ಚಿನ್ನ ಕಳ್ಳಸಾಗಣೆ; ಆರೋಪಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Prashanth Basavapatna
- September 1, 2026
- 10 Views
ಬೆಂಗಳೂರು: ಅಕ್ರಮವಾಗಿ ಎರಡು ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಯೊಬ್ಬನ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಇಂಥ ಪ್ರಕರಣಗಳಲ್ಲಿ ಸಂಘಟಿತ ಜಾಲದ ಚಟುವಟಿಕೆ ರಾಷ್ಟ್ರದ ಆರ್ಥಿಕ ಹಿತಾಸಕ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದೆ.
ಪ್ರಕರಣ ರದ್ದು ಕೋರಿ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದ ಎನ್. ನಂದೀಶ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಕೇಂದ್ರೀಯ ಕಸ್ಟಮ್ಸ್ ಪರ ವಕೀಲ ಮಧು ಎನ್. ರಾವ್ ವಾದ ಮಂಡಿಸಿ ಆರೋಪಿತ ಅರ್ಜಿದಾರರು ಷೋಕಾಸ್ ನೋಟಿಸ್‌ಗೆ ಉತ್ತರಿಸುವ ಮತ್ತು ಸಕ್ಷಮ ಪ್ರಾಧಿಕಾರದ ಮುಂದೆ ತಮ್ಮ ಪ್ರತಿವಾದವನ್ನು ಮಂಡಿಸುವ ಬದಲಿಗೆ ಹೈಕೋರ್ಟ್ ಮೆಟ್ಟಿಲು ತುಳಿದಿರುವುದು ಸರಿಯಲ್ಲ. ವಿಮಾನದಲ್ಲಿ ಚಿನ್ನ ಅಥವಾ ನಿಷೇಧಿತ ವಸ್ತುಗಳ ಕಳ್ಳಸಾಗಣೆಯ ಜಾಲದ ಕಾರ್ಯ ವೈಖರಿಯ ಬಗ್ಗೆ ಆಳವಾದ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಮತ್ತು ನಿಷಿದ್ಧ ವಸ್ತುಗಳ ಕಳ್ಳಸಾಗಣೆ ದಂಧೆ ಸಂಘಟಿತ ರೂಪದಲ್ಲಿ ದೊಡ್ಡ ಜಾಲದ ಮೂಲಕ (ಸಿಂಡಿಕೇಟ್) ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಅರ್ಜಿದಾರರು ಇಂಥದೊಂದು ಸಿಂಡಿಕೇಟ್ ಸರಪಳಿಯ ಮೊದಲ ಕೊಂಡಿಯೋ, ಮಧ್ಯವೋ ಅಥವಾ ದೊಡ್ಡ ಸಿಂಡಿಕೇಟ್‌ನ ಸಣ್ಣ ಕೊಂಡಿಯೋ ಎಂಬುದನ್ನು ತನಿಖೆಯಲ್ಲೇ ನಿಖರವಾಗಿ ಬಹಿರಂಗಪಡಿಸಬೇಕಿದೆ. ತನಿಖೆಯ ಆರಂಭಿಕ ಹಂತದಲ್ಲೇ ಇಂತಹ ಅರ್ಜಿಯನ್ನು ಪುರಸ್ಕರಿಸಿದರೆ ಕಸ್ಟಮ್ಸ್ ಆಡಳಿತದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವಿವರಿಸಿದ್ದರು.
ಜಾಲದಲ್ಲಿ ಪರದೆಯ ಹಿಂದೆ ಕಾರ್ಯ ನಿರ್ವಹಿಸುವ ವ್ಯಕ್ತಿಗಳ ಗುರುತು, ಚಿನ್ನದ ಮೂಲ, ಅದನ್ನು ಹೊತ್ತು ತಂದು ವಿಮಾನದಲ್ಲಿ ಬಿಟ್ಟ ಪ್ರಯಾಣಿಕ, ಅದರ ಸ್ಥಳವನ್ನು ತಿಳಿಸಿದ ವ್ಯಕ್ತಿಗಳು, ಅದನ್ನು ಮರಳಿ ಪಡೆದ ಶುಚಿಗೊಳಿಸುವ ಸಿಬ್ಬಂದಿ ಹಾಗೂ ಅಂತಿಮವಾಗಿ ಅದನ್ನು ಸ್ವೀಕರಿಸಬೇಕಾದ ವ್ಯಕ್ತಿಗಳು ಹೀಗೆ ಇದರ ಎಲ್ಲ ಕೊಂಡಿಗಳು ಎಲ್ಲಿವೆ ಎಂಬುದನ್ನು ಕೂಲಂಕಷ ತನಿಖೆಯ ಮುಖಾಂತರ ಪತ್ತೆ ಹಚ್ಚಬೇಕಿದೆ. ಆದ್ದರಿಂದ, ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಬಾರದು ಎಂದು ಕೋರಿದ್ದರು.
