30 ಐಪಿಎಸ್ಯೇತರ ಅಧಿಕಾರಿಗಳಿಗೆ ಎಸ್ಪಿ ವೃಂದಕ್ಕೆ ಬಡ್ತಿ; 2 ತಿಂಗಳಲ್ಲಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Jagan Ramesh
- May 2, 2026
- 9 Views
ಬೆಂಗಳೂರು: ರಾಜ್ಯ ಪೊಲೀಸ್ ಸೇವೆಯಲ್ಲಿದ್ದ 30 ಐಪಿಎಸ್-ಯೇತರ (ನಾನ್ ಐಪಿಎಸ್) ಅಧಿಕಾರಿಗಳಿಗೆ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವೃಂದಕ್ಕೆ ಬಡ್ತಿ ನೀಡುವ ಕುರಿತು ಎರಡು ತಿಂಗಳೊಳಗೆ ಮರುಪರಿಶೀಲಿಸಿ, ಇಲಾಖಾ ಬಡ್ತಿ ಸಮಿತಿಯ (ಡಿಪಿಸಿ) ಶಿಫಾರಸು ಹಾಗೂ ಹುದ್ದೆಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಎಸ್ಪಿ ಹುದ್ದೆಗೆ ಬಡ್ತಿ ನೀಡುವ ಸಂಬಂಧ 2025ರ ಆಗಸ್ಟ್ 20ರಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್ಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಕೆಎಸ್ಎಟಿ ಆದೇಶ ಮಾರ್ಪಾಡುಗೊಳಿಸಿರುವ ಹೈಕೋರ್ಟ್, 2023ರ ನವೆಂಬರ್ 15ರ ಡಿಪಿಸಿ ಶಿಫಾರಸು, ಎಸ್ಪಿ ಹುದ್ದೆಗಳ ಲಭ್ಯತೆ ಆಧರಿಸಿ ಗೃಹ ಸಚಿವರ ಅನುಮೋದನೆ ಪಡೆದು 2 ತಿಂಗಳಲ್ಲಿ ಪ್ರತಿವಾದಿ ಅಧಿಕಾರಿಗಳಿಗೆ ಎಸ್ಪಿ ಹುದ್ದೆಗೆ ಬಡ್ತಿ ನೀಡುವ ಕುರಿತು ತೀರ್ಮಾನಿಸಬೇಕು ಎಂದು ಆದೇಶಿಸಿದೆ.
ಈ ಪ್ರಕರಣದಲ್ಲಿ ಉನ್ನತೀಕರಿಸಲಾದ ಹುದ್ದೆಗಳು ಕೇವಲ 2 ವರ್ಷಕ್ಕೆ ಲಭ್ಯವಿವೆ. ಆದರೆ, ಬಡ್ತಿ ಆದೇಶ ಹೊರಡಿಸುವ ದಿನಾಂಕ 2023 ಪರಿಗಣಿಸಿದರೆ ಆ 30 ಹುದ್ದೆಗಳ ಉನ್ನತೀಕರಿಸಿದ ಅವಧಿ ಮುಕ್ತಾಯವಾಗಲಿದೆ. ಆದ್ದರಿಂದ, ಹುದ್ದೆಗಳು ಖಾಲಿ ಇರುವ ಅಂಶವನ್ನು ನ್ಯಾಯಮಂಡಳಿ ಪರಿಗಣಿಸಬೇಕಿತ್ತು. ಆದ್ದರಿಂದ, ನ್ಯಾಯಮಂಡಳಿ ಆದೇಶವನ್ನು ಕೊಂಚ ಮಾರ್ಪಾಡು ಮಾಡಬೇಕಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಕೋರಿರುವುದು ಸಮಂಜಸವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:
2023ರ ನವೆಂಬರ್ 15ರಂದು ನಡೆದ ಇಲಾಖಾ ಬಡ್ತಿ ಸಮಿತಿ ಸಭೆಯು ಡಿಎಸ್ಪಿಗಳಾಗಿದ್ದ 30 ಮಂದಿ ಪ್ರತಿವಾದಿ ಅಧಿಕಾರಿಗಳಿಗೆ ನಾನ್ ಐಪಿಎಸ್ ಎಸ್ಪಿ ವೃಂದಕ್ಕೆ (ಸಿವಿಲ್) ನೇರವಾಗಿ ಬಡ್ತಿ ನೀಡಲು ತೀರ್ಮಾನಿಸಿತ್ತು. ಆದರೆ, ಸರ್ಕಾರ ಅವರಿಗೆ ಬಡ್ತಿ ನೀಡುವ ಬದಲು ಕೆಸಿಎಸ್ಆರ್ ನಿಯಮ 32ರಂತೆ ಪ್ರತಿವಾದಿಗಳಿಗೆ ಎಸ್ಪಿಗಳಾಗಿ ಉಸ್ತುವಾರಿ ಹೊಣೆಯನ್ನು ನೀಡಿತ್ತು.
ಡಿಪಿಸಿ ನಿರ್ಧಾರದ ಹೊರತಾಗಿಯೂ ಪ್ರತಿವಾದಿ ಪೊಲೀಸ್ ಅಧಿಕಾರಿಗಳಿಗೆ ನೇರ ಬಡ್ತಿಯನ್ನು ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಎ.ವಿ. ಲಕ್ಷ್ಮೀನಾರಾಯಣ, ಸಿ. ಸಿದ್ದರಾಜು ಸೇರಿ 30 ಅಧಿಕಾರಿಗಳು ಕೆಎಸ್ಎಟಿ ಮೊರೆ ಹೋಗಿದ್ದರು. ನ್ಯಾಯಮಂಡಳಿ ಅಷ್ಟು ಮಂದಿಗೂ ಎಸ್ಪಿ ವೃಂದಕ್ಕೆ ಬಡ್ತಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.
Related Articles
Thank you for your comment. It is awaiting moderation.



Comments (0)