ನಿವೃತ್ತಿ ದಿನದ ಮಧ್ಯಾಹ್ನದ ನಂತರ ಅಧಿಕಾರ ವಹಿಸಿಕೊಂಡರೂ ಬಡ್ತಿ, ಪಿಂಚಣಿಗೆ ಅರ್ಹ; ಹೈಕೋರ್ಟ್
- by LegalSamachar
- July 7, 2026
- 3 Views
ಬೆಂಗಳೂರು: ನಿವೃತ್ತಿಯ ದಿನಾಂಕದಂದು ಬಡ್ತಿ ಪಡೆದ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳುವ ಸರ್ಕಾರಿ ನೌಕರ ಮಧ್ಯಾಹ್ನದ ನಂತರ ಅಧಿಕಾರ ವಹಿಸಿಕೊಂಡರೂ ಆ ದಿನಾಂಕದಿಂದ ಆತ ಬಡ್ತಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಅರ್ಹನಾಗಿರುತ್ತಾನೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಧ್ಯಾಪಕರೊಬ್ಬರ ಪರವಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಸರ್ಕಾರವು ಪ್ರತಿವಾದಿ ಎ.ಆರ್. ರಂಗಸ್ವಾಮಿ ಅವರನ್ನು ಅವರ ನಿವೃತ್ತಿಯ ದಿನಾಂಕದಂದು ಉನ್ನತ ವೃಂದಕ್ಕೆ ಬಡ್ತಿ ನೀಡಿದ್ದು, ನಂತರ ಅದೇ ಸರ್ಕಾರ ಬಡ್ತಿ ಸೌಲಭ್ಯಗಳನ್ನು ನಿರಾಕರಿಸಿದೆ. ಉದ್ಯೋಗಿಗೆ ಅವರ ನಿವೃತ್ತಿಯ ದಿನಾಂಕದಂದು ಬಡ್ತಿ ನೀಡಿದಾಗ ಮತ್ತು ಅವರು ಉನ್ನತ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೆ, ಆನಂತರ ಸರ್ಕಾರ ಬಡ್ತಿ ಸೌಲಭ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಬಡ್ತಿಯ ಮುಂದಿನ ದಿನಾಂಕದಿಂದ ವೇತನ ಹೆಚ್ಚಳ ಸಂಗ್ರಹವಾಗುತ್ತದೆಂದು ಸರ್ಕಾರ ಹೇಳುತ್ತಿದೆ. ಆದರೆ, ಕರ್ನಾಟಕ ನಾಗರಿಕ ಸೇವಾ ನಿಯಮ (ಕೆಸಿಎಸ್‌ಆರ್ ) 23ನೇ ನಿಯಮದ ಪ್ರಕಾರ, ಸರ್ಕಾರಿ ನೌಕರ ಹುದ್ದೆಯನ್ನು ವಹಿಸಿಕೊಂಡ ದಿನಾಂಕದಿಂದ ಬಡ್ತಿ ಆರಂಭವಾದಾಗ, ಮುಂದಿನ ದಿನಾಂಕದಿಂದ ಆರ್ಥಿಕ ಪ್ರಯೋಜನಗಳು ಅನ್ವಯವಾಗುತ್ತವೆಂದು ಭಾವಿಸುವುದು ತಪ್ಪು ಎಂದಿರುವ ಹೈಕೋರ್ಟ್, ಕೆಎಟಿ ಆದೇಶವನ್ನು ಎತ್ತಿಹಿಡಿದಿದೆ. ಜತೆಗೆ, ಪ್ರತಿವಾದಿಗೆ ಬಡ್ತಿಯಿಂದ ಉಂಟಾಗುವ ಎಲ್ಲ ಪ್ರಯೋಜನಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೆಎಟಿ ನೀಡಿರುವ ನಿರ್ದೇಶನ ಸರಿಯಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಾಧ್ಯಾಪಕರಾಗಿ ಬಡ್ತಿ ಪಡೆದಿದ್ದ ಪ್ರತಿವಾದಿ ಅದೇ ದಿನ ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾಗಿದ್ದರು. ಕೆಸಿಎಸ್‌ಆರ್ ನಿಯಮ 23ರ ಪ್ರಕಾರ, ಸರ್ಕಾರಿ ನೌಕರರು ಆ ಹುದ್ದೆಯ ಕರ್ತವ್ಯಗಳನ್ನು ವಹಿಸಿಕೊಂಡ ದಿನಾಂಕದಿಂದ ಕರ್ತವ್ಯ ಬದಲಾವಣೆಯನ್ನು ಒಳಗೊಂಡ ಬಡ್ತಿ ಜಾರಿಗೆ ಬರುತ್ತದೆ. ಆದರೆ, ಉದ್ಯೋಗಿ ನಿವೃತ್ತಿಯ ದಿನಾಂಕದಂದು ಮಧ್ಯಾಹ್ನ ಅಧಿಕಾರ ವಹಿಸಿಕೊಂಡರು ಎಂಬ ಏಕೈಕ ಕಾರಣದಿಂದ ಪ್ರಯೋಜನಗಳನ್ನು ನಿರಾಕರಿಸುವುದನ್ನು ಒಪ್ಪಲಾಗದು ಎಂದು ಹೈಕೋರ್ಟ್ ಹೇಳಿದೆ.
