ಆರ್‌ಎಸ್‌ಎಸ್ ಮಾನಹಾನಿ ಪ್ರಕರಣ; ಸೆಷನ್ಸ್ ಕೋರ್ಟ್‌‌ನಲ್ಲಿ ಪರಿಹಾರ ಕೋರಲು ಪ್ರಿಯಾಂಕ್‌ ಖರ್ಗೆ, ನಲಪಾಡ್‌ಗೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮಾನಹಾನಿ ಮಾಡಿದ ಆರೋಪಕ್ಕೆ ಸಂಬಂಧಿಸಿದ ಖಾಸಗಿ ದೂರಿನ ಸಂಜ್ಞೇ ಪರಿಗಣಿಸಿರುವ (ಕಾಗ್ನೈಜೆನ್ಸ್) ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ರದ್ದು ಕೋರಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಯುವ ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ನಲಪಾಡ್‌ ಅರ್ಜಿಗಳ ವಿಚಾರಣೆ ನಡೆಸಲು ನಿರಾಕರಿಸುವ ಹೈಕೋರ್ಟ್‌ ಬೆಂಗಳೂರು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗುವಂತೆ ನಿರ್ದೇಶಿಸಿದೆ.

ಇದೇ ವೇಳೆ, ಪ್ರಿಯಾಂಕ್‌ ಖರ್ಗೆ, ನಲಪಾಡ್‌ ಹಾಗೂ ಎರಡನೇ ಆರೋಪಿಯಾಗಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ ವಿರುದ್ಧ ಸಂಜ್ಞೇ ಪರಿಗಣಿಸುವಂತೆ ಕೋರಿ ದೂರುದಾರ ಎ. ತೇಜಸ್‌ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ನ್ಯಾಯಪೀಠ ಗುರುವಾರ ಇತ್ಯರ್ಥಪಡಿಸಿದೆ.

ಮ್ಯಾಜಿಸ್ಟ್ರೇಟ್‌ ಆದೇಶವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಮರುಪರಿಶೀಲನಾ ಅರ್ಜಿಯ ಮೂಲಕ ಪ್ರಶ್ನಿಸಬಹುದಾಗಿದೆ. ಹೀಗಿರುವಾಗ ಇಲ್ಲಿಗೆ ಏಕೆ ಬರುತ್ತೀರಿ? ಸೆಷನ್ಸ್ ನ್ಯಾಯಾಲಯದಲ್ಲಿ ಪರ್ಯಾಯ ಪರಿಹಾರವಿರುವಾಗ ಇಲ್ಲಿ ಸಮಯ ವ್ಯರ್ಥವಾಗುತ್ತಿದೆ ಎಂದು ನ್ಯಾಯಪೀಠ ಅರ್ಜಿದಾರರ ಪರ ವಕೀಲರನ್ನು ಕುರಿತು ಬೇಸರ ವ್ಯಕ್ತಪಡಿಸಿತು.

ಖಾಸಗಿ ದೂರಿನ ಸಂಬಂಧ ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ ವಿರುದ್ಧ ಸಂಜ್ಞೇ ಪರಿಗಣಿಸದಿರುವುದನ್ನು ಪ್ರಶ್ನಿಸಿದ್ದ ತೇಜಸ್‌ ಅವರಿಗೂ ಸೆಷನ್ಸ್ ನ್ಯಾಯಾಲಯದಲ್ಲಿ ಪರಿಹಾರ ಪಡೆಯುವಂತೆ ನ್ಯಾಯಪೀಠ ನಿರ್ದೇಶಿಸಿತು. ಮ್ಯಾಜಿಸ್ಟ್ರೇಟ್‌ ಆದೇಶದಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಲು ನಿರ್ದೇಶಿಸುವ ಅಧಿಕಾರ ಸೆಷನ್ಸ್ ನ್ಯಾಯಾಲಯಕ್ಕೆ ಇದೆ ಎಂದು ಹೈಕೋರ್ಟ್ ಆದೇಶಿಸಿತು.

