ಅಣ್ಣನ ಸಾವಿನಿಂದ ತಮ್ಮನೂ ಪ್ರೀತಿ ವಂಚಿತನಾಗುತ್ತಾನೆ; ರಸ್ತೆ ಅಪಘಾತದ ಪರಿಹಾರದಲ್ಲಿ ಸಹೋದರನಿಗೂ ಪಾಲು ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೇಲೆ ಅವಲಂಬಿತನಾದ ಕಿರಿಯ ಸಹೋದರನೂ ಆರ್ಥಿಕ ಪೋಷಣೆಯ ಜತೆಗೆ ಅಣ್ಣನ ಪ್ರೀತಿ ಮತ್ತು ಮಮಕಾರದಿಂದ ವಂಚಿತನಾಗಿರುತ್ತಾನೆ. ಆದ್ದರಿಂದ, ಪೋಷಕರಿಗೆ ಸಿಗುವ ಪರಿಹಾರ ಮೊತ್ತದಲ್ಲಿ ಪ್ರತ್ಯೇಕ ಪಾಲು ಪಡೆದುಕೊಳ್ಳುವ ಹಕ್ಕು ತಮ್ಮನೂ ಹೊಂದಿರುತ್ತಾನೆ ಎಂದು ಹೈಕೋರ್ಟ್ ಆದೇಶಿಸಿದೆ.

ಜತೆಗೆ, ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಬಿ.ಟೆಕ್ ವಿದ್ಯಾರ್ಥಿಯೊಬ್ಬನ ಕುಟುಂಬದವರಿಗೆ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (ಎಂಎ‌ಸಿಟಿ) ಘೋಷಿಸಿದ್ದ ಪರಿಹಾರದ ಮೊತ್ತವನ್ನು 23,78,000 ರೂ.ಗಳಿಂದ 39,45,000 ರೂ. ಗಳಿಗೆ ಹೆಚ್ಚಳ ಮಾಡಿದೆ.

ಪರಿಹಾರ ಮೊತ್ತ ಹೆಚ್ಚಿಸುವಂತೆ ಕೋರಿ ಆಂಧ್ರಪ್ರದೇಶದ ಅನಂತಪುರ ಮೂಲದ ಮೃತ ವ್ಯಕ್ತಿಯ ಪೋಷಕರಾದ ಚಾಕಲಿ ರಾಮಾಂಜಿನಪ್ಪ, ಸಿ. ಶಿವಮ್ಮ ಹಾಗೂ ಸಹೋದರ ಚಾಕಲಿ ಲೋಕೇಶ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ನ್ಯಾಯಾಧಿಕರಣ ಈ ಹಿಂದೆ ಮೃತ ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಉಂಟಾದ ಪ್ರೀತಿ-ವಾತ್ಸಲ್ಯದ ನಷ್ಟಕ್ಕಾಗಿ ತಂದೆ-ತಾಯಿಗೆ ತಲಾ 40 ಸಾವಿರ ರೂ. ಪರಿಹಾರ ಘೋಷಿಸಿತ್ತು. ಆದರೆ, ಮೃತನ ಅವಲಂಬಿತನಾಗಿದ್ದ ಕಿರಿಯ ಸಹೋದರನೂ ಸಹ ತನ್ನ ಅಣ್ಣನ ಪ್ರೀತಿ ಹಾಗೂ ವಾತ್ಸಲ್ಯವನ್ನು ಕಳೆದುಕೊಂಡಿರುವುದರಿಂದ ಆತನೂ ಪರಿಹಾರಕ್ಕೆ ಅರ್ಹನಾಗಿರುತ್ತಾನೆ ಎಂದಿರುವ ಹೈಕೋರ್ಟ್, ಆತನಿಗೂ 44 ಸಾವಿರ ರೂ. ಪರಿಹಾರ ಘೋಷಿಸಿದೆ. ಜತೆಗೆ, ತಂದೆ-ತಾಯಿಗೆ ಘೋಷಿಸಲಾಗಿದ್ದ ತಲಾ 40 ಸಾವಿರ ರೂ. ಗಳನ್ನು ತಲಾ 44 ಸಾವಿರ ರೂ. ಗಳಿಗೆ ಹೆಚ್ಚಳ ಮಾಡಿದೆ.

ಇನ್ನು ಮೃತನ ಕಾಲ್ಪನಿಕ ಮಾಸಿಕ ಆದಾಯವನ್ನು 15 ಸಾವಿರ ರೂ.ಗಳ ಬದಲಿಗೆ 25 ಸಾವಿರ ರೂ. ಎಂದು ಪರಿಗಣಿಸಿರುವ ಹೈಕೋರ್ಟ್, ಎಂಎಸಿಟಿ ಘೋಷಿಸಿದ್ದ ಒಟ್ಟು ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿದ್ದು, ಹೆಚ್ಚುವರಿ ಮೊತ್ತ 15,67,000 ರೂ.ಗಳನ್ನು ಮೃತನ ಕುಟುಂಬಕ್ಕೆ ವಾರ್ಷಿಕ ಶೇ. 6 ಬಡ್ಡಿಯೊಂದಿಗೆ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದೆ.

