‘ವಂದೇ ಮಾತರಂ‌’ ಗಾಯನ ಎರಡು ಚರಣಕ್ಕೆ ಸೀಮಿತ; ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿದ ಪಿಐಎಲ್ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ರಾಷ್ಟ್ರಪತಿ, ಉಪ-ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳನ್ನು ಹೊರತುಪಡಿಸಿ ರಾಜ್ಯ ಸರ್ಕಾರದ ಇತರ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂಬ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಯನ್ನು ಹೈಕೋರ್ಟ್ ಮೂರು ವಾರ ಮುಂದೂಡಿದೆ.

ರಾಜ್ಯ ಸರ್ಕಾರ ಸೆಪ್ಟೆಂಬರ್‌ 8ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ವಕೀಲ ಗಿರೀಶ್‌ ಭಾರದ್ವಾಜ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಟಿ.ಪಿ. ವಿವೇಕಾನಂದ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ವಂದೇ ಮಾತರಂ ಸಂಪೂರ್ಣ ಗೀತೆ ಹಾಡುವ ಸಂಬಂಧಿತ ಕಾಯ್ದೆ ಹಾಗೂ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಎರಡು ವಾರ ಮುಂದೂಡಿದೆ. ಆದ್ದರಿಂದ, ಸುಪ್ರೀಂಕೋರ್ಟ್‌ ಆದೇಶದ ಬಳಿಕ ಈ ಅರ್ಜಿ ವಿಚಾರಣೆ ನಡೆಸುವುದು ಸೂಕ್ತ ಎಂದು ತಿಳಿಸಿ, ವಿಚಾರಣೆಯನ್ನು ಅಕ್ಟೋಬರ್‌ 15ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಅಂಗದ್‌ ಕಾಮತ್‌ ವಾದ ಮಂಡಿಸಿ, ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡಬೇಕು ಎಂದು ರಾಜ್ಯ ಸಂಪುಟದ ನಿರ್ಧಾರ ಆಧರಿಸಿ ಸರ್ಕಾರ ಆದೇಶ ಮಾಡಿದೆ. ಆದರೆ, ಸಂಪುಟದ ನಿರ್ಧಾರಕ್ಕೆ ಯಾವುದೇ ಪ್ರಸ್ತಾವವು ಸಂಬಂಧಿತ ಇಲಾಖೆಯಿಂದ ಸಲ್ಲಿಕೆಯಾಗಿರಲಿಲ್ಲ. ಕಾನೂನು ಸಲಹೆ ಪಡೆಯದೇ 32ಕ್ಕೂ ಹೆಚ್ಚು ಸಚಿವರು ಸಂಪುಟದಲ್ಲಿ ನಿರ್ಧಾರ ಮಾಡಿದ್ದಾರೆ. ಆದರೆ, ಇದಕ್ಕೆ ಅವಕಾಶವಿಲ್ಲ. ಆದ್ದರಿಂದ, ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಸಂವಿಧಾನದ ಪರಿಚ್ಛೇದ 51ಎ ಪ್ರಕಾರ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಗೌರವದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಆದರೆ ‘ರಾಷ್ಟ್ರೀಯ ಗೀತೆ’ಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಶಾಸನಬದ್ಧ ವಿಧಿವಿಧಾನಗಳಿಲ್ಲ. ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯಲ್ಲೇ ಗೀತೆಯನ್ನು ಇತರ ಸಂದರ್ಭಗಳಲ್ಲಿ ಹಾಡಬಹುದು ಎಂದು ಹೇಳಲಾಗಿದೆಯೇ ಹೊರತು, ಎಲ್ಲರೂ ಕಡ್ಡಾಯವಾಗಿ ಹಾಡಲೇಬೇಕು ಎಂದಿಲ್ಲ. ಆದ್ದರಿಂದ, ರಾಜ್ಯ ಸರ್ಕಾರವು ಕೇವಲ ಮೊದಲ ಎರಡು ಚರಣಗಳನ್ನು ನಿಗದಿಪಡಿಸಿರುವುದು ನಿಯಮಬಾಹಿರವಲ್ಲ ಎಂದು ಸಮರ್ಥನೆ ನೀಡಿದರು.

ಮುಂದುವರಿದು, ಆದೇಶದಲ್ಲಿ ವಂದೇ ಮಾತರಂ ಗೀತೆಯನ್ನು ಇತರ ಸಂದರ್ಭಗಳಲ್ಲಿ ಹಾಡಬಹುದು ಎಂದು ಉಲ್ಲೇಖಿಸಲಾಗಿದೆ. ಇದರರ್ಥ ಗೀತೆಯನ್ನು ಕಡ್ಡಾಯವಾಗಿ ಹಾಡಲೇಬೇಕು ಅಥವಾ ಮೌನವಾಗಿ ನಿಲ್ಲಬೇಕು ಎಂಬುದೇ ಹೊರತು, ಎಷ್ಟು ಚರಣಗಳನ್ನು ಹಾಡಬೇಕು ಎಂದಲ್ಲ. ಅಲ್ಲದೆ, ಅರ್ಜಿದಾರರು ಸೆಪ್ಟೆಂಬರ್ 14ರ ಸರ್ಕಾರಿ ರಜಾ ದಿನದಂದು ಮನವಿ ಸಲ್ಲಿಸಿ, ಮರುದಿನವೇ (ಸೆಪ್ಟೆಂಬರ್ 15) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಕ್ಕೆ ಪರಿಶೀಲಿಸಲು ಸಮಯವನ್ನೇ ನೀಡದೆ ಅವಸರದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ. ಅರವಿಂದ್ ಕಾಮತ್ ಅವರು, ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಯ ಸೆಕ್ಷನ್ 3ಕ್ಕೆ ತಿದ್ದುಪಡಿ ತರಲಾಗಿದ್ದು, ರಾಷ್ಟ್ರಗೀತೆಯ ಜತೆಗೆ ವಂದೇ ಮಾತರಂ ಗೀತೆಯನ್ನು ಸೇರಿಸಲಾಗಿದೆ. ರಾಷ್ಟ್ರೀಯ ಗೀತೆಯ ಗಾಯನಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ಗಾಯನ ನಡೆಯುವ ಸಭೆಯಲ್ಲಿ ಗೊಂದಲ ಉಂಟುಮಾಡುವುದು ಅಪರಾಧವಾಗಿದೆ. ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿ ಯಾವುದು ಎಂಬುದನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಕೇಂದ್ರ ಸರ್ಕಾರದ ಆಜ್ಞೆಯ ಪ್ರಕಾರ ‘ವಂದೇ ಮಾತರಂ’ ಗೀತೆಯು ಸಂಪೂರ್ಣ ಆರು ಚರಣಗಳನ್ನು ಹಾಡಬೇಕಾಗಿದೆ ಎಂದರು.

ಸಂವಿಧಾನದ ಪರಿಚ್ಛೇದ 256 ಮತ್ತು 257(1) ರ ಅಡಿಯಲ್ಲಿ ಕೇಂದ್ರ ಸರ್ಕಾರವು ನೀಡುವ ನಿರ್ದೇಶನ ಹಾಗೂ ಕಾಯ್ದೆಗಳಿಗೆ ಬದ್ಧವಾಗಿ ನಡೆದುಕೊಳ್ಳುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆಯು ಕೇವಲ ‘ಮಾಹಿತಿ’ಗಾಗಿ ಅಲ್ಲ, ಬದಲಾಗಿ ‘ಕಡ್ಡಾಯ ಪಾಲನೆ’ಗಾಗಿ ನೀಡಲಾಗಿದೆ. ಕೇಂದ್ರದ ಆದೇಶದ ಪ್ರಕಾರ, ಗೀತೆಯನ್ನು ಕಡ್ಡಾಯವಾಗಿ ಹಾಡಬೇಕಾದ 5 ಪ್ರಮುಖ ಸಂದರ್ಭಗಳನ್ನು ಗುರುತಿಸಲಾಗಿದೆ. ಸಾಮೂಹಿಕ ಗಾಯನ ಸೇರಿದಂತೆ ಇತರ ಸಂದರ್ಭಗಳಲ್ಲಿ ಹಾಡುವುದಾದರೆ, ಅದು ಕೇಂದ್ರ ನಿಗದಿಪಡಿಸಿದ ಪೂರ್ಣ 6 ಚರಣಗಳ ಅಧಿಕೃತ ಆವೃತ್ತಿಯಲ್ಲೇ ಇರಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಎಲ್ಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಅಕ್ಟೋಬರ್‌ 15ಕ್ಕೆ ಮುಂದೂಡಿತು.

Related Articles

Comments (0)

Leave a Comment