ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೆ.10ರಂದು ಚುನಾವಣೆ ನಡೆಸದಿದ್ದರೆ ನ್ಯಾಯಾಲಯವೇ ಆದೇಶ ಹೊರಡಿಸಲಿದೆ – ಹೈಕೋರ್ಟ್‌

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್ 10ರಂದು ಸರ್ಕಾರ ಚುನಾವಣೆ ನಡೆಸದಿದ್ದರೆ, ಚುನಾವಣೆ ನಡೆಸುವ ಬಗ್ಗೆ ನ್ಯಾಯಾಲಯದಿಂದಲೇ ಆದೇಶ ಮಾಡಲಾಗುವುದು ಎಂದು ಹೈಕೋರ್ಟ್ ಹೇಳಿದೆ.

ಬ್ಯಾಂಕ್‌ನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನಿರ್ದೇಶನ ಕೋರಿ ಬ್ಯಾಂಕ್‌ನ ನಿರ್ದೇಶಕರೂ ಆಗಿರುವ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ಅವರು, ನಿರ್ದೇಶಕ ಮಂಡಳಿಗೆ ಚುನಾವಣೆ ನಡೆದು 8 ತಿಂಗಳು ಆಗಿದೆ. ಈವರೆಗೂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿಲ್ಲ. ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ ಎಂದು ಸಹಕಾರ ಚುನಾವಣಾ ಪ್ರಾಧಿಕಾರ ಕಳೆದ ಬಾರಿಯೇ ಹೇಳಿತ್ತು. ಈಗ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಆದರೆ, ಇದರ ಬಗ್ಗೆ ಸರ್ಕಾರ ಈವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಪರಿಸ್ಥಿತಿ ನೋಡಿದರೆ, ಸೆಪ್ಟೆಂಬರ್ 10ಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. ಆದ್ದರಿಂದ, ನ್ಯಾಯಾಲಯದಿಂದಲೇ ಆದೇಶ ಮಾಡಬೇಕು ಎಂದು ಕೋರಿದರು.

ಆಗ ನ್ಯಾಯಪೀಠ ಸರ್ಕಾರದ ಪರ ವಕೀಲರನ್ನು ಕುರಿತು, ಇಷ್ಟು ಸಮಯವಾದರೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಯಾಕೆ ನಡೆಸಿಲ್ಲ, ಚುನಾವಣೆ ನಡೆಸಲು ಸರ್ಕಾರಕ್ಕೆ ಇರುವ ಸಮಸ್ಯೆಯಾದರೂ ಏನು? ಆಡಳಿತ ಮಂಡಳಿ, ಪದಾಧಿಕಾರಿಗಳು ಇಲ್ಲದೆ ಸಂಸ್ಥೆ ಕಾರ್ಯನಿರ್ವಹಿಸುವುದು ಹೇಗೆ? ಸಂಸ್ಥೆಯಲ್ಲಿ ಏನಾದರೂ ಸಮಸ್ಯೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿತು.

ಅಂತಿಮವಾಗಿ, ಸೆಪ್ಟೆಂಬರ್ 10ಕ್ಕೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕಾದು ನೋಡೋಣ. ಆ ದಿನ ಚುನಾವಣೆ ನಡೆಯದಿದ್ದರೆ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಬಗ್ಗೆ ನ್ಯಾಯಾಲಯದಿಂದಲೇ ಆದೇಶ ಮಾಡಲಾಗುವುದು ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿತು.

Related Articles

Comments (0)

Leave a Comment