ಹಣದ ವಿಚಾರಕ್ಕೆ ಮನೆಗೆ ಬೆಂಕಿ ಹಚ್ಚಿ 6 ಜನರನ್ನು ಕೊಂದವನ ಖುಲಾಸೆ ಆದೇಶ ರದ್ದು; ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್
- by LegalSamachar
- September 4, 2026
- 12 Views
ಬೆಂಗಳೂರು: ಮೈಸೂರಿನಲ್ಲಿ 13 ವರ್ಷಗಳ ಹಿಂದೆ ಹಣಕಾಸಿನ ವೈಷಮ್ಯದಿಂದ ಮನೆಗೆ ಬೆಂಕಿ ಹಚ್ಚಿ ಒಂದೇ ಕುಟುಂಬದ 6 ಜನರ ಹತ್ಯೆ ಮಾಡಿದ ಪ್ರಕರಣದಲ್ಲಿ ಅಬ್ದುಲ್ ಷರೀಫ್ ಎಂಬಾತನನ್ನು ದೋಷಿ ಎಂದು ತೀರ್ಮಾನಿಸಿರುವ ಹೈಕೋರ್ಟ್, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿದ್ದ ಮೈಸೂರಿನ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಬಿ. ಪ್ರಮೋದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಆರೋಪಿಯನ್ನು ಖುಲಾಸೆಗೊಳಿಸಿ 2018ರ ಏಪ್ರಿಲ್ 28ರಂದು ಮೈಸೂರಿನ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ಜತೆಗೆ, ಅಪರಾಧಿ ಎಸಗಿದ ಕೃತ್ಯದಿಂದ 6 ಮಂದಿ ಮೃತಪಟ್ಟಿದ್ದಾರೆ. ಕೃತ್ಯವೆಸಗಿದಾಗ ಆತನಿಗೆ 50 ವರ್ಷವಾಗಿತ್ತು, ಈಗ 63 ವರ್ಷವಾಗಿದೆ. ಎಲ್ಲ ಅಂಶಗಳನ್ನು ಪರಿಗಣಿಸಿದರೆ ಐಪಿಸಿ ಸೆಕ್ಷನ್ 302 (ಕೊಲೆ), 307 (ಕೊಲೆ ಯತ್ನ) ಮತ್ತು 436 (ಮನೆ, ಪೂಜಾ ಸ್ಥಳ ಅಥವಾ ಆಸ್ತಿ ಪಾಲನೆಗೆ ಬಳಸುವ ಕಟ್ಟಡವನ್ನು ಬೆಂಕಿ ಅಥವಾ ಸ್ಫೋಟಕ ವಸ್ತುಗಳನ್ನು ಬಳಸಿ ನಾಶ ಮಾಡುವುದು) ಅಡಿಯ ಅಪರಾಧ ಕೃತ್ಯ ಸಾಬೀತಾಗಿರುವುದರಿಂದ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಆದೇಶಿಸಿರುವ ಹೈಕೋರ್ಟ್, ಅಬ್ದುಲ್ ಷರೀಫ್‌ಗೆ ನ್ಯಾಯಾಲಯದ ಮುಂದೆ ಶರಣಾಗುವಂತೆ ಸೂಚನೆ ನೀಡಿದೆ.
ಹೈಕೋರ್ಟ್ ಆದೇಶದಲ್ಲೇನಿದೆ?
