ವೀರಪ್ಪನ್‌ ಕಾರ್ಯಾಚರಣೆ; ಎಸ್‌ಟಿಎ‌ಫ್‌ನ 72 ಸಿಬ್ಬಂದಿಗೆ ಬಹುಮಾನ ನೀಡುವ ಬಗ್ಗೆ ಪರಿಗಣಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಕುಖ್ಯಾತ ಕಾಡುಗಳ್ಳ ವೀರಪ್ಪನ್‌ ಮಟ್ಟ ಹಾಕಲು ರಚಿಸಲಾಗಿದ್ದ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್‌) ಸಿಬ್ಬಂದಿಯಾಗಿದ್ದ 72 ಮಂದಿಗೆ 12 ವಾರಗಳ ಒಳಗೆ ಬಹುಮಾನದ ಮೊತ್ತ ಪಾವತಿಸುವ ಕುರಿತು ಪರಿಗಣಿಸುವಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಹೈಕೋರ್ಟ್‌ ನಿರ್ದೇಶಿಸಿದೆ.

ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವರಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ಬಹುಮಾನದ ಮೊತ್ತವನ್ನು ತಮಗೂ ವಿಸ್ತರಿಸಬೇಕೆಂಬ ಮನವಿ ತಿರಸ್ಕರಿಸಿ ಅರಣ್ಯ ಇಲಾಖೆ ನೀಡಿದ್ದ ಹಿಂಬರಹ ರದ್ದುಕೋರಿ ಎಸ್. ಶ್ರೀ‌ನಿವಾಸ, ಮಹದೇವಮ್ಮ ಸೇರಿ ಎಸ್‌ಟಿಎಫ್‌ ಸಿಬ್ಬಂದಿಯಾಗಿದ್ದ 72 ಮಂದಿ ಹೈಕೋರ್ಟ್‌ಗೆ 5 ಪ್ರತ್ಯೇಕ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು.

ಈ ಅರ್ಜಿಗಳನ್ನು ಏಪ್ರಿಲ್ 21ರಂದು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಕಾರ್ಯದರ್ಶಿ 2015ರ ಆಗಸ್ಟ್ 17ರಂದು ನೀಡಿದ್ದ ಹಿಂಬರವನ್ನು ರದ್ದುಪಡಿಸಿದೆ.

ಜತೆಗೆ, ಇಂಥದೇ ಪ್ರಕರಣವೊಂದರಲ್ಲಿ ಇತರ ಎಸ್‌ಟಿ‌ಎಫ್ ಸಿಬ್ಬಂದಿ ಪರವಾಗಿ ಇದೇ ಹೈಕೋರ್ಟ್‌‌ನ ಸಮನ್ವಯ ಪೀಠ 2024ರ ಆಗಸ್ಟ್ 14ರಂದು ನೀಡಿರುವ ತೀರ್ಪನ್ನು ಗಮನದಲ್ಲಿಟ್ಟುಕೊಂಡು, 2005ರ ಜುಲೈ 8ರ ಸರ್ಕಾರಿ ಆದೇಶದ ಅನುಸಾರ ಅರ್ಜಿದಾರರಿಗೆ ಬಹುಮಾನದ ಮೊತ್ತ ಬಿಡುಗಡೆ ಮಾಡುವ ಕುರಿತು ಪರಿಗಣಿಸಬೇಕು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ನ್ಯಾಯಾಲಯ ‌ನಿರ್ದೇಶಿಸಿದೆ.

