ಟಿ. ನರಸೀಪುರ ಗಣೇಶೋತ್ಸವ ವಿವಾದ; ಮಾಜಿ ಸಂಸದ ಪ್ರತಾಪ್ ಸಿಂಹಗೆ ರಕ್ಷಣೆ ಒದಗಿಸಲು ಹೈಕೋರ್ಟ್ ನಕಾರ

ಬೆಂಗಳೂರು: ಮೈಸೂರಿನ ಟಿ. ನರಸೀಪುರದಲ್ಲಿ ಗಣೇಶ ವಿಸರ್ಜನೆ ವೇಳೆ ದಲಿತ ಸಮುದಾಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ಮಧ್ಯಂತರ ರಕ್ಷಣೆ ಒದಗಿಸಲು ಹೈಕೋರ್ಟ್‌ ನಿರಾಕರಿಸಿದೆ.

ಸೆಪ್ಟೆಂಬರ್‌ 18ರಂದು ನಡೆದ ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ದಲಿತ ಸಂಘಟನೆಗಳ ಹೋರಾಟಗಾರರನ್ನು ಅವಮಾನ ಮಾಡಿ ಮತ್ತು ದಲಿತ ಸಮುದಾಯದ ಸಾಂಸ್ಕತಿಕ ಅಸ್ಮಿತೆಯಾದ ನೀಲಿ ಶಾಲಿನ ಬಗ್ಗೆ ಅವಹೇಳನ ಮಾಡಿದ ಹಾಗೂ ಪ್ರಚೋದನಾಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ ರದ್ದು ಕೋರಿ ಪ್ರತಾಪ್‌ ಸಿಂಹ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರತಾಪ್‌ ಸಿಂಹ ಪರ ವಕೀಲ ವೆಂಕಟೇಶ ದಳವಾಯಿ ವಾದ ಮಂಡಿಸಿ, ಪೊಲೀಸ್ ಇನ್‌ಸ್ಪೆಕ್ಟರ್‌ ಧನಂಜಯ್‌ ಅವರು ಬಳಸಿದ ಭಾಷೆಯ ಹಿನ್ನೆಲೆಯಲ್ಲಿ ಪ್ರಕರಣ ಈ ಹಂತಕ್ಕೆ ಬಂದಿದೆ. ಪ್ರತಾಪ್‌ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಅನ್ವಯಿಸಿರುವ ಸೆಕ್ಷನ್‌ ಮತ್ತು ಆರೋಪಕ್ಕೆ ತಾಳಮೇಳವೇ ಇಲ್ಲದಂತಾಗಿದೆ. ರಾಜಕೀಯ ಚಿತಾವಣೆಯ ಭಾಗವಾಗಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಒಂದೇ ಪ್ರಕರಣಕ್ಕೆ ಎರಡೆರಡು ಎಫ್‌ಐಆರ್‌ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಬೇಕು ಎಂದು ಕೋರಿದರು.

ಈ ಮನವಿ ತಿರಸ್ಕರಿಸಿದ ನ್ಯಾಯಪೀಠ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಪ್ರಕರಣದಲ್ಲಿ ಈ ರೀತಿಯ ನಿರ್ದೇಶನ ನೀಡಬಾರದು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ ಎಂದು ತಿಳಿಸಿತು‌. ಇನ್ನೊಂದು ಪ್ರಕರಣವನ್ನು ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿದ್ದು, ನ್ಯಾಯಾಲಯದ ಅನುಮತಿ ಪಡೆಯದೇ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಕೂಡದು ಎಂದು ಆದೇಶಿಸಿದ ಪೀಠ, ಎರಡೂ ಪ್ರಕರಣಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.

ಜತೆಗೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣವನ್ನು ಸೆಪ್ಟೆಂಬರ್‌ 28ಕ್ಕೆ ಹಾಗೂ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿರುವ ಪ್ರಕರಣವನ್ನು ಸೆಪ್ಟೆಂಬರ್‌ 28ಕ್ಕೆ ಮುಂದೂಡಿತು.

