ಹಾಲವೀರಪ್ಪಜ್ಜ ಸ್ವಾಮೀಜಿ ಹಾವೇರಿ ಜಿಲ್ಲೆ ಪ್ರವೇಶಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ; ಜಿಲ್ಲಾಡಳಿತದ ಆದೇಶ ಮಾರ್ಪಾಡು

ಬೆಂಗಳೂರು/ಧಾರವಾಡ: ಬಳ್ಳಾರಿ ಜಿಲ್ಲೆಯ ಹಿರೇಹಡಗಲಿಯ ಹಾಲಸ್ವಾಮಿ ಮಹಾ ಸಂಸ್ಥಾನ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಅವರಿಗೆ ಹಾವೇರಿ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ಮಾರ್ಪಡಿಸಿರುವ ಹೈಕೋರ್ಟ್, ಜಿಲ್ಲೆ ಪ್ರವೇಶಿಸಲು ಷರತ್ತುಬದ್ಧ ಅನುಮತಿ ನೀಡಿದೆ.

ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್‌. ಕಮಾಲ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ), ಅರ್ಜಿದಾರರು ಅಕ್ಟೋಬರ್‌ 2ರವರೆಗೆ ಹಾವೇರಿ ಜಿಲ್ಲೆ ಪ್ರವೇಶಿಸುವುದಿಲ್ಲ ಹಾಗೂ ಗಣೇಶ ಮೂರ್ತಿ ವಿಸರ್ಜನೆ ಪೂರ್ಣಗೊಳ್ಳುವವರೆಗೆ ಸವಣೂರು ಪಟ್ಟಣಕ್ಕೆ ಬರುವುದಿಲ್ಲ ಎಂಬ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂಬ ಷರತ್ತಿನೊಂದಿಗೆ ಹಾವೇರಿ ಪ್ರವೇಶಕ್ಕೆ ಅನುಮತಿ ಕಲ್ಪಿಸಿದೆ.

ಜತೆಗೆ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಸಭೆ ಅಥವಾ ಭಾಷಣ ಮಾಡುವುದಿಲ್ಲ ಎಂದೂ ಸ್ವಾಮೀಜಿ ಮುಚ್ಚಳಿಕೆ ನೀಡಬೇಕು. ಅವರ ಉಪಸ್ಥಿತಿ ಅಥವಾ ಸಾರ್ವಜನಿಕ ಭಾಷಣದಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ವೈಯಕ್ತಿಕವಾಗಿ ಹೊಣೆಗಾರರಾಗಬೇಕಾಗುತ್ತದೆ ಎಂದಿರುವ ನ್ಯಾಯಪೀಠ, ಈ ಷರತ್ತುಗಳನ್ನು ಒಳಗೊಂಡ ಪ್ರಮಾಣಪತ್ರ ಸಲ್ಲಿಸಿದ ಬಳಿಕ ಸ್ವಾಮೀಜಿ ಹಾವೇರಿ ಜಿಲ್ಲೆ ಪ್ರವೇಶಿಸಲು ಜಿಲ್ಲಾಧಿಕಾರಿ ಅನುಮತಿ ನೀಡಬೇಕು ಎಂದು ನಿರ್ದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶ್ರೀಧರ್‌ ಪ್ರಭು, ಜಿಲ್ಲಾಡಳಿತ ಆದೇಶದಲ್ಲಿ ಉಲ್ಲೇಖಿಸಿರುವ 2023ರ ಎರಡು ಅಪರಾಧ ಪ್ರಕರಣಗಳನ್ನು ಹೈಕೋರ್ಟ್‌ ಈಗಾಗಲೇ ರದ್ದುಪಡಿಸಿದ್ದು, ಸದ್ಯ ಸ್ವಾಮೀಜಿ ವಿರುದ್ಧ ಯಾವುದೇ ಪ್ರಕರಣ ಬಾಕಿ ಇಲ್ಲ. ಗಣೇಶ ಮೂರ್ತಿ ವಿಸರ್ಜನೆ ಪೂರ್ಣಗೊಳ್ಳುವವರೆಗೆ ಸವಣೂರಿಗೆ ಪ್ರವೇಶಿಸುವುದಿಲ್ಲ ಮತ್ತು ಮೆರವಣಿಗೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ವಾಮೀಜಿ ಸ್ವಯಂಪ್ರೇರಿತವಾಗಿ ಮುಚ್ಚಳಿಕೆ ನೀಡಲು ಸಿದ್ಧರಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಹಾವೇರಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿದ್ದ ಜಿಲ್ಲಾಧಿಕಾರಿಯ ಆದೇಶವನ್ನು ಷರತ್ತುಬದ್ಧವಾಗಿ ಮಾರ್ಪಡಿಸಿ ಅರ್ಜಿ ಇತ್ಯರ್ಥಪಡಿಸಿತು. ಇದೇ ವೇಳೆ, ಸ್ವಾಮೀಜಿಯ ಭೇಟಿ ಅಥವಾ ಉಪಸ್ಥಿತಿಯಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾದರೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಇಲಾಖೆಗೆ ಸ್ವಾತಂತ್ರ್ಯವಿದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣವೇನು?
ಸ್ವಾಮೀಜಿ ಅವರು ಸೆಪ್ಟೆಂಬರ್ 25ರಿಂದ ಅಕ್ಟೋಬರ್ 15ರವರೆಗೆ ಹಾವೇರಿ ಜಿಲ್ಲೆ ಪ್ರವೇಶಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾದಂಡಾಧಿಕಾರಿ ಆದೇಶ ಹೊರಡಿಸಿದ್ದರು. ಆ ಆದೇಶದಲ್ಲಿ ಹಾವೇರಿ ಜಿಲ್ಲೆಯ ಕೆಲವು ಪಟ್ಟಣಗಳು ಮತ್ತು ಗ್ರಾಮಗಳು ಕೋಮು ಸೂಕ್ಷ್ಮ ಪ್ರದೇಶಗಳಾಗಿವೆ. ಈ ಹಿಂದೆ ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾದ ಘಟನೆಗಳು ನಡೆದಿವೆ ಎಂದು ಉಲ್ಲೇಖಿಸಿತ್ತು. ಜತೆಗೆ, ಸೆಪ್ಟೆಂಬರ್ 22ರಂದು ಸವಣೂರಿಗೆ ಭೇಟಿ ನೀಡಿದ್ದ ಸ್ವಾಮೀಜಿ, ಗಣಪತಿ ಉತ್ಸವ ಆಯೋಜಕರನ್ನು ಉದ್ದೇಶಿಸಿ ಅಕ್ಟೋಬರ್ 2ರ ಮೆರವಣಿಗೆಯನ್ನು ಕೆಲ ನಿರ್ದಿಷ್ಟ ಮಾರ್ಗಗಳಲ್ಲಿ ನಡೆಸುವಂತೆ ಪ್ರಚೋದನೆ ನೀಡಿದ್ದರು. ಇದರಿಂದ, ಸವಣೂರು ಮಾತ್ರವಲ್ಲದೆ ಇಡೀ ಹಾವೇರಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗಬಹುದೆಂಬ ಆತಂಕ ವ್ಯಕ್ತಪಡಿಸಲಾಗಿತ್ತು. ಇದರಿಂದ, ಜಿಲ್ಲಾಡಳಿತದ ನಿರ್ಬಂಧ ಆದೇಶ ಪ್ರಶ್ನಿಸಿ ಸ್ವಾಮೀಜಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Articles

Comments (0)

Leave a Comment