ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗಕ್ಕೆ ಹೈಕೋರ್ಟ್ ಕಿಡಿ; ಸಿವಿಲ್ ವ್ಯಾಜ್ಯದಲ್ಲಿ ಎದುರುದಾರರ ಮೇಲೆ ಹೂಡಲಾಗಿದ್ದ ಪ್ರಕರಣ ರದ್ದು
- by Prashanth Basavapatna
- August 31, 2026
- 10 Views
ಬೆಂಗಳೂರು: ಪರಸ್ಪರರ ಸಿವಿಲ್ ವ್ಯಾಜ್ಯದಲ್ಲಿನ ಯಾವುದೇ ವಿವಾದಾಂಶಕ್ಕೆ ಅಪರಾಧದ ಸೋಗು ಹಾಕಿ ತಮ್ಮ ಎದುರುದಾರರ ವಿರುದ್ಧ ಆರೋಪ ಹೊರಿಸಿ ಅದನ್ನು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಕ್ರಿಮಿನಲ್ ಕಾನೂನಿನ ಕಕ್ಷೆಗೆ ಪರಿವರ್ತನೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಅತ್ತಿಬೆಲೆಯ ಮಂಜುನಾಥ್ ಮತ್ತಿತರರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ದೂರುದಾರರು ಮತ್ತು ಆರೋಪಿಗಳ ನಡುವಿನ ವಿವಾದವು ಸಂಪೂರ್ಣ ಸಿವಿಲ್ ವ್ಯಾಜ್ಯ ಸ್ವರೂಪದ್ದು. ಇದರಲ್ಲಿ ಸ್ಥಿರಾಸ್ತಿ ಹಕ್ಕು ಯಾರದು ಎಂಬುದನ್ನು ನ್ಯಾಯಾಲಯ ಇನ್ನೂ ಘೋಷಿಸಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಸುಪರ್ದಿಯಲ್ಲಿರುವ ಜಮೀನಿನಲ್ಲಿ ಆರೋಪಿಗಳು ಹಕ್ಕು ಸಾಧಿಸಲು ಯತ್ನಿಸಿ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂಬ ಆರೋಪವು ಕುದುರೆಯ ಮುಂದೆ ಬಂಡಿಯನ್ನು ನಿಲ್ಲಿಸಿದಂತಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಹಾಲಿ ಪ್ರಕರಣದಲ್ಲಿ ದೂರುದಾರರು, ಅರ್ಜಿದಾರರ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತು ವಿಚಾರಣೆಗೆ ಬಾಕಿ ಇರುವ ಸಿವಿಲ್ ಮೊಕದ್ದಮೆಗಳಲ್ಲಿ ವ್ಯಾಜ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಳ್ಳಲು ಒಂದು ಸಾಧನವಾಗಿ ಬಳಸಿದ್ದಾರೆ ಎಂಬುದು ನಿಸ್ಸಂದೇಹವಾಗಿ ಹೊರಹೊಮ್ಮುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
ಅಪರಾಧ ಪ್ರಕ್ರಿಯೆಯು ಸಿವಿಲ್ ವಿವಾದದಿಂದ ಉಂಟಾಗುವ ವದಂತಿಗಳನ್ನು ಇತ್ಯರ್ಥಪಡಿಸಲು ಅತೃಪ್ತ ದಾವೆದಾರನ ಕೈಯಲ್ಲಿ ಆಯುಧವಾಗಲು ಅನುಮತಿಸಲಾಗುವುದಿಲ್ಲ ಎಂಬ ಅಂಶವನ್ನು ಪುನುರಚ್ಚರಿಸಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣವೇನು?
ದೂರುದಾರೆಯಾದ ಎಂ.ಉಮಾ ಹಾಗೂ ಅರ್ಜಿದಾರ ಮಂಜುನಾಥ್ ಸೇರಿ 7 ಜನ ಆರೋಪಿಗಳ ನಡುವೆ ಆನೇಕಲ್ ತಾಲೂಕು ಜಿಗಣಿ ಹೋಬಳಿಯ ಮಹಾಲಿಂಗಪುರದಲ್ಲಿರುವ 6.20 ಎಕರೆ ಜಮೀನಿಗೆ ಸಂಬಂಧಿಸಿದಂತೆ 2016ರಿಂದ ಸಿವಿಲ್ ವ್ಯಾಜ್ಯ ನಡೆಯುತ್ತಿದೆ. ಈ ಮಧ್ಯೆ ಉಮಾ ಅವರು ಜಿಗಣಿ ಪೊಲೀಸ್ ಠಾಣೆಗೆ ದೂರು ನೀಡಿ, ನಮ್ಮ ಸುಪರ್ದಿಯಲ್ಲಿರುವ ಜಮೀನಿನಲ್ಲಿ ಆರೋಪಿಗಳು ಅತಿಕ್ರಮ ಪ್ರವೇಶ ಮಾಡಿದ್ದಾರೆ ಹಾಗೂ ಅಲ್ಲಿದ್ದ ನಮ್ಮ ಪೂರ್ವಜನರ ಸಮಾಧಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದರು.
ಈ ದೂರು ಆಧರಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(ಆರ್), 3(1)(ಎಸ್), 3(1)(ಟಿ), 3(1)(ಎ), 3(1)(ಝಡ್ಎ) ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 329, 351 ಮತ್ತು 45ರ ಅಡಿಯಲ್ಲಿ 2025ರ ಫೆಬ್ರುವರಿ 4ರಂದು ಎಫ್ಐಆರ್ ದಾಖಲಿಸಲಾಗಿತ್ತು. ದೂರಿನ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 2025ರ ಮೇ 19ರಂದು ಜಿಗಣಿ ಪೊಲೀಸರಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)