ಪ್ರತಾಪ್ ಸಿಂಹ ವಾದವೇನು?
ಇದಕ್ಕೂ ಮುನ್ನ ಪ್ರತಾಪ್‌ ಸಿಂಹ ಪರ ವಕೀಲರು, ಗಣೇಶ ವಿಸರ್ಜನೆ ಶೋಭಾಯಾತ್ರೆಯಲ್ಲಿ ದಲಿತ ಸಂಘಟನೆಗಳ ಹೋರಾಟಗಾರರನ್ನು ಅವಮಾನ ಮಾಡಿ, ಸಾಂಸ್ಕತಿಕ ಅಸ್ಮಿತೆಯಾದ ನೀಲಿ ಶಾಲಿನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಕೈಂಬಳ್ಳಿಯ ಅಂಬೇಡ್ಕರ್‌ ಕ್ಷೇಮಾಭಿವೃದ್ಧಿ ಕ್ರೀಡಾ ಕಲಾ ಸಂಘದ ಅಧ್ಯಕ್ಷ ಕೆ.ಟಿ. ಮಧು ದೂರು ನೀಡಿದ್ದರು. ಮತ್ತೊಂದೆಡೆ, ಸ್ಥಳದಲ್ಲಿ ಹಾಜರಿದ್ದ ಪೊಲೀಸ್‌ ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಿಸಲಾಗಿದೆ. ಅಂದರೆ ಒಂದೇ ಪ್ರಕರಣಕ್ಕೆ ಎರಡು ಎಫ್‌ಐಆರ್‌ ದಾಖಲಿಸಿದ್ದಾರೆ. ದಿನಾಂಕ ಬೇರೆ ಅಷ್ಟೆ. ಒಂದೇ ಆರೋಪಕ್ಕೆ ಈ ರೀತಿ ಎರಡೆರಡು ಎಫ್‌ಐಆರ್ ದಾಖಲಿಸಲಾಗದು. ಗಣೇಶ ವಿಸರ್ಜನೆ ಮೆರವಣಿಗೆ ಮಸೀದಿ ಮುಂದೆ ಹೋಗಬಾರದು ಎಂಬುದಕ್ಕೆ ಸಂಬಂಧಿಸಿದ ಘಟನೆ ಇದಾಗಿದೆ. ಮಸೀದಿ ಹತ್ತಿರ ಹೋದ ತಕ್ಷಣ ನಿಮಗೆ ಎದ್ದುಬಿಡುತ್ತಾ? ಉದರ ನಿಮಿತ್ತ ನೀಲಿಶಾಲು ಹಾಕಿಕೊಂಡು ಬರುತ್ತೀರಿ. ಮೊದಲು ಅಂಬೇಡ್ಕರ್‌ ಬಗ್ಗೆ ಓದಿಕೊಳ್ಳಿ ಎಂದು ಅರ್ಜಿದಾರರು ಹೇಳಿದ್ದಾರೆ. ಆ ರೀತಿ ಹೇಳಿದರೆ ಅಪರಾಧವಾಗುತ್ತದೆಯೇ? ಹಾಗಾಗಿ, ಅವರಿಗೆ ರಕ್ಷಣೆ ನೀಡಬೇಕು ಎಂದು ಕೋರಿದರು.

ಈ ವಾದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಕಳೆದ ಬಾರಿ ಮಂಡ್ಯದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿವಾದವಾಗಿತ್ತು. ಅಂತಹ ಘಟನೆ ತಡೆಗಟ್ಟುವ ನಿಟ್ಟಿನಲ್ಲಿ ಮಸೀದಿ ಬಳಿ ಹೋಗಿ ಪಟಾಕಿ ಹೊಡೆಯಬೇಡಿ, ಡಿಜೆ ಹಾಕಬೇಡಿ, ಶಾಂತಿಯುತವಾಗಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಿ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ಧನಂಜಯ್‌ ಹೇಳಿದ್ದಾರೆ. ಆ ಮಾತಿಗೆ ಪ್ರತಾಪ್‌ ಮಸೀದಿ ಮುಂದೆ ಬಂದರೆ ನಿಮಗೆ ಎದ್ದೇಳುತ್ತಾ? ಎಂದು ಪೊಲೀಸ್‌ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕವಾಗಿ ಹೇಳಿಕೆ ನೀಡಿದರೆ ಪೊಲೀಸ್‌ ಅಧಿಕಾರಿ ತನ್ನ ಕರ್ತವ್ಯ ನಿರ್ವಹಿಸಲು ಸಾಧ್ಯವೇ? ಪ್ರತಾಪ್‌ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಿದ್ದಾರೆ. ಅರ್ಜಿದಾರರ ವಿರುದ್ಧ ಗಂಭೀರ ಅಪರಾಧಕ್ಕೆ ಸಂಬಂಧಿಸಿದ ಆರೋಪವಿದ್ದು, ತನಿಖೆ ನಡೆಸಲು ಅನುಮತಿ ನೀಡಬಹುದು. ಇಡೀ ತನಿಖೆಯನ್ನು ನ್ಯಾಯಪೀಠದ ಮುಂದಿಡಲಾಗುವುದು. ಪ್ರತಾಪ್‌ ಯಾವುದೇ ಅಪರಾಧ ಎಸಗಿಲ್ಲ ಎಂದು ತನಿಖೆಯಲ್ಲಿ ಕಂಡು ಬಂದರೆ ಬಿ ರಿಪೋರ್ಟ್‌ ಸಲ್ಲಿಸುತ್ತೇವೆ. ನ್ಯಾಯಾಲಯದ ಅನುಮತಿಯಿಲ್ಲದೆ ಆರೋಪ ಪಟ್ಟಿ ಸಲ್ಲಿಸುವುದಿಲ್ಲ ಎಂದು ತಿಳಿಸಿದರು.

ವಾದ ಪ್ರತಿವಾದ ಆಲಿಸಿದ ಪೀಠ, ಅರ್ಜಿದಾರರು ಅಂಬೇಡ್ಕರ್‌ ಬಗ್ಗೆ ಓದಿ ಎಂದಷ್ಟೇ ಹೇಳಿಲ್ಲ. ಇನ್ನೂ ಹೆಚ್ಚು ಮಾತನಾಡಿದ್ದಾರೆ ಎಂದು ಮೌಖಿಕವಾಗಿ ಹೇಳಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment