ಸಿನಿಮಾ ಟಿಕೆಟ್ ದರದ ಮೇಲೆ ಶೇ. 2 ಸೆಸ್; ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳಿಗೆ ಸರ್ಕಾರ ಹೊರಡಿಸಿದ್ದ ನೋಟಿಸ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರದ ಮೇಲೆ ಕಡ್ಡಾಯವಾಗಿ ಶೇ. 2 ಸೆಸ್ (ಉಪಕರ) ಸಂಗ್ರಹಿಸುವಂತೆ ಸೂಚಿಸಿ ಸರ್ಕಾರ ಹೊರಡಿಸಿದ್ದ ನೋಟಿಸ್‌ಗಳನ್ನು ಹೈಕೋರ್ಟ್ ರದ್ದುಪಡಿಸಿದೆ.

ಸೆಸ್ ಸಂಗ್ರಹ ಕುರಿತ ಆದೇಶ ಮತ್ತು ನೋಟಿಸ್ ಗಳನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಪಿವಿಆರ್ ಐನಾಕ್ಸ್ ಲಿಮಿಟೆಡ್ ಮತ್ತು ಇದರ ಶೇರುದಾರ ಶಂತನು ಪೈ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು ಹಾಜರಾಗಿ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಮಿಕರ (ಕ್ಷೇಮಾಭಿವೃದ್ದಿ) ಅಧಿನಿಯಮ-2024ರಡಿ ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು 2026ರ ಸೆಪ್ಟೆಂಬರ್‌ 1ರಿಂದ ಕಡ್ಡಾಯವಾಗಿ ಎಲ್ಲ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರದ ಮೇಲೆ ಶೇ.2 ಸೆಸ್ ಸಂಗ್ರಹ ಮಾಡಬೇಕು ಎಂದು ರಾಜ್ಯ ಸರ್ಕಾರದ ಪರವಾಗಿ ಕಾರ್ಮಿಕ ಆಯುಕ್ತರು 2026ರ ಆಗಸ್ಟ್ 29ರಂದು ಹೊರಡಿಸಿರುವ ಕಚೇರಿ ಆದೇಶವನ್ನು ಸೆಪ್ಟೆಂಬರ್ 9ರಂದು ಹಿಂಪಡೆಯಲಾಗಿದೆ. ಅಧಿನಿಯಮ ಜಾರಿಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಅಧಿಕೃತ ಅಧಿಸೂಚನೆ ಹೊರಡಿಸಲಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿ, ಅಧಿನಿಯಮದ ಸೆಕ್ಷನ್ 1(2)ರ ಪ್ರಕಾರ ಸರ್ಕಾರ ಈ ಕಾಯ್ದೆ ಎಂದಿನಿಂದ ಜಾರಿಗೆ ಬರಲಿದೆ ಎಂದು ಪ್ರತ್ಯೇಕ ಅಧಿಕೃತ ಅಧಿಸೂಚನೆ ಹೊರಡಿಸಬೇಕು. ಆದರೆ, ಸರ್ಕಾರ ಇನ್ನೂ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಹೀಗಿದ್ದರೂ, ಕಾಯ್ದೆ ಜಾರಿಯಲ್ಲಿದೆ ಎಂದು ನೋಟಿಸ್ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕಾಯ್ದೆ ಜಾರಿ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸದೇ ಸೆಸ್ ಸಂಗ್ರಹಕ್ಕೆ ನೋಟಿಸ್ ಕೊಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಇದೇ ವೇಳೆ ಈ ಕುರಿತ ಕಚೇರಿ ಆದೇಶವನ್ನು ಹಿಂಪಡೆಯಲಾಗಿದೆ ಮತ್ತು ಕಾಯ್ದೆ ಜಾರಿ ಬಗ್ಗೆ ಈವರೆಗೂ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿಲ್ಲ ಎಂದು ಸರ್ಕಾರದ ಪರ ವಕೀಲರ ತಿಳಿಸಿದ್ದಾರೆ. ಆದ್ದರಿಂದ, ಜಾರಿಯಲ್ಲೇ ಇರದ ಕಾಯ್ದೆ ಆಧರಿಸಿ ಸೆಸ್ ಸಂಗ್ರಹ ಸಂಬಂಧ ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್‌ಗಳಿಗೆ ಕಾರ್ಮಿಕ ಇಲಾಖೆ ನೀಡಿರುವ ನೋಟಿಸ್‌ಗಳನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿ, ನೋಟಿಸ್‌ಗಳನ್ನು ರದ್ದುಪಡಿಸಿ ಆದೇಶಿಸಿತು.

Related Articles

Comments (0)

Leave a Comment