; ಮುಸ್ಲಿಂ ವ್ಯಕ್ತಿಯ ಗುಂಪು ಹತ್ಯೆ ಪ್ರಕರಣದ 3ನೇ ಆರೋಪಿಗೆ ಹೈಕೋರ್ಟ್ ಜಾಮೀನು
- by LegalSamachar
- May 7, 2026
- 2 Views
ಬೆಂಗಳೂರು: ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ‘ಪಾಕಿಸ್ತಾನ್ ಪಾಕಿಸ್ತಾನ್’ ಎಂದು ಕೂಗುತ್ತಾ ಮೈದಾನದ ಒಳಗೆ ನುಗ್ಗಿದನೆಂಬ ಕಾರಣಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬನ ಗುಂಪು ಹತ್ಯೆ ನಡೆಸಿದ ಆರೋಪ ಪ್ರಕರಣದ ಮೂರನೇ ಆರೋಪಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಾಮಂಜೂರು-ತಿರುವೈಲ್‌ನ ಮಂಜ ಅಲಿಯಾಸ್ ಮಂಜುನಾಥ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಗುರುವಾರ ಪುರಸ್ಕರಿಸಿದೆ.
ಅರ್ಜಿದಾರ ಆರೋಪಿ ಮಂಜುನಾಥ್ 1 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಒದಗಿಸಬೇಕು. ವಿಚಾರಣೆಯ ಎಲ್ಲ ದಿನಗಳಂದು ಸಕ್ಷಮ ನ್ಯಾಯಾಲಯಕ್ಕೆ ಹಾಜರಾಗಬೇಕು, ಪ್ರಾಸಿಕ್ಯೂಷನ್ ಸಾಕ್ಷಿ ತಿರುಚುವಂತಿಲ್ಲ. ಅನುಮತಿ ಇಲ್ಲದೇ ದಕ್ಷಿಣ ಕನ್ನಡ ಜಿಲ್ಲೆ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಹೈಕೋರ್ಟ್ ಹೇಳಿದ್ದೇನು?
ಕೃತ್ಯದಲ್ಲಿ ಯಾವುದೇ ಮಾರಕಾಸ್ತ್ರಗಳನ್ನು ಬಳಕೆ ಮಾಡಲಾಗಿಲ್ಲ ಹಾಗೂ ಇದು ಪೂರ್ವನಿಯೋಜಿತ ಕೃತ್ಯವಲ್ಲ. ಕ್ಷಣಮಾತ್ರದಲ್ಲಿ ಘಟನೆ ನಡೆದಿದೆ. ಮೃತ ಮೊಹಮ್ಮದ್ ಅಶ್ರಫ್ ಅವರ ಗಾಯಗೊಂಡ ಅಂಗಾಂಗಗಳಿಗೆ ಖಾರದ ಪುಡಿ ಹಾಕಲಾಗಿದೆ ಎಂಬುದಕ್ಕೆ ಮರಣೋತ್ತರ ವರದಿ ಅಥವಾ ತನಿಖೆಯ ಮಹಜರ್ ವೇಳೆ ಸ್ಥಳದಲ್ಲಿ ಖಾರದಪುಡಿ ಪತ್ತೆಯಾಗಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಮೂಲ ಯುಡಿಆರ್ ಆಧರಿಸಿ ವಿಚಾರಣೆ ಮುಂದುವರಿಸಲು ಪೊಲೀಸರು ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯಬಹುದಿತ್ತು. ಅರ್ಜಿದಾರನೇ ಮೊದಲಿಗೆ ಯುಡಿಆರ್ ಮಾಡಿಸಿದ್ದಾನೆ. ಅದಾಗ್ಯೂ, ಮಂಗಳೂರು ಗ್ರಾಮಾಂತರ ಪೊಲೀಸರು ಹೇಗೆ ಎರಡನೇ ಎಫ್‌ಐಆರ್ ದಾಖಲಿಸಿದರು. ರಾಜ್ಯ ಸರ್ಕಾರ ಗಂಭೀರ ಪ್ರಮಾದ ಎಸಗಿದೆ. ಯುಡಿಆರ್ ಸಂಬಂಧ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಯುಡಿಆರ್‌ಗೆ ಬಿ ರಿಪೋರ್ಟ್ ಸಲ್ಲಿಸಬಹುದೇ? ಎಂದು ಪ್ರಶ್ನಿಸಿತಲ್ಲದೆ, 2025ರ ಏಪ್ರಿಲ್ 29ರಿಂದ ಅರ್ಜಿದಾರರು ಕಸ್ಟಡಿಯಲ್ಲಿದ್ದು, ಆರೋಪ ಪಟ್ಟಿಯಲ್ಲಿ 216 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಆದ್ದರಿಂದ, ಅರ್ಜಿದಾರ ಜೈಲಿನಲ್ಲಿ ಮುಂದುವರಿಯುವುದು ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ:
ಮಂಗಳೂರಿನ ಹೊರಹೊಲಯದ ಕುಡುಪು ಮೈದಾನದಲ್ಲಿ 2025ರ ಏಪ್ರಿಲ್ 27ರಂದು ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಕೇರಳದ ವಯನಾಡ್ ಮೂಲದ 35 ವರ್ಷದ ಮೊಹಮ್ಮದ್ ಅಶ್ರಫ್ ರೈಲು ಸಂಚಿರಿಸುವ ಕಡೆಯಿಂದ ಪಾಕಿಸ್ತಾನ್ ಪಾಕಿಸ್ತಾನ್ ಎಂದು ಘೋಷಣೆ ಹಾಕಿ ನುಗ್ಗಿದ್ದು, ಇದರಿಂದ ಪ್ರಚೋದನೆಗೆ ಒಳಗಾದ ಆಟಗಾರರು ಮತ್ತು ಪಂದ್ಯ ನೋಡುತ್ತಿದ್ದರು ಆತನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಮೊದಲಿಗೆ 19 ಆರೋಪಿಗಳ ವಿರುದ್ಧ ಮಂಗಳೂರು ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಒಟ್ಟಾರೆ 21 ಆರೋಪಿಗಳ ವಿರುದ್ಧ ಪೊಲೀಸರು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಅಶ್ರಫ್ ಮೇಲೆ ಹಲ್ಲೆ ನಡೆಸಲು ಮಂಜುನಾಥ್ ಉಳಿದವರಿಗೆ ಕರೆ ನೀಡಿದ್ದ ಹಾಗೂ ಅಶ್ರಫ್‌ನ ಗಾಯವಾದ ಅಂಗಾಂಗಗಳು ಮತ್ತು ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ್ದ ಎಂದು ಆರೋಪಿಸಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರನ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ಅಶ್ರಫ್ ಗಾಯಗಳಿಗೆ ಖಾರದಪುಡಿ ಹಾಕಲಾಗಿದೆ ಎಂಬುದುಕ್ಕೆ ಯಾವುದೇ ದಾಖಲೆಗಳು ಇಲ್ಲ. ಪ್ರಕರಣದ ಎಲ್ಲ ಆರೋಪಿಗಳಿಗೆ ಜಾಮೀನು ದೊರೆತಿರುವುದರಿಂದ ಇವರಿಗೂ ಜಾಮೀನು ಮಂಜೂರು ಮಾಡಬೇಕು. ಪೆಹಲ್ಗಾಮ್ ದಾಳಿ ನಡೆದ ಸಂದರ್ಭದಲ್ಲಿ ಅಶ್ರಫ್ ಪಾಕಿಸ್ತಾನ್ ಘೋಷಣೆ ಹಾಕಿರುವುದರಿಂದ ಆರೋಪಿಗಳು ಪ್ರಚೋದನೆಗೆ ಒಳಗಾಗಿದ್ದಾರೆ. ಇದು ಪೂರ್ವನಿರ್ಧರಿತ ಕೃತ್ಯವಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
Related Articles
Thank you for your comment. It is awaiting moderation.



Comments (0)