ರೇಣುಕಾಸ್ವಾಮಿ ಕೊಲೆ ಪ್ರಕರಣದ ಪಾಟಿ ಸವಾಲಿನ ವೇಳೆ ಆರೋಪಿಗಳ ಖುದ್ದು ಹಾಜರಿ ಸೂಕ್ತ; ಹೈಕೋರ್ಟ್ ಮೌಖಿಕ ಅಭಿಪ್ರಾಯ
- by Prashanth Basavapatna
- September 10, 2026
- 8 Views
ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ಪ್ರತಿ ವಿಚಾರಣೆ ದಿನದಂದು ಆರೋಪಿಗಳ ಖುದ್ದು ಹಾಜರಿ ಬದಲಿಗೆ ಪಾಟಿ ಸವಾಲು ದಿನಗಳಂದು ಮಾತ್ರ ಆರೋಪಿಗಳ ಖುದ್ದು ಹಾಜರಾತಿಗೆ ಅವಕಾಶ ಕಲ್ಪಿಸುವುದು ಸೂಕ್ತ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಯಾವ ದಿನದಂದು ಪಾಟಿ ಸವಾಲು ನಡೆಸಲಾಗುತ್ತದೆ ಎಂಬುದನ್ನು ನಿರ್ಧರಿಸಿ ಮಾಹಿತಿ ನೀಡುವಂತೆ ದರ್ಶನ್ ಮತ್ತು ಪ್ರಾಸಿಕ್ಯೂಷನ್ ಪರ ವಕೀಲರಿಗೆ ಸೂಚಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ವೇಳೆ ವಿಡಿಯೊ ಕಾನ್ಫರೆನ್ಸ್ (ವಿಸಿ) ಬದಲಿಗೆ ಭೌತಿಕವಾಗಿ ಹಾಜರುಪಡಿಸಬೇಕೆಂಬ ಮನವಿ ತಿರಸ್ಕರಿಸಿದ್ದ ನಗರದ 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿತು.
ಇದೇ ವೇಳೆ, ಪ್ರಕರಣದ ವಿಚಾರಣೆಯನ್ನು ಯಾವುದೇ ಸಮಸ್ಯೆ ಇಲ್ಲದೆ ಸೌಹಾರ್ದಯುತವಾಗಿ ಹಾಗೂ ಶೀಘ್ರವಾಗಿ ಪೂರ್ಣಗೊಳ್ಳಬೇಕು. ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗದೆ, ಸಾಕ್ಷಿಗಳ ವಿಚಾರಣೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕು. ವಿಚಾರಣೆ ವಿಳಂಬವಾದಷ್ಟೂ ಪ್ರಾಸಿಕ್ಯೂಷನ್‌ಗೆ ಅಪಾಯ. ಆದ್ದರಿಂದ, ತ್ವರಿತಗತಿಯಲ್ಲಿ ವಿಚಾರಣೆ ಪೂರ್ಣಗೊಳ್ಳಲು ಆರೋಪಿಗಳು ಮತ್ತು ಪ್ರಾಸಿಕ್ಯೂಷನ್ ಪರಸ್ಪರ ಸಹಕಾರ ನೀಡಬೇಕು. ಶೀಘ್ರ ವಿಚಾರಣೆ ಮುಗಿದು, ಒಂದು ವೇಳೆ ಆರೋಪಿಗಳು ಖುಲಾಸೆಯಾದರೆ ಅವರೂ ಬೇಗ ಜೈಲಿನಿಂದ ಬಿಡುಗಡೆಯಾಗಬಹುದು ಎಂದು ನ್ಯಾಯಪೀಠ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ ದರ್ಶನ್ ಪರ ವಕೀಲರು ವಾದ ಮಂಡಿಸಿ, ಸಾಕ್ಷಿಗಳ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಿ ಅವಶ್ಯಕತೆ ಇದ್ದು, ಕೋರ್ಟ್‌ಗೆ ಭೌತಿಕವಾಗಿ ಹಾಜರಾದರೆ ಅನುಕೂಲವಾಗುತ್ತದೆ ಎಂದರು.
ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು, ಯಾವುದೇ ಕಿರಿಕಿರಿಯಿಲ್ಲದೆ ಟ್ರಯಲ್ ನಡೆಯುತ್ತಿದೆ. ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆಯಿದ್ದು, ಆರೋಪಿಗಳು ಅದರ ಮೂಲಕ ವಿಚಾರಣೆಗೆ ಹಾಜರಾಗುವುದೇ ಸೂಕ್ತ ಎಂದರು.
ಹೈಕೋರ್ಟ್ ಸಲಹೆ:
ಆಗ ನ್ಯಾಯಪೀಠ ದರ್ಶನ್ ಪರ ವಕೀಲರನ್ನು ಉದ್ದೇಶಿಸಿ, ನಿಮ್ಮ ಕಕ್ಷಿದಾರರೊಂದಿಗೆ ಮಾತನಾಡುವುದು ಎಲ್ಲರಿಗೂ ಕೇಳುತ್ತದೆಂಬುದು ನಿಮ್ಮ ಆಕ್ಷೇಪವಿರಬಹುದು. ವಿಡಿಯೊ ಕಾನ್ಫರೆನ್ಸ್‌ನಲ್ಲಿ ಖಾಸಗಿತನದ ಮಾತುಕತೆಗೆ ವ್ಯವಸ್ಥೆ ಮಾಡಿಕೊಡುತ್ತೇವೆ. ಕೋರ್ಟ್ ಕಲಾಪಕ್ಕೆ 15 ನಿಮಿಷ ಮುನ್ನ ವಕೀಲರು ಆರೋಪಿಗಳೊಂದಿಗೆ ಮಾತನಾಡಿ ಅಗತ್ಯ ಸಲಹೆ-ಸೂಚನೆ ಪಡೆಯಬಹುದು. ಆದರೆ, ಅವರನ್ನು ಕೋರ್ಟ್‌ಗೇ ಕರೆತರಬೇಕೆಂದರೆ ಪೊಲೀಸರ ಭದ್ರತೆ ಕೊಡಬೇಕು. ಕೋರ್ಟ್ ಆವರಣದಲ್ಲಿ ಜನದಟ್ಟಣೆ ಉಂಟಾಗುತ್ತದೆ. ಅದನ್ನ ತಡೆಯುವುದು ಕಷ್ಟ. ಖುದ್ದು ಹಾಜರಾಗಲೇಬೇಕು ಎಂದಾದರೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕೋರ್ಟ್ ವ್ಯವಸ್ಥೆ ಮಾಡಿ, ಅಲ್ಲಿಯೇ ವಿಚಾರಣೆ ಮಾಡಲು ಸೂಚಿಸಹುದು ಎಂದು ಹೇಳಿತು.
ಮುಂದುವರಿದು, ನಾಳೆ ಸಾಕ್ಷಿಗಳ ವಿಚಾರಣೆ ನಡೆಯುತ್ತದೆ ಎಂದರೆ, ಇಂದೇ ಆರೋಪಿಗಳೊಂದಿಗೆ ಚರ್ಚಿಸಲು ವಕೀಲರಿಗೆ ಅವಕಾಶ ನೀಡಬಹುದು. ಹೆಡ್‌ಫೋನ್ ವ್ಯವಸ್ಥೆ ಸಹ ಮಾಡಿಕೊಡಲಾಗುವುದು. ಲ್ಯಾಪ್‌ಟಾಪ್ ನಲ್ಲೇ ವಿಡಿಯೊ ಕಾನ್ಫರೆನ್ಸ್‌ಗೆ ಅವಕಾಶ ಕೊಡಬಹುದು. ಖುದ್ದಾಗಿ ಹಾಜರಾಗುವುದಕ್ಕಿಂತ ವಿಡಿಯೊ ಕಾನ್ಫರೆನ್ಸ್‌ನಲ್ಲಿಯೇ ಚೆನ್ನಾಗಿ ಕೇಳುತ್ತದೆ. ಮುಖ್ಯ ಸಾಕ್ಷಿಗಳ ವಿಚಾರಣೆಯನ್ನು ಪರಪ್ಪನ ಅಗ್ರಹಾರ ಜೈಲಿನ ಕೋರ್ಟ್‌ನಲ್ಲೇ ನಡೆಸಬಹುದು. ಪ್ರಕರಣಕ್ಕೆ ಸಂಬಂಧಿಸಿದವರನ್ನು ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ. ತಂತ್ರಜ್ಞಾನ ಬಳಸುವುದೇ ಉತ್ತಮ ಆಯ್ಕೆ. ಸಾಕ್ಷಿಗಳ ಎಲ್ಲ ವಿಚಾರಣಾ ದಿನಾಂಕದಂದು ಖುದ್ದು ಹಾಜರಾಗುವ ಬದಲು ಪಾಟಿ ಸವಾಲು ವೇಳೆ ಆರೋಪಿಗಳನ್ನು ಹಾಜರುಪಡಿಸಲು ಸೂಚಿಸಬಹುದು. ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲು ಅವಕಾಶ ನೀಡಬಹುದು ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು.
ಅದಕ್ಕೆ ದರ್ಶನ್ ಪರ ವಕೀಲರು, ಈ ವಾಹನ ದಟ್ಟಣೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ, ಸಾಕ್ಷಿಗಳ ಪಾಟಿ ಸವಾಲು ವೇಳೆ ಕೋರ್ಟ್ ಮುಂದೆ ಹಾಜರುಪಡಿಸಿದರೆ ಉತ್ತಮ. 10 ದಿನಗಳು ಮಾತ್ರ ಖುದ್ದು ಹಾಜರಿಪಡಿಸಿದರೆ ಸಾಕು ಎಂದರು.
ಅಂತಿಮವಾಗಿ ನ್ಯಾಯಪೀಠ, ನಾಲ್ಕೈದು ಮಂದಿ ಮಾತ್ರ ಮುಖ್ಯ ಸಾಕ್ಷಿಗಳಿದ್ದಾರೆ. ಆದ್ದರಿಂದ, ಸಾಕ್ಷಿಗಳ ಪಾಟಿ ಸವಾಲಿಗೆ ಮೂರು ದಿನ ಸಾಕುತ್ತದೆ. ಅದಕ್ಕೆ ಯಾವ ದಿನ ಬೇಕು ಎಂದು ಆರೋಪಿ ಮತ್ತು ಪ್ರಾಸಿಕ್ಯೂಷನ್ ಪರ ವಕೀಲರು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದು ತಿಳಿಸಿದರೆ, ವಿಚಾರಣಾ ಕೋರ್ಟ್ ಜತೆ ಸಮಾಲೋಚಿಸಿ ತೀರ್ಮಾನಿಸಬಹುದು ಎಂದು ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)