ಸೊಳ್ಳೆ ನಿಯಂತ್ರಣಕ್ಕೆ ