ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಕೆ; ಅಟ್ಟಿಕಾ ಗೋಲ್ಡ್ನ ಪಿ.ಎಸ್. ಅಯೂಬ್ಗೆ ಹೈಕೋರ್ಟ್ ತುರ್ತು ನೋಟಿಸ್
- by LegalSamachar
- July 4, 2026
- 6 Views
ಬೆಂಗಳೂರು: ಅಟ್ಟಿಕಾ ಗೋಲ್ಡ್ ಸಂಸ್ಥೆಯೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದ ಆರೋಪ ಕುರಿತಂತೆ ಅಟ್ಟಿಕಾ ಗೋಲ್ಡ್ನ ಪಿ.ಎಸ್. ಅಯೂಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬುಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.
ಇದೇ ವೇಳೆ, ಅಟ್ಟಿಕಾ ಗೋಲ್ಡ್ನ ಮಾಜಿ ನೌಕರರ ವಿರುದ್ಧ ಚಿನ್ನ ಕಳವು ಆರೋಪ ಮಾಡಿ ಬಾಬು ನೀಡಿದ್ದ ದೂರಿನ ಆಧರಿಸಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ಎಫ್ಐಅರ್ಗೆ ನ್ಯಾಯಾಲಯ ತಡೆ ನೀಡಿದೆ.
ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಮಹಾರಾಷ್ಟ್ರದ ಸಾಂಗ್ಲಿಯ ಭಾಗವತ್ ವಸಂತ್ ತಮ್ಖಡೆ, ತಮಿಳುನಾಡಿನ ಚೆಟ್ಟಿಕುಲಂನ ಥಾನೇಶ್ ಕುಮಾರ್, ತೂತುಕುಡಿಯ ವೆಂಕಟೇಶ್ ವೆಲ್ಲೈಸಾಮಿ ಹಾಗೂ ಬೆಂಗಳೂರಿನ ಅಕ್ಕಿಪೇಟೆಯ ಆರ್. ಮಿಥುನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಪಿ.ಎಸ್. ಅಯೂಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬು ಅವರು ಅಟ್ಟಿಕಾ ಗೋಲ್ಡ್ಗೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಈ ಹಿಂದೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ಸಂಸ್ಥೆಯ ಮಾಜಿ ನೌಕರರ ವಿರುದ್ಧ ದಾಖಲಿಸಿರುವ ಚಿನ್ನ ಕಳವಿನ ಪ್ರಸ್ತುತ ದೂರಿನಲ್ಲಿ ತಾವೇ ಅಟ್ಟಿಕಾ ಗೋಲ್ಡ್ ಮಾಲೀಕರೆಂದು ಉಲ್ಲೇಖಿಸಿದ್ದಾರೆ. ಆದ್ದರಿಂದ, ಮೊದಲು ಅವರ ವಿರುದ್ಧ ಕ್ರಮ ಜರುಗಿಸಲು ನ್ಯಾಯಾಲಯ ಆದೇಶಿಸಬೇಕೆಂದು ಕೋರಿದರು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಎಸ್ಪಿಪಿ ಬಿ.ಎನ್. ಜಗದೀಶ್ ಅವರು, ಅಟ್ಟಿಕಾ ಗೋಲ್ಡ್ ಸಂಸ್ಥೆಗೂ ತಮಗೂ ಯಾವ ಸಂಬಂಧವೂ ಇಲ್ಲ ಎಂದು ಕೆಲ ಕೇಸ್ಗಳಲ್ಲಿ ಬಾಬು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ, ಈ ಪ್ರಕರಣದ ದೂರಿನಲ್ಲಿ ತಾವೇ ಅಟ್ಟಿಕಾ ಗೋಲ್ಡ್ ಮಾಲೀಕರೆಂದು ಹೇಳಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಅವರ ವಿರುದ್ಧ ಕ್ರಮ ಜರುಗಿಸುವ ಅಗತ್ಯವಿದೆ. ಅಟ್ಟಿಕಾ ಗೋಲ್ಡ್ನೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ತಿಳಿಸಿ, ಅವರು ಈ ನ್ಯಾಯಾಲಯದಿಂದ ಪಡೆದುಕೊಂಡಿರುವ ಆದೇಶಗಳ ವಿವರಗಳನ್ನು ಕೋರ್ಟ್ಗೆ ಒದಗಿಸಲಾಗುವುದು ಎಂದರು.
ಇದನ್ನು ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಬೊಮ್ಮನಹಳ್ಳಿ ಬಾಬು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದ ಎಫ್ಐಆರ್ಗೆ ತಡೆ ನೀಡಿತಲ್ಲದೆ, ಅರ್ಜಿಯಲ್ಲಿ ಎರಡನೇ ಪ್ರತಿವಾದಿಯಾಗಿರುವ ಪಿ.ಎಸ್. ಅಯೂಬ್ಗೆ ತುರ್ತು ನೋಟಿಸ್ ಜಾರಿಗೊಳಿಸಿತು. ಜತೆಗೆ, ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಕುರಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಎಸ್ಪಿಪಿಗೆ ಸೂಚಿಸಿ, ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)