ಅಲೋಕ್ ಕುಮಾರ್ ವಿರುದ್ಧದ ಟೆಲಿಫೋನ್ ಕದ್ದಾಲಿಕೆ ಪ್ರಕರಣ; ಸಿಎಟಿ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
- by Ramya B T
- November 10, 2025
- 116 Views
ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಆರೋಪ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ಇಲಾಖಾವಾರು ತನಿಖೆ ರದ್ದುಗೊಳಿಸಿದ್ದ ಕೇಂದ್ರ ಆಡಳಿತಾತ್ಮ ನ್ಯಾಯಮಂಡಳಿ (ಸಿಎಟಿ) ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ಬಿ.ಎಂ.ಶ್ಯಾಮ್ ಪ್ರಸಾದ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಸಿಎಟಿ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತಲ್ಲದೆ, ಪ್ರತಿವಾದಿ ಅಲೋಕ್ ಕುಮಾರ್ಗೆ ನೋಟಿಸ್ ಜಾರಿಗೊಳಿಸಿ ಅಂತಿಮ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿತು.
ಪ್ರಕರಣವೇನು?
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬಿ ರಿಪೋರ್ಟ್ ಸಲ್ಲಿಸಿದೆ. ಇದರಿಂದ, ಅಲೋಕ್ ಕುಮಾರ್ ಸೇರಿ ಇನ್ನಿತರ ಪೊಲೀಸ್ ಅಧಿಕಾರಿಗಳ ವಿರುದ್ಧ ಆದೇಶಿಸಲಾಗಿದ್ದ ಇಲಾಖಾ ತನಿಖೆ ಕೈಬಿಡಲು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದರು. ಆದರೆ, ಇಲಾಖಾ ವಿಚಾರಣೆ ಕೈಬಿಡುವ ಆದೇಶ ಅಧಿಕೃತವಾಗಿ ಪ್ರಕಟವಾಗಿರಲಿಲ್ಲ.
ಅಷ್ಟರಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾಗಿ, ಅಧಿಕಾರಕ್ಕೆ ಬಂದಿದ್ದ ನೂತನ ಕಾಂಗ್ರೆಸ್ ಸರ್ಕಾರ ಇಲಾಖಾ ವಿಚಾರಣೆ ಮುಂದುವರಿಸಲು ತೀರ್ಮಾನಿಸಿತ್ತು. ಕುರಿತು ಇಲಾಖಾ ವಿಚಾರಣೆ ನಡೆಸುವಂತೆ 2025ರ ಮೇ 9ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನೋಟಿಸ್ ನೀಡಿದ್ದರು. ಇದರಿಂದ, ಅಲೋಕ್ ಕುಮಾರ್ ಸಿಎಟಿ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿಯ ಇಬ್ಬರು ಸದಸ್ಯರಲ್ಲಿ ಒಬ್ಬರು ಅಲೋಕ್ ಕುಮಾರ್ ಪರವಾಗಿ ತೀರ್ಪು ನೀಡಿದ್ದರೆ, ಮತ್ತೊಬ್ಬರು ವಿರುದ್ಧ ತೀರ್ಪು ನೀಡಿದ್ದರು. ದ್ವಿಸದಸ್ಯ ಪೀಠದಿಂದ ಭಿನ್ನ ತೀರ್ಪು ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮೂರನೇ ನ್ಯಾಯಾಧೀಶರಿಗೆ ವರ್ಗಾವಣೆ ಮಾಡಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಸಿಎಟಿಯ ಅಧ್ಯಕ್ಷರಾದ ನ್ಯಾಯಮೂರ್ತಿ ರಣಜಿತ್ ವಸಂತರಾವ್ ಮೊರೆ ಅವರಿದ್ದ ನ್ಯಾಯಪೀಠ, ಅಲೋಕ್ ಕುಮಾರ್ ವಿರುದ್ಧದ ಇಲಾಖಾವಾರು ತನಿಖೆ ಆದೇಶ ರದ್ದುಗೊಳಿಸಿತ್ತಲ್ಲದೆ, ಅವರಿಗೆ ಸಲ್ಲಬೇಕಾದ ಎಲ್ಲ ರೀತಿಯ ಸವಲತ್ತುಗಳನ್ನು ಲಭ್ಯವಾಗುವಂತೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿತ್ತು. ಇದರಿಂದ, ಸಿಎಟಿ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
Related Articles
Thank you for your comment. It is awaiting moderation.



Comments (0)