ಕಸ್ಟಮ್ಸ್ ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಪ್ರಕರಣದ ವಿಚಾರಣೆ ಇನ್ನೂ ಆರಂಭಿಕ ಹಂತದಲ್ಲಿದೆ. ಅರ್ಜಿದಾರರು ಷೋಕಾಸ್ ನೋಟಿಸ್‌ಗೆ ಉತ್ತರವಾಗಿ ತಮ್ಮ ಪ್ರತಿವಾದವನ್ನು ಸಮರ್ಥ ಪ್ರಾಧಿಕಾರದ ಮುಂದೆ ಮಂಡಿಸಬಹುದು. ಆಪಾದಿತ ವಹಿವಾಟಿನಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಸಾಬೀತುಪಡಿಸಲು ಅವರು ಎಲ್ಲ ಅವಕಾಶಗಳನ್ನು ಹೊಂದಿದ್ದಾರೆ. ಅಂತಹ ಪ್ರಕ್ರಿಯೆಯನ್ನು ಕೈಗೊಳ್ಳುವ ಮೊದಲೇ ವಿಚಾರಣೆಯನ್ನು ತಡೆಯುವುದು ಶಾಸನಬದ್ಧ ಪ್ರಕ್ರಿಯೆಯನ್ನು ಅದರ ಪ್ರಾರಂಭದಲ್ಲಿಯೇ ಕತ್ತು ಹಿಸುಕಿದಂತಾಗುತ್ತದೆ. ಇಂತಹ ಗಂಭೀರ ಪ್ರಕರಣಗಳಲ್ಲಿ ಹೈಕೋರ್ಟ್ ತನ್ನ ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಬಳಸಿಕೊಂಡು ವಿಚಾರಣೆ ರದ್ದುಗೊಳಿಸುವುದು ಸರಿಯಲ್ಲ. ಆರೋಪಗಳು ಆಳವಾದ ಪರಿಶೀಲನೆಯ ಅಗತ್ಯವನ್ನು ಒತ್ತಿ ಹೇಳುತ್ತಿರುವ ಕಾರಣ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಆದೇಶಿಸಿದೆ.
ಪ್ರಕರಣವೇನು?
ಅರ್ಜಿದಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕ್ಯಾಬಿನ್ ಕೇರ್ ಸಹಾಯಕನಾಗಿ ಕೆಲಸ ಮಾಡುತ್ತಿರುವ ಏರ್ ಇಂಡಿಯಾ ಏರ್‌ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ (ಎಐ-ಎಸ್‌ಎಟಿಎಸ್) ಶುಚಿ ಸಿಬ್ಬಂದಿ.
ಸೌದಿ ಏರ್‌ಲೈನ್ಸ್ ವಿಮಾನವೊಂದು (ಎಸ್‌ವಿ–866) 2025ರ ಜೂನ್ 29ರಂದು ಜೆಡ್ಡಾ, ಸೌದಿ ಅರೇಬಿಯಾ ಮುಖಾಂತರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಅಂದು ನಂದೀಶ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳನ್ನು ಶುಚಿಗೊಳಿಸಿದ್ದರು. ವಿಮಾನದ ಸೀಟಿನ ಸಂಖ್ಯೆ 39ಎ ನಲ್ಲಿ ಅವರಿಗೆ 2 ಕೆ.ಜಿ ತೂಕದ ಚಿನ್ನದ ಬಾರ್‌ಗಳು ಮುಚ್ಚಿದ ಪ್ಯಾಕೆಟ್‌ನಲ್ಲಿ ಲಭ್ಯವಾಗಿದ್ದವು ಅಥವಾ ಅವುಗಳನ್ನು ಅವರು ಅಲ್ಲಿಂದ ತಮ್ಮ ವಶಕ್ಕೆ ಪಡೆದಿದ್ದರು. ನಂತರ ಕಸದಲ್ಲಿ ಇರಿಸಲಾಗಿತ್ತು. ಕಸ ಸಾಗಿಸುವ ವಾಹನದ ಮೂಲಕ ಅದನ್ನು ಹೊರಗೆ ಸಾಗಿಸುವ ಪ್ರಯತ್ನ ನಡೆದಿತ್ತು ಎನ್ನುವುದು ಕಸ್ಟಮ್ಸ್ ಆರೋಪವಾಗಿದೆ.
ಈ ಸಂಬಂಧ ಆರೋಪಿಯ ವಿರುದ್ಧ ವಿಮಾನ ನಿಲ್ದಾಣ ಗುಪ್ತಚರ ಘಟಕದ ಅಧಿಕಾರಿಗಳು ಕಸ್ಟಮ್ಸ್ ಕಾಯ್ದೆ–1962ರ ಅನುಸಾರ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)