ಪೋಕ್ಸೊ ಪ್ರಕರಣದ ಸಂತ್ರಸ್ತರನ್ನು ಪದೇಪದೆ ಪಾಟೀ ಸವಾಲಿಗೊಳಿಪಡಿಸುವುದು ಸಲ್ಲ; ಹೈಕೋರ್ಟ್
- by LegalSamachar
- October 23, 2026
- 13 Views
ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿಯ ಪ್ರಕರಣಗಳಲ್ಲಿ ಬಾಲ ಸಂತ್ರಸ್ತರನ್ನು ಪದೇಪದೆ ನ್ಯಾಯಾಲಯಕ್ಕೆ ಕರೆದು ಪಾಟೀ ಸವಾಲು ನಡೆಸುವುದರಿಂದ ಅವರ ಮೇಲೆ ಮತ್ತಷ್ಟು ಮಾನಸಿಕ ಒತ್ತಡ ಉಂಟುಮಾಡಬಹುದು. ನ್ಯಾಯಕ್ಕಾಗಿ ನಡೆಯುವ ಕಾನೂನು ಪ್ರಕ್ರಿಯೆಯೇ ಮಗುವಿಗೆ ಮತ್ತೊಂದು ಗಾಯ ಅಥವಾ ಘಾಸಿಯುಂಟು ಮಾಡುವಂತಾಗಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪೋಕ್ಸೊ ಪ್ರಕರಣವೊಂದರಲ್ಲಿ 12 ವರ್ಷದ ಬಾಲ ಸಂತ್ರಸ್ತೆಯನ್ನು ಪದೇಪದೆ ಪಾಟೀ ಸವಾಲಿಗೆ ಒಳಪಡಿಸಲು ಅವಕಾಶ ನೀಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಅಪರಾಧ ಪ್ರಕರಣದ ಆರೋಪಿಗೆ ನ್ಯಾಯಸಮ್ಮತ ವಿಚಾರಣೆಯ ಹಕ್ಕು ಇದೆ ಎಂಬುದನ್ನು ಒಪ್ಪಿಕೊಂಡರೂ, ಅದೇ ಕಾರಣಕ್ಕೆ ಬಾಲ ಸಂತ್ರಸ್ತೆಯ ಮಾನಸಿಕ ಆರೋಗ್ಯ ಕಡೆಗಣಿಸಲಾಗದು. ನಡೆದಿರುವ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುವುದರಿಂದ ಮಗುವಿಗೆ ಗಂಭೀರ ಮಾನಸಿಕ ಸಂಕಷ್ಟ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟಿದೆ.
ಮತ್ತೊಮ್ಮೆ ಪಾಟೀ ಸವಾಲಿಗೆ ಒಳಪಡಿಸುವುದು ಈ ಪ್ರಕರಣದ ಪರಿಸ್ಥಿತಿಯಲ್ಲಿ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಬಹುದು ಮತ್ತು ಬಾಲಕಿಯನ್ನು ಮರು-ಆಘಾತಕ್ಕೆ ಒಳಪಡಿಸಬಹುದು. ನ್ಯಾಯಾಲಯದ ಉದ್ದೇಶ ಸತ್ಯ ಪತ್ತೆ ಹಚ್ಚುವುದಾದರೂ, ಅದಕ್ಕಾಗಿ ಮಗುವಿನ ಮೇಲೆ ನಿರಂತರ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಾಕ್ಷಿಯನ್ನು ಮತ್ತೆ ಕರೆಸಿ ವಿಚಾರಣೆ ನಡೆಸುವ ಅಧಿಕಾರ ವಿಚಾರಣಾ ನ್ಯಾಯಾಲಯಕ್ಕಿದೆ. ಹಿಂದಿನ ಅಪರಾಧ ದಂಡ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 311 ಹಾಗೂ ಪ್ರಸ್ತುತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 348ರ ಅಡಿಯಲ್ಲಿ ಈ ಅಧಿಕಾರವನ್ನು ಬಳಸಬಹುದು. ಆದರೆ, ಈ ಅಧಿಕಾರವನ್ನು ಪ್ರತಿಯೊಂದು ಪ್ರಕರಣದಲ್ಲೂ ಸ್ವಯಂಚಾಲಿತವಾಗಿ ಬಳಸಲು ಸಾಧ್ಯವಿಲ್ಲ. ಸಾಕ್ಷಿಯನ್ನು ಮತ್ತೆ ಕರೆಸುವುದು ನಿಜವಾಗಿಯೂ ನ್ಯಾಯಯುತ ತೀರ್ಪಿಗೆ ಅಗತ್ಯವೇ ಅಥವಾ ವಿಚಾರಣೆಯನ್ನು ವಿಳಂಬಗೊಳಿಸಲು ಹಾಗೂ ಈಗಾಗಲೇ ದಾಖಲಾದ ಸಾಕ್ಷ್ಯದಲ್ಲಿನ ಕೊರತೆಗಳನ್ನು ತುಂಬಲು ಮಾಡಲಾಗುತ್ತಿದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಮಕ್ಕಳನ್ನು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ತೊಡಗಿಸುವುದೇ ಕೆಲವೊಮ್ಮೆ ಅವರಿಗೆ ಹೊಸ ಆಘಾತದ ಮೂಲವಾಗಬಹುದು ಎಂಬ ಅಂಶವನ್ನು ಸುಪ್ರೀಂಕೋರ್ಟ್ ತನ್ನ ಇತ್ತೀಚಿನ ತೀರ್ಪುಗಳಲ್ಲಿ ಗುರುತಿಸಿದೆ. ಮಕ್ಕಳ ಸಾಕ್ಷ್ಯ ದಾಖಲಿಸುವ ಸಂದರ್ಭದಲ್ಲಿ ಅವರ ಗೌರವ, ಭದ್ರತೆ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವುದು ನ್ಯಾಯಾಂಗದ ಪ್ರಮುಖ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪೋಕ್ಸೊ ಕಾಯ್ದೆಯ ಸೆಕ್ಷನ್ 33(5) ಪ್ರಕಾರ, ಬಾಲಕಿಯನ್ನು ಸಾಕ್ಷ್ಯ ನೀಡಲು ಮತ್ತೆ ಮತ್ತೆ ನ್ಯಾಯಾಲಯಕ್ಕೆ ಕರೆಯದಂತೆ ವಿಶೇಷ ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು. ಈ ನಿಬಂಧನೆಯ ಉದ್ದೇಶವೇ ಬಾಲ ಸಂತ್ರಸ್ತೆಯರನ್ನು ನಿರಂತರ ವಿಚಾರಣೆ, ಪಾಟೀ ಸವಾಲು ಮತ್ತು ನ್ಯಾಯಾಲಯದ ಹಾಜರಾತಿಯಿಂದ ರಕ್ಷಿಸುವುದಾಗಿದೆ. ಕರ್ನಾಟಕ ಹೈಕೋರ್ಟ್ನ ಮತ್ತೊಂದು ತೀರ್ಪಿನಲ್ಲಿ, ಸೆಕ್ಷನ್ 33(5)ರ ಉದ್ದೇಶ ಬಾಲಕಿಯ ಮೇಲೆ ಪದೇಪದೆ ಸಾಕ್ಷ್ಯ ಹೇಳಿಸುವ ಮೂಲಕ ಕಿರುಕುಳ ಅಥವಾ ಮಾನಸಿಕ ಒತ್ತಡ ಉಂಟಾಗದಂತೆ ನೋಡಿಕೊಳ್ಳುವುದಾಗಿದೆ ಎಂದು ವಿವರಿಸಲಾಗಿತ್ತು. ಆದರೆ, ನಿರ್ದಿಷ್ಟ ಪ್ರಕರಣದ ವಾಸ್ತವಾಂಶಗಳನ್ನು ಆಧರಿಸಿ ಅತ್ಯಂತ ಅಗತ್ಯವಿದ್ದರೆ ಕೆಲವೊಂದು ಸೀಮಿತ ಕ್ರಮಗಳಿಗೆ ಅವಕಾಶ ಇರಬಹುದು ಎಂದೂ ನ್ಯಾಯಪೀಠ ಆದೇಶಿಸಿದೆ.
ಪ್ರಕರಣವೇನು?
ಪೊಕ್ಸೊ ಪ್ರಕರಣವೊಂದರ ಸಂತ್ರಸ್ತೆ ಸದ್ಯ 12 ವರ್ಷದವಳಾಗಿದ್ದು, ಪ್ರಕರಣ ದಾಖಲಾದಾಗ ಆಕೆಗೆ ಎಂಟು ವರ್ಷ ವಯಸ್ಸಾಗಿತ್ತು. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ 2022ರಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಬಳಿಕ 2023ರಲ್ಲಿ ಬಾಲಕಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಹಲವು ಬಾರಿ ಹಾಗೂ ದೀರ್ಘಕಾಲ ಪಾಟಿ ಸವಾಲಿಗೆ ಒಳಪಡಿಸಲಾಗಿತ್ತು.
ಈ ಮಧ್ಯೆ, 2024ರ ಮಾರ್ಚ್ನಲ್ಲಿ ಆರೋಪಿಯು ಕೆಲವು ವಿಡಿಯೊಗಳು ಮತ್ತು ಧ್ವನಿ ಸಂದೇಶಗಳನ್ನು ಆಧಾರವಾಗಿ ಮುಂದಿಟ್ಟುಕೊಂಡು ಬಾಲಕಿಯನ್ನು ಮತ್ತೆ ವಿಚಾರಣೆ ನಡೆಸಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದನು. ವಿಚಾರಣಾ ನ್ಯಾಯಾಲಯವು ಆ ಅರ್ಜಿಯನ್ನು ಅಂಗೀಕರಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತೆಯ ತಾಯಿ, ಮಗಳು ಈಗಾಗಲೇ ಹಲವು ಬಾರಿ ಸಾಕ್ಷ್ಯ ನೀಡಿದ್ದು, ಮತ್ತೆ ಮತ್ತೆ ಪಾಟೀ ಸವಾಲಿಗೆ ಒಳಪಡಿಸುವುದು ಸುಪ್ರೀಂಕೋರ್ಟ್ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದರು.
Related Articles
Thank you for your comment. It is awaiting moderation.


Comments (0)