ಆರೋಪಿಯನ್ನು ಖುಲಾಸೆಗೊಳಿಸಲು ವಿಚಾರಣಾ ನ್ಯಾಯಾಲಯ ನೀಡಿರುವ ಕಾರಣಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯನ್ನು ಪರಿಗಣಿಸುವಲ್ಲಿ ಒಂದು ವಿಚಿತ್ರ ನಿರ್ಧಾರ ತಳೆದಿದೆ. ಏಕೆಂದರೆ, ನ್ಯಾಯಾಲಯದ ಮುಂದೆ ಸ್ಪಷ್ಟವಾದ ಎಫ್‌ಎಸ್‌ಎಲ್ ವರದಿ ಇದ್ದು, ವಶಪಡಿಸಿಕೊಂಡ ವಸ್ತುಗಳಲ್ಲಿ ಪೆಟ್ರೋಲಿಯಂ ಅವಶೇಷಗಳು ಕಂಡುಬಂದಿವೆ ಮತ್ತು ಅದು ಸಕಾರಾತ್ಮಕವಾಗಿದೆ ಎಂದು ಪರೀಕ್ಷಿಸಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯವು ಅದನ್ನು ಸರಿಯಾದ ದೃಷ್ಟಿಕೋನದಿಂದ ಪರಿಗಣಿಸಬೇಕಾಗಿತ್ತು ಮತ್ತು ಅದನ್ನು ಪರಿಗಣಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಆರೋಪ ಹೊರಿಸುವ ಸಾಕ್ಷ್ಯಗಳನ್ನು ಪರಿಗಣಿಸುವ ಬದಲು, ವಿಚಾರಣಾ ನ್ಯಾಯಾಲಯವು ತಪ್ಪು ದಾರಿಯಲ್ಲಿ ಮುನ್ನಡೆದಿದೆ. ಸ್ಪೋಟವು ತಕ್ಷಣ ಸಂಭವಿಸಿದೆಯೇ ಅಥವಾ ನಂತರ ಸಂಭವಿಸಿದೆಯೇ ಎಂಬುದನ್ನು ದೊಡ್ಡದಾಗಿ ತೋರಿಸಲಾಗಿದೆ ಮತ್ತು ಅದನ್ನು ಪರಿಗಣಿಸುವ ಅಗತ್ಯವಿಲ್ಲ. ಏಕೆಂದರೆ, ಪ್ರಕರಣದಲ್ಲಿ ಆ ವಿಷಯ ಅಪ್ರಸ್ತುತ. ಆದ್ದರಿಂದ, ವಿಚಾರಣಾ ನ್ಯಾಯಾಲಯ ದಾಖಲೆಯಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಗಣಿಸುವಲ್ಲಿ ಲೋಪ ಎಸಗಿದೆ. ದಾಖಲೆಯಲ್ಲಿ ಲಭ್ಯವಿರುವ ಸಂಗತಿಯನ್ನು ಸರಿಯಾದ ದೃಷ್ಟಿಕೋನದಿಂದ ಪರಿಗಣಿಸಲಾಗಿಲ್ಲ. ಇದು ನ್ಯಾಯದಾನ ವಿಫಲತೆಗೆ ಕಾರಣವಾಗಿದೆ. ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿ ತಪ್ಪು ಮಾಡಿದೆ ಮತ್ತು ಆ ಆದೇಶ ದೋಷಪೂರಿತವಾಗಿದೆ. ಆದ್ದರಿಂದ, ಆ ಆದೇಶ ರದ್ದುಗೊಳಿಸಿ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣವೇನು?
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಆರೋಪಿ ಅಬ್ದುಲ್ ಷರೀಫ್ ಮತ್ತು ಮೊಹಮ್ಮದ್ ಅಮೀರ್ ಜಾನ್ ಕುಟುಂಬದ ನಡುವೆ ಹಣಕಾಸು ವಿಚಾರಕ್ಕೆ ಗಲಾಟೆ ನಡೆದು ವೈಷಮ್ಯ ಉಂಟಾಗಿತ್ತು. ಅದೇ ದ್ವೇಷದಲ್ಲಿ ಷರೀಫ್ 2013ರ ಏಪ್ರಿಲ್ 12ರಂದು ಮಧ್ಯರಾತ್ರಿ ಮೊಹಮ್ಮದ್ ಅಮೀರ್ ಜಾನ್ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಮೀರ್‌ಜಾನ್ ಸೇರಿ 6 ಮಂದಿ ಮೃತಪಟ್ಟಿದ್ದರೆ, ಮೂವರು ಸುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು. ಆಗಿನ ಇನ್‌ಸ್ಪೆಕ್ಟರ್ ಆರ್.ಪಿ. ಅಶೋಕ್ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
Related Articles
Thank you for your comment. It is awaiting moderation.


Comments (0)