ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮೀ ದರ್ಶನ್ಗೆ ನಿಂದನೆ; ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್
- by Prashanth Basavapatna
- June 22, 2026
- 53 Views
ಬೆಂಗಳೂರು: ನಟ ದರ್ಶನ್ ಅಭಿನಯದ ಡೆವಿಲ್ ಚಲನಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಜಾಮೀನು ಕೋರಿ ಆರೋಪಿಗಳಾದ ಬಿ. ಚಂದ್ರಶೇಖರ್ (ಎ1), ಜಿ.ಬಿ. ನಿತಿನ್ (ಎ2), ಪ್ರಶಾಂತ್ ಕರೆಪ್ಪ ತಳವಾರ (ಎ3) ಹಾಗೂ ನಿಂಗರಾಜ್ ಗುಳಪ್ಪ ತಳವಾರ (ಎ4) ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ವಜಾಗೊಳಿಸಿ ಆದೇಶಿಸಿದೆ.
ಆಧಾರರಹಿತ, ಸುಳ್ಳು, ಕ್ಷುಲ್ಲಕ ಹಾಗೂ ಬೆದರಿಸುವ ಸಂದೇಶಗಳನ್ನು ಕಳಿಸುವುದನ್ನು ಸಾಮಾಜಿಕ ಜಾಲತಾಣದ ಕಂಪನಿಗಳೇ ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ, ಸಾಮಾಜಿಕ ಮಾಧ್ಯಮದಲ್ಲಿ (ಸಾಮಾಜಿಕ ಜಾಲತಾಣ) ಈ ದೇಶದ ಯಾವುದೇ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವಂತಹ ಕಾಮೆಂಟ್ಗಳಲ್ಲಿ ಮಾಡಿದಾಗ ನ್ಯಾಯಾಲಯಗಳು ಮಧ್ಯಪ್ರವೇಶಿಸುವ ಮೂಲಕ ಈ ದೇಶದ ನಾಗರಿಕರ ವಿಶ್ವಾಸವನ್ನು ಭದ್ರಪಡಿಸಬೇಕಾಗುತ್ತದೆ. ನ್ಯಾಯಾಲಯ ಮೂಕ ಪ್ರೇಕ್ಷಕನಲ್ಲ. ಹಸ್ತಕ್ಷೇಪದ ಅಗತ್ಯವಿದ್ದಾಗಲೆಲ್ಲ ಯಾವುದೇ ಹಿಂಜರಿಕೆ ಇಲ್ಲದೆ, ಭಾರತದ ಸಂವಿಧಾನದ ಅಡಿಯಲ್ಲಿ ಖಾತ್ರಿಪಡಿಸಲಾದ ಸಾರ್ವಜನಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ನ್ಯಾಯಾಲಯಗಳು ಮುಂದಡಿ ಇಡುತ್ತವೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.
ಮೂಲಭೂತ ಹಕ್ಕುಗಳಿಗೂ ನಿರ್ಬಂಧಗಳಿವೆ:
ದೂರುದಾರೆ ವಿಜಯಲಕ್ಷ್ಮೀ ಅವರು 2025ರ ಡಿಸೆಂಬರ್ನಲ್ಲಿ ದರ್ಶನ್ ನಟನೆಯ ಡೆವಿಲ್ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿ ಪೋಸ್ಟ್ ಹಾಕಿದ್ದಾರೆ. ಮಹಿಳೆಯ ವಿರುದ್ಧ ಇಂತಹ ಕಾಮೆಂಟ್ಗಳನ್ನು ಹಾಕುವುದನ್ನು ಕ್ಷಮಿಸಲಾಗದು. ದೂರುದಾರೆಯ ಬಗ್ಗೆ ಅರ್ಜಿದಾರರು ಮಾಡಿರುವ ಕಾಮೆಂಟ್ಗಳು ದೇಶದ ಮಹಿಳೆಯ ಬಗ್ಗೆ ಅವರ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ನಿಸ್ಸಂದೇಹವಾಗಿ ಭಾರತದ ಸಂವಿಧಾನ ಕಲ್ಪಿಸಿರುವ ಮೂಲಭೂತ ಹಕ್ಕು. ಅದಾಗ್ಯೂ, ಅಂತಹ ಪ್ರತಿಯೊಂದು ಹಕ್ಕಿಗೂ ಅದರದ್ದೇ ಆದ ನಿರ್ಬಂಧಗಳಿವೆ. ಆ ನಿರ್ಬಂಧಗಳನ್ನು ಮೀರುವುದು ಅಥವಾ ಮತ್ತೊಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುವುದು ಖಂಡಿತವಾಗಿಯೂ ಅಪರಾಧವಾಗುತ್ತದೆ. ಆ ಅಪರಾಧವನ್ನು ಕಾನೂನಿನ ಪ್ರಕಾರ ವ್ಯವಹರಿಸಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯಗಳ ಬಗ್ಗೆ ಕಾಮೆಂಟ್ ಮಾಡುವ ವ್ಯಕ್ತಿಗಳು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣವೇನು?
ವಿಜಯಲಕ್ಷ್ಮೀ ದರ್ಶನ್ ಅವರು 2025ರ ಡಿಸೆಂಬರ್ 21ರಂದು ದಾವಣಗೆರೆಯಲ್ಲಿ ಡೆವಿಲ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ನೀಡಿದ್ದರು ಎನ್ನಲಾದ ಹೇಳಿಕೆಯನ್ನು ಆಕ್ಷೇಪಿಸಿದ್ದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಪದಗಳಿಂದ ನಿಂದಿಸಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ವಿಜಯಲಕ್ಷ್ಮೀ ನಗರ ಪೋಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿದ್ದ ಸೈಬರ್ ಕ್ರೈಂ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
Related Articles
Thank you for your comment. It is awaiting moderation.


Comments (0)