ಮತ ತಿರುಚಿದ ಆರೋಪ; ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್‌ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಅಂಚೆ ಮತಗಳ ಮರು ಎಣಿಕೆಯಲ್ಲಿ ಶೃಂಗೇರಿಯ ಶಾಸಕಾರಗಿ ಆಯ್ಕೆಯಾಗಿರುವ ಡಿ.ಎನ್‌. ಜೀವರಾಜ್‌ ವಿರುದ್ಧ ದುರುದ್ದೇಶಪೂರ್ವಕವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ಜೀವರಾಜ್ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮತ ತಿರುಚಿದ ಆರೋಪದಲ್ಲಿ ಕಾಂಗ್ರೆಸ್‌ ಏಜೆಂಟ್‌ ಸುಧೀರ್‌ ಮುರೋಳ್ಳಿ ನೀಡಿದ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ಟೌನ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಜೀವರಾಜ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿ ಸಂಬಂಧ ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಡಿ.ಎನ್‌. ಜೀವರಾಜ್‌ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ, ಅರ್ಜಿ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿತು.

ರಾಜಕೀಯ ದುರುದ್ದೇಶ-ಜೀವರಾಜ್ ಆರೋಪ:
ಇದಕ್ಕೂ ಮುನ್ನ ಜೀವರಾಜ್‌ ಪರ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ವಾದ ಮಂಡಿಸಿ, 2023ರ ಮೇ 13ರಂದು ನಡೆದಿದೆ ಎನ್ನಲಾದ ಆರೋಪ ಆಧರಿಸಿ ಈಗ ಪ್ರಕರಣ ದಾಖಲಿಸಲಾಗಿದೆ. ಸೋತ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದ್ದು, ಇಲ್ಲಿ ರಾಜಕೀಯ ದುರುದ್ದೇಶವಿದೆ ಎಂದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ, ಮತಗಳ ಮೇಲೆ ಡಬಲ್‌ ಟಿಕ್‌ ಇದೆ. ಈ ವಿಚಾರವನ್ನು ಸುಧೀರ್‌ ಅವರು ಚುನಾವಣಾಧಿಕಾರಿ ಗೌರವ್‌ ಶೆಟ್ಟಿ ಅವರ ಗಮನಕ್ಕೆ ಮರು ಎಣಿಕೆ ನಡೆಯುವುದಕ್ಕೆ ಮುನ್ನವೇ ತಂದಿದ್ದಾರೆ. ಇಲ್ಲಿ ಮತ ತಿರುಚುವ ಕೃತ್ಯ ನಡೆದಿದೆ ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, 2023ರಲ್ಲಿ ಮತ ತಿರುಚಲಾಗಿದೆ ಎನ್ನುವುದಾದರೆ ಆ ವಿಚಾರವನ್ನು ಮರು ಎಣಿಕೆಗೆ ಆದೇಶಿಸಿದ ನ್ಯಾಯಾಲಯದ ಗಮನಕ್ಕೆ ತಂದು, ನಿರ್ದೇಶನ ಪಡೆದು ಮುಂದುವರಿಯಬೇಕಿತ್ತು. ಹಾಲಿ ಚುನಾವಣಾಧಿಕಾರಿ ಗೌರವ್‌ ಶೆಟ್ಟಿ ಅದನ್ನು ಮಾಡಬೇಕಿತ್ತು. ದೂರಿನಲ್ಲಿ ಗೌರವ್‌ ಶೆಟ್ಟಿಯನ್ನು ಏಕೆ ಆರೋಪಿ ಮಾಡಲಾಗಿಲ್ಲ. ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಅಂದಿನ ಜಿಲ್ಲಾಧಿಕಾರಿಯನ್ನು ಏಕೆ ಆರೋಪಿಗಳನ್ನಾಗಿಸಲಾಗಿದೆ. ದೂರು ದಾಖಲಿಸುವುದಕ್ಕೂ ಮುನ್ನ ಅವರ ವಾದ ಆಲಿಸಬೇಕಿತ್ತಲ್ಲವೇ. ಇದು ಸಹಜ ನ್ಯಾಯತತ್ವವೇ ಎಂದು ಪ್ರಶ್ನಿಸಿತು.

ಪ್ರಕರಣದ ತನಿಖಾಧಿಕಾರಿ ಎಲ್ಲಿ? ಎಂದು ನ್ಯಾಯಪೀಠ ಪ್ರಶ್ನಿಸಿದಾಗ ತನಿಖಾಧಿಕಾರಿ ಮುಂದೆ ಬರುತ್ತಿದ್ದಂತೆ ಗೌರವ್‌ ಶೆಟ್ಟಿಯನ್ನು ಏಕೆ ಆರೋಪಿ ಮಾಡಿಲ್ಲ. ಎಲ್ಲಿಂದ ಬಂದಿದ್ದೀರಿ. ನಿಮಗೆ ಕಣ್ಣು ಕಾಣುವುದಿಲ್ಲವೇ? ಯಾರೋ ಎಸಗಿದ ಪ್ರಮಾದಕ್ಕೆ ಇನ್ಯಾರ ವಿರುದ್ಧ ಏಕೆ ಪ್ರಕರಣ ದಾಖಲಿಸಿದ್ದೀರಿ? ನಿಮ್ಮನ್ನು ಅಮಾನತು ಮಾಡಲು ಆದೇಶ ಬರೆಯಲಾಗುವುದು ಎಂದು ನ್ಯಾಯಪೀಠ ಹೇಳಿತು.

ಪೊಲೀಸರು ರಾಜಕೀಯ ಒತ್ತಡಗಳಿಗೆ ಮಣಿದು ಕೆಲಸ ಮಾಡಬಾರದು. ಆದರೆ, ಈ ಪ್ರಕರಣದಲ್ಲಿ ಅದು ಕಾಣುತ್ತದೆ. ರಾಜಕೀಯ ಒತ್ತಡಕ್ಕೆ ಮಣಿದು ಎಫ್‌ಐಆರ್‌ ದಾಖಲಿಸಲಾಗಿದೆ. ಒಂದೊಮ್ಮೆ ರಾಜೇಗೌಡರ ವಿರುದ್ಧ ಇಂಥದ್ದೇ ಪ್ರಕರಣ ದಾಖಲಿಸಿದ್ದರೂ ಅದಕ್ಕೆ ತಡೆ ನೀಡುತ್ತಿದ್ದೆ. ಹಿಂದಿನ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಯನ್ನು ಆರೋಪಿಗಳನ್ನಾಗಿಸುವುದು ಸರಿಯೇ? ಪರಿಸ್ಥಿತಿ ಹೀಗಾದರೆ ಯಾವ ಅಧಿಕಾರಿಯೂ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ನುಡಿಯಿತು.

ಮುಂದುವರಿದು, ಪಶ್ಚಿಮ ಬಂಗಾಳದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಿಸಿದ ಸುಪ್ರೀಂಕೋರ್ಟ್‌ ನಿರ್ದೇಶನ ಉಲ್ಲೇಖಿಸಿದ ನ್ಯಾಯಪೀಠ ಇಲ್ಲಿಯೂ ಅಂಥದ್ದೇ ಪರಿಸ್ಥಿತಿ ಬರಲಿದೆ. ನ್ಯಾಯಾಂಗ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳನ್ನು ನೇಮಿಸುವ ಸ್ಥಿತಿ ಬರಲಿದೆ. ಆ ಹಂತಕ್ಕೆ ಇದು ಹೋಗಲಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಅಂತಿಮವಾಗಿ ನ್ಯಾಯಪೀಠ, ಬಿ.ಎ. ಬೆಳ್ಳಿಯಪ್ಪ ಅವರು ಮೇ 7ರಂದು ಅಗತ್ಯ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದ್ದು, ಅದಕ್ಕೆ ಅನುಮತಿಸಲಾಗಿದೆ. ಅಂತೆಯೇ, ಜೀವರಾಜ್‌ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲಾಗಿದೆ ಎಂದು ಆದೇಶಿಸಿತಲ್ಲದೆ, ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ದೂರುದಾರರಿಗೆ ನೋಟಿಸ್‌ ಜಾರಿಗೊಳಿಸಿತು.

ಇದೇ ವೇಳೆ, ತಮ್ಮ ವಿರುದ್ಧದ ಎಫ್‌ಐಆರ್‌ಗೆ ತಡೆ ಕೋರಿ ಅಂದಿನ ಜಿಲ್ಲಾಧಿಕಾರಿ ರಮೇಶ್‌ ಸಲ್ಲಿಸಿರುವ ಅರ್ಜಿಯಲ್ಲಿಯೂ ಇದೇ ಆದೇಶ ಮಾಡಲಾವುದು ಎಂದು ಮೌಖಿಕವಾಗಿ ನುಡಿದ ಪೀಠ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿತು.

ಪ್ರಕರಣವೇನು?
2023ರ ಮೇ 13ರಂದು ಮತ ಎಣಿಕೆ ಮುಗಿದ ಬಳಿಕ ಜೀವರಾಜ್‌, ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಚಿಕ್ಕಮಗಳೂರಿನ ಅಂದಿನ ಜಿಲ್ಲಾಧಿಕಾರಿ ರಮೇಶ್‌ ಅವರು ಸಂಚು ರೂಪಿಸಿ ಮತ ಪೆಟ್ಟಿಗೆಗಳ ಸೀಲು ತೆಗೆದು ರಾಜೇಗೌಡರಿಗೆ ಬಿದ್ದಿದ್ದ ಒಂದು ಕಟ್ಟಿನ 170 ಮತಗಳನ್ನು ತಿದ್ದುಪಡಿ ಮಾಡಿದ್ದಾರೆ. ಈ ವಿಚಾರವನ್ನು 2026ರ ಮೇ 2ರಂದು ಮತ ಮರು ಎಣಿಕೆ ಆರಂಭಿಸುವುದಕ್ಕೂ ಮುನ್ನವೇ ಪ್ರಸ್ತಾಪಿಸಿ 2026ರ ಮೇ 3ರಂದು ಕಾಂಗ್ರೆಸ್‌ನ ಮತ ಎಣಿಕೆಯಲ್ಲಿ ಭಾಗಿಯಾಗಿದ್ದ ಏಜೆಂಟ್‌ ಸುಧೀರ್‌ ಕುಮಾರ್‌ ಮುರೋಳ್ಳಿ ಚಿಕ್ಕಮಗಳೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ಇದರ ಅನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143 (ಅಕ್ರಮ ಕೂಟ), 465 (ಸುಳ್ಳು ದಾಖಲೆ ಸೃಷ್ಟಿ), 468 (ವಂಚಿಸಲು ಸುಳ್ಳು ದಾಖಲೆ ಸೃಷ್ಟಿ), 471 (ಸುಳ್ಳು ದಾಖಲೆಗಳನ್ನು ಅಸಲಿ ಎಂದು ಬಿಂಬಿಸುವುದು), 120B (ಪಿತೂರಿ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್‌ 136ರ (ಚುನಾವಣಾ ಅಕ್ರಮ) ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ರದ್ದು ಕೋರಿ ಈ ಜೀವರಾಜ್‌ ಹಾಗೂ ರಮೇಶ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡರ ಆಯ್ಕೆ ಪ್ರಶ್ನಿಸಿ ಜೀವರಾಜ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ 2026ರ ಏಪ್ರಿಲ್‌ 6ರಂದು ತಿರಸ್ಕೃತವಾಗಿರುವ 279 ಅಂಚೆ ಮತಗಳನ್ನು ಪರಿಶೀಲಿಸಿ ವಿಜೇತರನ್ನು ಘೋಷಿಸುವಂತೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ 2026ರ ಮೇ 3ರಂದು ಚುನಾವಣಾಧಿಕಾರಿಯು ನ್ಯಾಯಾಲಯದ ನಿರ್ದೇಶನದ ಅನುಸಾರ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಕಾಂಗ್ರೆಸ್‌ ಟಿ.ಡಿ. ರಾಜೇಗೌಡ ವಿರುದ್ಧ ಜೀವರಾಜ್‌ ವಿಜೇತರು ಎಂದು ಫಾರ್ಮ್‌ 21ಸಿ ಪತ್ರ ನೀಡಿದ್ದರು. ಇದಕ್ಕೂ ಮುನ್ನ, ಮೂರು ವರ್ಷಗಳ ಕಾಲ ರಾಜೇಗೌಡ ಶಾಸಕರಾಗಿದ್ದರು. 201 ಮತಗಳ ಕೂದಲೆಳೆ ಅಂತರದಲ್ಲಿ ರಾಜೇಗೌಡ ಜಯಭೇರಿ ಬಾರಿಸಿದ್ದರು.

ಹೊಸದಾಗಿ ಮತ ಎಣಿಕೆ ನಡೆದು ನನ್ನನ್ನು ವಿಜೇತ ಎಂದು ಘೋಷಣೆಯಾದ ಬಳಿಕ ಪ್ರಕರಣ ದಾಖಲಿಸಲಾಗಿದ್ದು, ಇದು ನ್ಯಾಯಾಲಯದ ಆದೇಶವನ್ನು ವಿಫಲಗೊಳಿಸುವ ಪ್ರಯತ್ನವಾಗಿದೆ. ಜತೆಗೆ, ನ್ಯಾಯಾಲಯದ ನಿರ್ದೇಶನದಂತೆ ಮರು ಎಣಿಕೆಯಾದ ತಕ್ಷಣ ವಿಜೇತರನ್ನು ಚುನಾವಣಾಧಿಕಾರಿ ಘೋಷಿಸಿರಲಿಲ್ಲ. ವಾಟ್ಸ್‌ಆ್ಯಪ್‌ ಮೂಲಕ ಲೀಗಲ್‌ ನೋಟಿಸ್‌ ಕಳುಹಿಸಿದ ಬಳಿಕ ಜಯ ಘೋಷಿಸಲಾಗಿದೆ. ಸ್ವತಂತ್ರವಾಗಿ ನಿರ್ಧರಿಸಿ ಎಫ್‌ಐಆರ್‌ ದಾಖಲಿಸಿಲ್ಲ. ಬದಲಿಗೆ ಉಪಮುಖ್ಯಮಂತ್ರಿ ಡಿ.ಕೆ‌. ಶಿವಕುಮಾರ್‌ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ಜೀವರಾಜ್‌ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.

Related Articles

Comments (0)

Leave a Comment