ಯುವತಿಗೆ ಗುಪ್ತಾಂಗ ತೋರಿಸಿದ ಆರೋಪ; ಯುವಕನ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಮೂತ್ರ ವಿಸರ್ಜನೆಯ ಬಳಿಕ ತಿರುಗಿ ಗುಪ್ತಾಂಗ ತೋರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ವಿರುದ್ದ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಕೋರಿ ಚಿಕ್ಕಮಗಳೂರಿನ 26 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಬಸ್‌ನಿಂದ ಇಳಿದ ಅರ್ಜಿದಾರ ಶೌಚಗೃಹ ಹುಡುಕಾಡಿ, ಕೊನೆಗೆ ಬಯಲಿನಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದು, ಆನಂತರ ತಿರುಗಿದ್ದಾನೆ. ಈ ಸಂದರ್ಭದಲ್ಲಿ ದೂರುದಾರೆಯು ಅಲ್ಲಿಗೆ ಬಂದಿದ್ದಾರೆ. ಇಲ್ಲಿ ಮಹಿಳೆಯ ಘನತೆಗೆ ಚ್ಯುತಿಯಾಗುವಂಥ ಯಾವುದೇ ಕೃತ್ಯವನ್ನು ಆತ ಎಸಗಿಲ್ಲ. ಈ ಪ್ರಕರಣದಲ್ಲಿ ವಿಚಾರಣೆ ಮುಂದುವರಿಯಲು ಅನುಮತಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಪ್ರಕರಣ ರದ್ದುಪಡಿಸಿದೆ.

ಇದಕ್ಕೂ ಮುನ್ನ ಅರ್ಜಿದಾರ ಯುವಕನ ಪರ ವಕೀಲ ಎಚ್‌.ಎಸ್‌. ಅಭಿಲಾಷ್‌ ವಾದ ಮಂಡಿಸಿ, ಅರ್ಜಿದಾರ ಧರ್ಮಶಾಸ್ತ್ರದ ವಿದ್ಯಾರ್ಥಿಯಾಗಿದ್ದು, ದೆಹಲಿಯಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾನೆ. ಆತ ಮೂತ್ರ ವಿಸರ್ಜನೆ ಹೋಗಿದ್ದನು ಅಷ್ಟೆ. ದೂರಿನಲ್ಲಿ ಏನೂ ಇಲ್ಲ. ಈಗ ಪ್ರಕರಣವನ್ನು ಪರಿಣಾಮಕಾರಿಯಾಗಿಸಲು ಯತ್ನಿಸುತ್ತಿದ್ದಾರೆ ಎಂದರು.

ದೂರುದಾರರ ಪರ ವಕೀಲರು, ಅರ್ಜಿದಾರ ಆರೋಪಿಯು ಗುಪ್ತಾಂಗ ತೋರಿಸುವುದಲ್ಲದೇ ಅಸಭ್ಯ ಸಂಜ್ಞೇಯನ್ನು ಮಾಡಿದ್ದಾನೆ ಎಂದರು.

ಇದನ್ನು ಆಲಿಸಿದ ನ್ಯಾಯಪೀಠ, ಯುವಕ ಪಾಪ ಮೂತ್ರ ವಿಸರ್ಜನೆಗೆ ಹೋಗಿದ್ದಾನೆ. ಆ ಸಂದರ್ಭದಲ್ಲಿ ದೂರುದಾರೆ ಅಲ್ಲಿ ಹೋಗಿದ್ದಾರೆ. ಇದಕ್ಕೆ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದೆ. ಏನಿದೆಲ್ಲ ಎಂದು ಪ್ರಶ್ನಿಸಿತಲ್ಲದೆ, ಅಂತಿಮವಾಗಿ ಪ್ರಕರಣ ರದ್ದುಪಡಿಸಿ ಆದೇಶಿಸಿತು.

ಪ್ರಕರಣವೇನು?
2026ರ ಜನವರಿ 24ರಂದು ಮಧ್ಯಾಹ್ನ 3.40ರ ಸಮಯದಲ್ಲಿ ಬೆಂಗಳೂರಿನ ಹೆಬ್ಬಾಳ ರಿಂಗ್‌ ರಸ್ತೆಯ ಬಳಿ ಬಸ್‌ ಇಳಿದು ಮನೆಗೆ ಹೋಗಲು ರೈಲ್ವೆ ಟ್ರ್ಯಾಕ್‌ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿಗೆ ಬಂದ ಅಪರಿಚಿತ ವ್ಯಕ್ತಿ ತನ್ನ ಬಳಿಗೆ ಬಂದು ಆತನ ಗುಪ್ತಾಂಗ ತೋರಿಸಿ, ಸನ್ನೆ ಮಾಡಿದ್ದ. ಆಗ ನಾನು ಸ್ವಲ್ಪ ಮುಂದೆ ಬಂದು ನಂತರ ಮತ್ತೆ ಹೋಗಿ ಆತನನ್ನು ಹಿಡಿದುಕೊಂಡೆ. ಆತ ನನ್ನಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಕೂಗಿಕೊಂಡಿದ್ದು, ಅಲ್ಲಿದ್ದ ಜನರು ಆತನನ್ನು ಹಿಡಿದುಕೊಂಡರು ಎಂದು ಯುವತಿ ನೀಡಿದ ದೂರಿನ ಅನ್ವಯ ಕೊಡಿಗೇಹಳ್ಳಿ ಪೊಲೀಸರು ಬಿಎನ್‌ಎಸ್‌ ಸೆಕ್ಷನ್‌ 75(2)ರ ಅಡಿ ಪ್ರಕರಣ ದಾಖಲಿಸಿದ್ದರು.

Related Articles

Comments (0)

Leave a Comment