ಶಾಶ್ವತ ಜೀವನಾಂಶ ಮನವಿ ತಿರಸ್ಕೃತಗೊಂಡ ಆಧಾರದಲ್ಲಿ ಮಾಸಿಕ ಜೀವನಾಂಶ ನಿರಾಕರಿಸಲಾಗದು – ಹೈಕೋರ್ಟ್

ಬೆಂಗಳೂರು: ಪತ್ನಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆಂಬ ಕಾರಣಕ್ಕೆ ಮಾತ್ರ ಆಕೆಗೆ ಸಿಆರ್‌ಪಿಸಿ ಸೆಕ್ಷನ್‌ 125 ಅಡಿಯಲ್ಲಿ ಜೀವನಾಂಶ ನಿರಾಕರಿಸಲಾಗದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ವಿಚ್ಛೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶದ ಬೇಡಿಕೆ ತಿರಸ್ಕೃತವಾಗಿದ್ದರೂ, ಅದರ ಆಧಾರದಲ್ಲಿ ಮಾಸಿಕ ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

ಕೌಟುಂಬಿಕ ಪ್ರಕರಣವೊಂದರಲ್ಲಿ ಮಾಸಿಕ ನಿರ್ವಹಣಾ ಭತ್ಯೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಡಾ. ಚಿಲ್ಲಕುರ್‌ ಸುಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರರು ಹಾಗೂ ಅವರ ಪತಿ ನಡುವಿನ ವಿಚ್ಛೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶ ತಿರಸ್ಕೃತವಾಗಿರುವುದು ಪತಿಯ ಆರ್ಥಿಕ ಸಾಮರ್ಥ್ಯ‌ವನ್ನು ಪತ್ನಿ ಸಾಬೀತುಪಡಿಸಲು ವಿಫಲವಾಗಿದ್ದಾರೆಂಬ ಕಾರಣಕ್ಕೆ ಮಾತ್ರ. ಇದರಿಂದ, ಸಿಆರ್‌ಪಿಸಿ ಸೆಕ್ಷನ್‌ 125ರ ಅಡಿ ಜೀವನಾಂಶ ಪಡೆಯುವ ಹಕ್ಕು ಕಳೆದುಹೋಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪತಿಯು ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 29 ಸಾವಿರ ರೂ. ಆದಾಯ ಗಳಿಸುತ್ತಿರುವುದನ್ನು ಪರಿಗಣಿಸಿದ ಹೈಕೋರ್ಟ್‌, ಪತ್ನಿ ಮತ್ತು ಮಗನಿಗೆ ತಿಂಗಳಿಗೆ ತಲಾ 5 ಸಾವಿರ ರೂ. ನಿರ್ವಹಣಾ ಭತ್ಯೆ ಪಾವತಿಸುವಂತೆ ಆದೇಶಿಸಿದೆ.

ಪತ್ನಿ ಎಂ.ಎ. ಪದವಿ ಹೊಂದಿದ್ದಾಳೆ ಎಂಬುದಷ್ಟೇ ಆಕೆಗೆ ನಿರ್ವಹಣಾ ಭತ್ಯೆ ನಿರಾಕರಿಸಲು ಕಾರಣವಾಗದು. ಆಕೆ ಉದ್ಯೋಗದಲ್ಲಿದ್ದಾಳೆ ಅಥವಾ ಸ್ವತಂತ್ರವಾಗಿ ಆದಾಯ ಗಳಿಸುತ್ತಿದ್ದಾಳೆ ಎಂಬುದನ್ನು ಪತಿ ಕೂಡ ಹೇಳಿಲ್ಲ ಎಂದು ಹೈಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣವೇನು?
ಪತ್ನಿ ಹಾಗೂ ಅಪ್ರಾಪ್ತ ಮಗ ಸಿಆರ್‌ಪಿಸಿ ಸೆಕ್ಷನ್‌ 125 ಅಡಿಯಲ್ಲಿ ಕ್ರಮವಾಗಿ ತಿಂಗಳಿಗೆ 20 ಸಾವಿರ ರೂ. ಹಾಗೂ 10 ಸಾವಿರ ರೂ. ನಿರ್ವಹಣಾ ಭತ್ಯೆ ಕೋರಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ ಮಗನಿಗೆ ತಿಂಗಳಿಗೆ 5 ಸಾವಿರ ರೂ. ಮಂಜೂರು ಮಾಡಿತ್ತಾದರೂ, ಪತ್ನಿಯ ಹಿಂದಿನ 10 ಲಕ್ಷ ರೂ. ಶಾಶ್ವತ ಜೀವನಾಂಶದ ಬೇಡಿಕೆ ತಿರಸ್ಕೃತವಾಗಿತ್ತೆಂಬ ಕಾರಣ ನೀಡಿ ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು. ಜತೆಗೆ, ಪತ್ನಿ ಎಂ.ಎ ಪದವಿ ಹೊಂದಿರುವುದರಿಂದ ಉದ್ಯೋಗ ಪಡೆದು ಜೀವನ ನಡೆಸಬಹುದೆಂದು ಕೌಟುಂಬಿಕ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಆ ಆದೇಶವನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment