ವಾಲ್ಮೀಕಿ ನಿಗಮ ಹಗರಣದ ತನಿಖೆಗೆ ಮಾಜಿ ಸಚಿವ ನಾಗೇಂದ್ರ ಸಹಕರಿಸುತ್ತಿಲ್ಲ; ಹೈಕೋರ್ಟ್‌ಗೆ ಸಿಬಿಐ ಮಾಹಿತಿ
- by Jagan Ramesh
- June 19, 2026
- 5 Views
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಅವ್ಯವಹಾರ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಹಣ ವರ್ಗಾವಣೆ ಬಗ್ಗೆ ಸೂಕ್ತ ವಿವರಣೆ ನೀಡಿಲ್ಲ ಎಂದು ಸಿಬಿಐ ಹೈಕೋರ್ಟ್‌ಗೆ ದೂರಿದೆ.
ಜತೆಗೆ, ನಾಗೇಂದ್ರ ಅವರ ಖಾತೆಯಿಂದ ಮುಂಬೈನ ಮಹಿಳೆಯೊಬ್ಬರ ಖಾತೆಗೆ 2.50 ಕೋಟಿ ರೂ. ಹಣ ವರ್ಗಾವಣೆಯಾಗಿದೆ. ಆದರೆ, ಆ ಮಹಿಳೆಯ ದಾಖಲೆಗಳಲ್ಲಿ ನಾಗೇಂದ್ರ ಪತ್ನಿ ಎಂದು ಉಲ್ಲೇಖಿಸಲಾಗಿದೆ ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಕರಣದಲ್ಲಿ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಸಿಬಿಐ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿ, ವಿಚಾರಣೆ ವೇಳೆ ಆರೋಪಿಗಳ ಮೊಬೈಲ್‌ನಲ್ಲಿ ಕೆಲ ವಿಡಿಯೊಗಳು ಪತ್ತೆಯಾಗಿವೆ. ಅದರಲ್ಲಿ ಹಣದ ಕಂತೆ ಎಣಿಸುತ್ತಿರುವ ವಿಡಿಯೋಗಳಿವೆ. ಆದರೆ, ಆ ಬಗ್ಗೆ ಆರೋಪಿಗಳು ಯಾವುದೇ ವಿವರಣೆ ನೀಡಿಲ್ಲ. ಜತೆಗೆ ಮುಂಬೈನ ಮಹಿಳೆಯೊಬ್ಬರಿಗೆ ಎರಡೂವರೆ ಕೋಟಿ ರೂ. ವರ್ಗಾವಣೆಯಾಗಿದೆ. ಆಕೆ ತನ್ನನ್ನು ಬಿ. ನಾಗೇಂದ್ರ ಅವರ ಪತ್ನಿ ಎಂದು ಹೇಳಿಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಮುಂದುವರಿದು, ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿರುವ ಮಹಿಳೆಯ ದಾಖಲೆಗಳಲ್ಲಿ ತಾನು ಮಾಜಿ ಸಚಿವ ಬಿ. ನಾಗೇಂದ್ರ ಪತ್ನಿ ಎಂದು ಉಲ್ಲೇಖವಾಗಿದೆ. ಆಕೆಗೆ ಹಣ ವರ್ಗಾವಣೆ ಮಾಡಿರುವ ಬಗ್ಗೆ ಸೂಕ್ತ ವಿವರಣೆ ನೀಡಿಲ್ಲ. ಆದ್ದರಿಂದ, ನಾಗೇಂದ್ರ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಬೇಕಾಗಿರುವುದರಿಂದ ಅವರಿಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಬಿ. ನಾಗೇಂದ್ರ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು.
ತನಿಖೆಗೆ ನೆಕ್ಕುಂಟಿ ನಾಗರಾಜ್ ಅಸಹಕಾರ:
ಇದೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮತ್ತೊಬ್ಬ ಆರೋಪಿ ನೆಕ್ಕುಂಟಿ ನಾಗರಾಜ್ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು.
ಸಿಬಿಐ ಪರ ವಕೀಲರು, ಆರೋಪಿ ವಿಚಾರಣೆಗೆ ಸಹಕರಿಸುತ್ತಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ, ನ್ಯಾಯಪೀಠ, ಆರೋಪಿ ಜೂನ್ 23ರಂದು ಸಿಬಿಐ ಮುಂದೆ ಹಾಜರಾಗಿ, ಸಿಬಿಐ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸೂಚನೆ ನೀಡಿತು. ಆರೋಪಿ ನೀಡಿದ ಉತ್ತರವನ್ನು ಹೈಕೋರ್ಟ್‌ಗೆ ಸಲ್ಲಿಸಲು ಸಿಬಿಐಗೆ ಸೂಚಿಸಿದ ನ್ಯಾಯಪೀಠ, ನಾಗರಾಜ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿ, ಅರ್ಜಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)