ಮಾಜಿ ಶಾಸಕ ಚೌಡರೆಡ್ಡಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Legal Samachar Desk
- July 7, 2026
- 3 Views
ಬೆಂಗಳೂರು: ಸಾಮಾನ್ಯ ನಾಗರಿಕರಿಂದ ನಡೆಯುವ ಭೂ ಕಬಳಿಕೆಗೂ, ರಾಜಕೀಯ ಅಧಿಕಾರ ಹೊಂದಿದ ವ್ಯಕ್ತಿಗಳು ಭೂ ಕಬಳಿಕೆ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ರಾಜಕೀಯ ಅಧಿಕಾರಸ್ಥರು ಭೂ ಕಬಳಿಕೆ ಮಾಡುವುದು ಆಡಳಿತದ ಮೇಲಿನ ಸಾರ್ವಜನಿಕ ನಂಬಿಕೆಯನ್ನೇ ಕುಗ್ಗಿಸುತ್ತದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಭೂ ಕಬಳಿಕೆ ಆರೋಪದಲ್ಲಿ ಮಾಜಿ ಶಾಸಕ ಚೌಡರೆಡ್ಡಿ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ಸರ್ಕಾರಿ ಜಮೀನು ಒತ್ತುವರಿ ಆರೋಪ ಸಂಬಂಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಚೌಡರೆಡ್ಡಿ ಹಾಗೂ ಈ ಹಿಂದಿನ ಚಿಂತಾಮಣಿ ಪೌರಾಯುಕ್ತರಾಗಿದ್ದ ಬಿ.ಎಚ್. ನಾರಾಯಣಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಪ್ರಕರಣವಿನ್ನೂ ತನಿಖಾ ಹಂತದಲ್ಲಿದ್ದು, ಪ್ರಜ್ಞಾಪೂರ್ವಕವಾಗಿ ಯಾವುದೇ ಹೆಚ್ಚಿನ ಅವಲೋಕನ ಮಾಡುವುದು ಈ ಹಂತದಲ್ಲಿ ಸೂಕ್ತವಲ್ಲ. ಸಾರ್ವಜನಿಕ ನಂಬಿಕೆಗಳನ್ನು ಪೋಷಿಸಬೇಕಾದವರೇ ಸಾರ್ವಜನಿಕ ತಪ್ಪುಗಳ ಫಲಾನುಭವಿಗಳಾಗಿರುವುದು ಆಘಾತಕಾರಿ. ಅದಾಗ್ಯೂ, ಈ ಹಂತದಲ್ಲಿ ತನಿಖೆ ತಡೆಯುವುದು ಸತ್ಯ ಕೋಣೆಯನ್ನು ಪ್ರವೇಶಿಸುವ ಮೊದಲೇ ಬಾಗಿಲು ಮುಚ್ಚಿದಂತಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾದ ಹಾಗೂ ವಿಚಾರಣೆಗೆ ಅರ್ಹವಾದ ಅಂಶಗಳನ್ನು ಒಳಗೊಂಡಿದ್ದು, ಆರೋಪಗಳ ಕೂಲಂಕಷ ತನಿಖೆ ಅನಿವಾರ್ಯವಿದೆ. ಆದ್ದರಿಂದ, ಲೋಕಾಯುಕ್ತ ಸಂಸ್ಥೆಯು ಈ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ಗರಿಷ್ಠ 6 ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣವೇನು?
ಚಿಂತಾಮಣಿ ತಾಲೂಕು ಕನ್ನಂಪಲಿ ಗ್ರಾಮದ ಸರ್ವೇ ನಂಬರ್ 11ರಲ್ಲಿನ 1.19 ಗುಂಟೆ ಹುಲ್ಲುಬನ್ನಿ (ಹುಲ್ಲುಗಾವಲು, ಗೋಮಾಳ) ಖರಾಬು ಜಮೀನನ್ನು ಅಕ್ರಮವಾಗಿ ಚೌಡರೆಡ್ಡಿ ಮತ್ತು ಬಾಲಾಜಿ ರೆಡ್ಡಿ ಅವರಿಗೆ ನಿಯಮಬಾಹಿರವಾಗಿ ಖಾತೆ ಮಾಡಿಸಿಕೊಡಲಾಗಿದೆ. ಒತ್ತುವರಿ ಮಾಡಲಾದ ಈ ಸರ್ಕಾರಿ ಜಮೀನನ್ನು ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಲಾಗಿದೆ ಎಂಬ ಆರೋಪವಿದೆ.
ಈ ಕುರಿತಂತೆ ಸೊನ್ನಶೆಟ್ಟಿಹಳ್ಳಿಯ ಆರ್. ವೆಂಕಟರಮಣ ಅವರು ಚೌಡರೆಡ್ಡಿ, ನಾರಾಯಣಪ್ಪ ಸೇರಿ ಹಲವು ಅಧಿಕಾರಿಗಳ ವಿರುದ್ಧ 2016ರ ಏಪ್ರಿಲ್ 24ರಂದು ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸಿದ್ದರು. ಅರ್ಜಿದಾರರೂ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ಈ ಒತ್ತುವರಿಗೆ ಅನುಕೂಲ ಮಾಡಿಕೊಟ್ಟು ತಮ್ಮ ಅಧಿಕಾರ ದುರುಪಯೋಗ ಮಾಡಿ ಕರ್ತವ್ಯಲೋಪ ಎಸಗಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು.
ದೂರು ಆಧರಿಸಿ ಲೋಕಾಯುಕ್ತ ಪೊಲೀಸರು, ಚೌಡರೆಡ್ಡಿ ಮತ್ತು ಬಿ.ಎಚ್. ನಾರಾಯಣಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 13(1)(ಸಿ)(ಡಿ) ಹಾಗೂ ಐಪಿಸಿ ಸೆಕ್ಷನ್ 447 ಮತ್ತು 34ರ ಅಡಿಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿ 2017ರ ಮಾರ್ಚ್ 11ರಂದು ಎಫ್ಐಆರ್ ದಾಖಲಿಸಿದ್ದರು.
Related Articles
Thank you for your comment. It is awaiting moderation.


Comments (0)