ಸರ್ಕಾರದ ವಾದವೇನು?
ಪ್ರತಿವಾದಿಗೆ 2023ರ ಮೇ 31ರಂದು ಸಂಜೆ ಬಡ್ತಿ ನೀಡಲಾಗಿತ್ತು. ಅದೇ ದಿನ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ. ಕೆಸಿಎಸ್ಆರ್ ನಿಯಮ 23ರ ಪ್ರಕಾರ, ಸರ್ಕಾರಿ ನೌಕರ ಮಧ್ಯಾಹ್ನ 12ರೊಳಗೆ ಹುದ್ದೆಯನ್ನು ವಹಿಸಿಕೊಂಡಿದ್ದರೆ ಮಾತ್ರ ಅವರ ಸೇವೆ ಪರಿಗಣಿಸಲ್ಪಡುತ್ತದೆ. ಆದರೆ, ಈ ಪ್ರಕರಣದಲ್ಲಿ ಸಂಜೆ ಬಡ್ತಿ ನೀಡಲಾಗಿದ್ದ ಹುದ್ದೆ ವಹಿಸಿಕೊಂಡಿದ್ದು, ಅವರ ಸೇವೆ ಮರುದಿನದ ಲೆಕ್ಕಕ್ಕೆ ಬರುತ್ತದೆ. ಅಧಿಕಾರ ವಹಿಸಿಕೊಂಡ ನಂತರ ಸ್ವಲ್ಪ ಹೊತ್ತಿನಲ್ಲೇ ನಿವೃತ್ತರಾಗಿದ್ದಾರೆ. ಆದ್ದರಿಂದ, ಪ್ರಾಧ್ಯಾಪಕ ಹುದ್ದೆಯ ಬದಲು ಹಿರಿಯ ಉಪನ್ಯಾಸಕ ವೃಂದಕ್ಕೆ ನೀಡುವ ವೇತನ ಭತ್ಯೆ ಮತ್ತು ಪಿಂಚಣಿ ಹಾಗೂ ಇನ್ನಿತರ ಸವಲತ್ತುಗಳನ್ನು ನೀಡಲಾಗುವುದು ಎಂದು ಸರ್ಕಾರ ವಾದಿಸಿತ್ತು.
ಪ್ರಕರಣವೇನು?
ಬೆಂಗಳೂರಿನ ಬ್ಯಾಡರಹಳ್ಳಿಯ ಎ.ಆರ್. ರಂಗಸ್ವಾಮಿ ಅವರು ಶಾಲಾ ಮುಖ್ಯೋಪಾಧ್ಯರಾಗಿ ನೇಮಕಗೊಂಡಿದ್ದರು. 2023ರ ಮೇ 31ರಂದು ಅವರು ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ಪಡೆದಿದ್ದರು. ಅದೇ ದಿನ ಅವರು ಸೇವಾ ಅವಧಿ ಪೂರೈಸಿ ನಿವೃತ್ತಗೊಳ್ಳಬೇಕಿತ್ತು. ಅವರು ಆ ದಿನ ಸಂಜೆ 5.20ಕ್ಕೆ ಪದೋನ್ನತಿ ನೀಡಲಾಗಿದ್ದ ಹುದ್ದೆ ವಹಿಸಿಕೊಂಡು, ಸೇವೆಯಿಂದ ನಿವೃತ್ತಿಯೂ ಆದರು. ಆನಂತರ, 2023ರ ಆಗಸ್ಟ್ 14ರಂದು ಅವರು ಪದೋನ್ನತಿ ನೀಡಲಾದ ದಿನಾಂಕದಿಂದ ಪಿಂಚಣಿ ಮತ್ತಿತರ ಭತ್ಯೆಗಳನ್ನು ನೀಡುವಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ, ಇಲಾಖೆ ಅವರ ಮನವಿ ತಿರಸ್ಕರಿಸಿತ್ತು.
ಇಲಾಖೆಯ ಕ್ರಮ ಪ್ರಶ್ನಿಸಿ ರಂಗಸ್ವಾಮಿ ಅವರು ಕೆಎಟಿ ಮೊರೆ ಹೋಗಿದ್ದರು. ಅವರ ಅರ್ಜಿ ಪುರಸ್ಕರಿಸಿದ್ದ ಕೆಎಟಿ, ಬಡ್ತಿ ನಂತರದ ಎಲ್ಲ ಸವಲತ್ತುಗಳನ್ನು ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆ ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
Related Articles
Thank you for your comment. It is awaiting moderation.


Comments (0)