ಕೌಶಲರಹಿತ ಕಾರ್ಮಿಕನೆಂದು ಪರಿಗಣಿಸಲಾಗದು:
ಮೃತನ ಕಾಲ್ಪನಿಕ ಮಾಸಿಕ ಆದಾಯವನ್ನು ನ್ಯಾಯಾಧಿಕರಣ 15 ಸಾವಿರ ರೂ. ಎಂದು ಪರಿಗಣಿಸಿತ್ತು. ಆದರೆ, ಮೃತ ಗಣೇಶ್ ಬಿಟೆಕ್ ವಿದ್ಯಾರ್ಥಿಯಾಗಿದ್ದರಿಂದ ಆತನನ್ನು ಕೌಶಲರಹಿತ ಕಾರ್ಮಿಕ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ, ಕರ್ನಾಟಕ ಹೈಕೋರ್ಟ್‌ನ ವಿವಿಧ ತೀರ್ಪುಗಳ ಅನ್ವಯ ಇಂಜಿನಿಯರಿಂಗ್/ಬಿ.ಟೆಕ್ ವಿದ್ಯಾರ್ಥಿಗಳ ಕಾಲ್ಪನಿಕ ಮಾಸಿಕ ಆದಾಯವನ್ನು 25 ಸಾವಿರ ರೂ. ಎಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದೆ.

ಎಂಎ‌ಸಿಟಿ ಘೋಷಿಸಿಸದ್ದ 23,78,000 ರೂ. ಒಟ್ಟು ಪರಿಹಾರ ಮೊತ್ತವನ್ನು 39,45,000 ರೂ. ಗಳಿಗೆ ಹೆಚ್ಚಿಸಿರುವ ಹೈಕೋರ್ಟ್, ಮೃತನ ಸಹೋದರ 44 ಸಾವಿರ ರೂ. ಮತ್ತು ಅದಕ್ಕೆ ತಕ್ಕ ಬಡ್ಡಿಯನ್ನು ಮಾತ್ರ ಪಡೆಯಲು ಅರ್ಹನಾಗಿರುತ್ತಾನೆ. ಉಳಿದ ಮೊತ್ತದಲ್ಲಿ ಮೃತನ ತಂದೆ-ತಾಯಿ ಸಮಾನ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣವೇನು?
ಅನಂತಪುರ ಮೂಲದ ಬಿ.ಟೆಕ್ ವಿದ್ಯಾರ್ಥಿ ಚಾಕಲಿ ಗಣೇಶ್ (22) ಎಂಬಾತ 2021ರ ಜುಲೈ 18ರಂದು ಬೆಂಗಳೂರಿನ ಯಲಹಂಕದ ಅಲ್ಲಾಳಸಂದ್ರ ಸೇತುವೆಯ ಬಳಿ ಬೈಕ್‌ನಲ್ಲಿ ತೆರಳುತಿದ್ದಾಗ ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಣೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜುಲೈ 19ರಂದು ಮೃತಪಟ್ಟಿದ್ದರು. ವಿದ್ಯಾರ್ಥಿ ಗಣೇಶ್ ಮಾಲ್ ಒಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಪರಿಹಾರ ಕೋರಿ ಮೃತನ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಎಂಎಸಿಟಿ, ಅವಲಂಬನೆ ಹಾಗೂ ಭವಿಷ್ಯದ ಆದಾಯ 22,68,000 ರೂ., ಮಕ್ಕಳಿಂದ ಸಿಗಬೇಕಾದ ಪ್ರೀತಿ, ವಾತ್ಸಲ್ಯ ಮತ್ತು ಒಡನಾಟಕ್ಕಾಗಿ ಪೋಷಕರಿಗೆ ತಲಾ 40 ಸಾವಿರ ರೂ.ಗಳಂತೆ 80 ಸಾವಿರ ರೂ. ಹಾಗೂ ಆರ್ಥಿಕ ನಷ್ಟ ಮತ್ತು ಅಂತ್ಯ ಸಂಸ್ಕಾರದ ವೆಚ್ಚವಾಗಿ 30 ಸಾವಿರ ರೂ. ಸೇರಿ ಒಟ್ಟು 23,78,000 ರೂ. ಪರಿಹಾರ ಘೋಷಿಸಿ 2022ರ ಸೆಪ್ಟೆಂಬರ್ 16ರಂದು ಆದೇಶ ನೀಡಿತ್ತು‌. ಇದರಿಂದ, ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೋರಿ ಮೃತ ಗಣೇಶ್ ಪೋಷಕರು ಹಾಗೂ ಸಹೋದರ ಹೈಕೋರ್ಟ್ ಮೊರೆ ಹೋಗಿದ್ದರು.

Related Articles

Comments (0)

Leave a Comment