ಈ ಪ್ರಕ್ರಿಯೆಯನ್ನು ಆದಷ್ಟು ಶೀಘ್ರವಾಗಿ ಅಂದರೆ, ತೀರ್ಪಿನ ದೃಢೀಕೃತ ಪ್ರತಿ ದೊರೆತ ದಿನಾಂಕದಿಂದ ಹನ್ನೆರಡು ವಾರಗಳ ಒಳಗಾಗಿ ಪೂರ್ಣಗೊಳಿಸಬೇಕು. ಅರ್ಜಿದಾರರನ್ನು ಮತ್ತೆ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡದೆ, ಇದೇ ಪ್ರಕರಣದ ಇತರ ಸಿಬ್ಬಂದಿಗೆ ನೀಡಲಾದ ಸೌಲಭ್ಯಗಳನ್ನು ಅರ್ಜಿದಾರರಿಗೂ ಸಮಾನವಾಗಿ ವಿಸ್ತರಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ತಾರತಮ್ಯ ಮಾಡಲಾಗದು:
ವೀರಪ್ಪನ್ ಹತನಾದ ದಿನದಂದು ಸ್ಥಳದಲ್ಲಿ ಉಪಸ್ಥಿತರಿದ್ದ ಸೀಮಿತ ಅಧಿಕಾರಿಗಳು ಮಾತ್ರ ಬಹುಮಾನಕ್ಕೆ ಅರ್ಹರಾಗಿದ್ದಾರೆ ಎಂಬ ರಾಜ್ಯ ಸರ್ಕಾರದ ನೆಪವನ್ನು ಈ ಹಿಂದೆಯೇ ಹೈಕೋರ್ಟ್ ತಿರಸ್ಕರಿಸಿದೆ. ವೀರಪ್ಪನ್ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹಲವು ಸಿಬ್ಬಂದಿ ಈಗಾಗಲೇ ಪರಿಹಾರ ಪಡೆದಿರುವವರಂತೆಯೇ ಅರ್ಜಿದಾರರೂ ಬಹುಮಾನಕ್ಕೆ ಅರ್ಹರಾಗಿದ್ದಾರೆ. ಇವರಿಗೆ ಬಹುಮಾನದ ಮೊತ್ತ ನಿರಾಕರಿಸುವುದು ಈಗಾಗಲೇ ನ್ಯಾಯಾಂಗದ ಮಧ್ಯಸ್ಥಿಕೆಯಿಂದ ಸರಿಪಡಿಸಲ್ಪಟ್ಟಿರುವ ಅಕ್ರಮವನ್ನು ಶಾಶ್ವತಗೊಳಿಸಿದಂತಾಗಲಿದೆ. ಈ ಹಿಂದೆಯೇ ನ್ಯಾಯಾಲಯ ಪ್ರಕರಣವನ್ನು ನಿರ್ಧರಿಸಿ, ಪರಿಹಾರ ದೊರಕಿಸಿರುವುದರಿಂದ ಸರ್ಕಾರ ಮತ್ತು ಅದರ ಸಕ್ಷಮ ಪ್ರಾಧಿಕಾರಗಳು ಇಂಥದ್ದೇ ಪರಿಸ್ಥಿತಿಯಲ್ಲಿರುವವರಿಗೆ ಮತ್ತೆ ಪ್ರತ್ಯೇಕವಾಗಿ ನ್ಯಾಯಾಲಯದ ಮೊರೆ ಹೋಗುವುದಕ್ಕೆ ಆಸ್ಪದ ನೀಡದೇ ಸೌಲಭ್ಯ ವಿಸ್ತರಿಸುವುದು ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣವೇನು?
ನಿವೃತ್ತ ಅರಣ್ಯ ರಕ್ಷಕರು, ವಾಚರ್‌, ಡ್ರೈವರ್‌, ಉಪ ಅರಣ್ಯ ಸಂರಕ್ಷಕರು, ಸಹಾಯಕ ಅರಣ್ಯ ರಕ್ಷಕರು, ಕ್ಷೇತ್ರ ಅರಣ್ಯ ರಕ್ಷಕರು ಸೇರಿ ಹಲವರು ಎಸ್‌ಟಿಎಫ್‌ನ ಭಾಗವಾಗಿ ವೀರಪ್ಪನ್‌ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 2004ರ ಅಕ್ಟೋಬರ್‌ 18ರಂದು ವೀರಪ್ಪನ್‌‌ನನ್ನು ಹತ್ಯೆ ಮಾಡಲಾಗಿತ್ತು. 2005ರ ಜನವರಿ 24ರಂದು ಪೊಲೀಸ್‌ ಮಹಾನಿರ್ದೇಶಕರು ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೆ ಬಹುಮಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. 2005ರ ಜುಲೈ 8ರಂದು ಇದನ್ನು ಸರ್ಕಾರ ಸಹ ಒಪ್ಪಿಕೊಂಡಿತ್ತು.

ಇದರ ಭಾಗವಾಗಿ ರೂಪಿಸಿದ ಯೋಜನೆಯ ಪ್ರಕಾರ ಎಸ್‌ಟಿಎಫ್‌ನಲ್ಲಿ 3 ವರ್ಷಕ್ಕೂ ಅಧಿಕ ಕಾಲ ಕೆಲಸ ಮಾಡಿದವರಿಗೆ 3 ಲಕ್ಷ ರೂ., 2 ಅಥವಾ 3 ವರ್ಷದೊಳಗೆ ಕೆಲಸ ಮಾಡಿದವರಿಗೆ 2 ಲಕ್ಷ ರೂ., 1 ಅಥವಾ 2 ವರ್ಷದ ಅವಧಿಗೆ ಕೆಲಸ ಮಾಡಿದ ಸಿಬ್ಬಂದಿಗೆ 1 ಲಕ್ಷ ರೂ. ಹಾಗೂ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಕೆಲಸ ಮಾಡಿದ ಸಿಬ್ಬಂದಿಗೆ 50,000 ರೂ. ನೀಡಲಾಗುವುದು ಎಂದು ಘೋಷಿಸಲಾಗಿತ್ತು.

ಇದಲ್ಲದೆ, ಇನ್‌ಸ್ಪೆಕ್ಟರ್‌ ಶ್ರೇಣಿಗಿಂತ ಕೆಳಗಿನವರಿಗೆ 30×40 ನಿವೇಶನ, ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಗಳಿಗೆ 40×60 ನಿವೇಶನಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದೆಲ್ಲದರ ನಡುವೆ ಪ್ರಧಾನ ಮುಖ್ಯ ಅರಣ್ಯ ರಕ್ಷಣಾಧಿಕಾರಿಯು 259 ಅರ್ಹ ಅರಣ್ಯ ಸಿಬ್ಬಂದಿ, ಅವರ ಪದನಾಮ, ಸೇವಾ ಸ್ಥಳ ಮತ್ತು ಎಸ್‌ಟಿಎಫ್‌ನಲ್ಲಿ ಅವರ ಸೇವೆಯ ಮಾಹಿತಿಯನ್ನು ಒದಗಿಸಿದ್ದರು.

ಈ ಮಧ್ಯೆ, ವೀರಪ್ಪನ್‌ ಹತನಾದ ದಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಆರು ಎಸ್‌ಟಿಎಫ್‌ ಸಿಬ್ಬಂದಿಗೆ ಮಾತ್ರ ಬಹುಮಾನದ ಮೊತ್ತವನ್ನು ನೀಡುವುದಾಗಿ ತಿಳಿಸಿ, ಇತರರ ಮನವಿ ತಿರಸ್ಕರಿಸಿ 2015ರ ಆಗಸ್ಟ್ 17ರಂದು ಹಿಂಬರಹ ನೀಡಲಾಗಿತ್ತು.

Related Articles

Comments (0)

Leave a Comment