ಪ್ರಕರಣವೇನು?
ಪ್ರಿಯಾಂಕ್‌ ಖರ್ಗೆ ಅವರು 2025ರ ಅಕ್ಟೋಬರ್ 4ರಂದು, ಆರ್‌ಎಸ್‌ಎಸ್‌ನವರು ಸರ್ಕಾರಿ ಜಾಗಗಳು ಮತ್ತು ಶಾಲಾ ಆವರಣದಲ್ಲಿ ಯಾವುದೇ ರೀತಿಯ ಸಮಾರಂಭ ಮತ್ತು ಚಟುವಟಿಕೆ ನಡೆಸದಂತೆ ನಿಷೇಧಿಸಬೇಕು. ಅವರು ಜನರಿಗೆ ತಪ್ಪು ಸಂದೇಶ ಕೊಡುತ್ತಿದ್ದು, ದೇಶಕ್ಕೆ ಮಾರಕವಾಗಿದ್ದಾರೆ. ಯುವಕರನ್ನು ತಪ್ಪು ದಾರಿಯಲ್ಲಿ ಕರೆದೊಯ್ಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು ಎಂದು ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ ಅಕ್ಟೋಬರ್ 14ರಂದು, ನಿಮ್ಮ ಮನೆಯಲ್ಲಿ ನಿಮ್ಮ ಅಣ್ಣ, ತಮ್ಮಂದಿರು, ಗೆಳೆಯರು, ಬಂಧು-ಬಳಗದವರು ಯಾರಾದರೂ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಅವರೊಂದಿಗಿನ ಸಂಬಂಧ ಕಡಿತ ಮಾಡಿ ಎಂದು ಪೋಸ್ಟ್‌ ಮಾಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇದಾದ 2 ದಿನಗಳ ಬಳಿಕ ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಎಕ್ಸ್‌ನಲ್ಲಿ, ಗೌರಿ ಲಂಕೇಶ್‌, ಪನ್ಸಾರೆ ಮತ್ತು ಎಂ.ಎಂ. ಕಲಬುರ್ಗಿ ಅವರನ್ನು ಆರ್‌ಎಸ್‌ಎಸ್‌ನವರು ಹತ್ಯೆ ಮಾಡಿದ್ದಾರೆ. ಅವರೇ ನೇರ ಹೊಣೆಗಾರರಾಗಿದ್ದು, ತಾಲಿಬಾನ್‌ ಸಂಸ್ಕೃತಿಯವರಾಗಿದ್ದಾರೆ ಎಂದು ಪೋಸ್ಟ್‌ ಮಾಡಿದ್ದರು ಎಂದು ಆಕ್ಷೇಪಿಸಲಾಗಿದೆ.

ಯುವ ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ನಲಪಾಡ್‌ ಅವರು, ಆರ್‌ಎಸ್‌ಎಸ್‌ನವರ ಚಡ್ಡಿಯಲ್ಲಿ ತಾಕತ್ತು ಇಲ್ಲ ಎಂದಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಮೂಲಕ ಆರ್‌ಎಸ್‌ಎಸ್‌ ಮಾನಹಾನಿ ಮಾಡಲಾಗಿದ್ದು, ಲಕ್ಷಾಂತರ ಕಾರ್ಯಕರ್ತರ ಭಾವನೆಗಳಿಗೆ ಘಾಸಿಯಾಗಿದೆ ಎಂದು ಖಾಸಗಿ ದೂರಿನಲ್ಲಿ ಎ. ತೇಜಸ್‌ ದೂರಿದ್ದರು. ಇದನ್ನು ಪರಿಗಣಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಕ್ರಿಮಿನಲ್‌ ಮಾನಹಾನಿ ಪ್ರಕರಣ ದಾಖಲಿಸಲು ಆದೇಶಿಸಿತ್ತು.

Related Articles

Comments (0)

Leave a Comment