ಜಿಬಿಎ ವ್ಯಾಪ್ತಿಯಲ್ಲಿ ಭೂಕಂದಾಯ ಕಾಯ್ದೆಯಡಿ ದೂರು ಸ್ವೀಕರಿಸುವ, ಆದೇಶ ಹೊರಡಿಸುವ ಅಧಿಕಾರ ಕಂದಾಯ ಅಧಿಕಾರಿಗಳಿಗಿಲ್ಲ – ಹೈಕೋರ್ಟ್
- by LegalSamachar
- May 1, 2026
- 7 Views
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಜಿಬಿಎ (ಹಿಂದಿನ ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಭೂಮಿ, ಕೃಷಿ ಪ್ರದೇಶವೆಂದು ವರ್ಗೀಕರಿಸಲ್ಪಟ್ಟಿದ್ದರೂ ಸಹ ಅದರ ಮೇಲೆ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಯಾವುದೇ ದೂರು ಸ್ವೀಕರಿಸಲು ಅಥವಾ ಆದೇಶಗಳನ್ನು ಹೊರಡಿಸಲು ಕಂದಾಯ ಅಧಿಕಾರಿಗಳಿಗೆ ಯಾವುದೇ ಅಧಿಕಾರವಿಲ್ಲ ಹೈಕೋರ್ಟ್ ಆದೇಶಿಸಿದೆ.
ಕೃಷಿ ಭೂಮಿಯನ್ನು ಅನಧಿಕೃತವಾಗಿ ಕೃಷಿಯೇತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಅದನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿ ಸಿ. ಪರಿಮಳ ಮತ್ತಿತರರು ಸಲ್ಲಿಸಿದ್ದ ಹಲವು ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಭೂಮಿಯನ್ನು ಪರಿವರ್ತಿಸದೆ ಅಥವಾ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದೆ ವಸತಿ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಬಳಸುವ ಕಾನೂನುಬದ್ಧತೆಯನ್ನು ಪರಿಶೀಲಿಸದೆ, ಭೂ ಬಳಕೆ ಮತ್ತು ಅಕ್ರಮ ನಿರ್ಮಾಣದ ಉಲ್ಲಂಘನೆಯ ವಿರುದ್ಧ ಜಿಬಿಎ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸಲು ಅಧಿಕಾರ ಹೊಂದಿರುವ ಜಿಬಿಎ ಮಾತ್ರ ಕಾನೂನಿನ ಪ್ರಕಾರ ಮುಂದುವರಿಯಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಮೇಲ್ಮನವಿಗಳನ್ನು ಇತ್ಯರ್ಥಪಡಿಸಿರುವ ನ್ಯಾಯಾಲಯ, 2014-2022ರ ಹಿಂದಿನ ಆದೇಶವನ್ನು ಜಾರಿಗೊಳಿಸುವ ಮೂಲಕ ಅಥವಾ ಕರ್ನಾಟಕ ಭೂ ಕಂದಾಯ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ನೋಟಿಸ್ ನೀಡುವ ಮೂಲಕ ಮತ್ತು ಆದೇಶಗಳನ್ನು ರವಾನಿಸುವ ಮೂಲಕ ಯಾವುದೇ ಕ್ರಮ ಕೈಗೊಳ್ಳುವ ಅಧಿಕಾರವನ್ನು ಕಂದಾಯ ಅಧಿಕಾರಿಗಳು ಕಳೆದುಕೊಂಡಿದ್ದಾರೆ ಎಂದು ಹೇಳಿದೆ.
ವಿವಾದಿತ ಸೈನಿಕ್ ವಿಹಾರ್ ಲೇಔಟ್‌ನಲ್ಲಿರುವ ನಿವೇಶನಗಳು ಮತ್ತು ಮನೆಗಳ ಬಿಬಿಎಂಪಿ, ಹಾಲಿ ಜಿಬಿಎ ವ್ಯಾಪ್ತಿಗೆ ಬರುವ ಜಮೀನುಗಳಾಗಿವೆ. ಆದ್ದರಿಂದ, ಆ ಜಮೀನುಗಳು ಕಂದಾಯ ದಾಖಲೆಗಳಲ್ಲಿ ಕೃಷಿ ಪ್ರದೇಶವೆಂಬ ವರ್ಗೀಕರಣವನ್ನು ಉಳಿಸಿಕೊಂಡಿದ್ದರೂ ಸಹ, ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ರಾಜ್ಯ ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಅಧಿಕಾರವ್ಯಾಪ್ತಿಯನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
Related Articles
Thank you for your comment. It is awaiting moderation.



Comments (0)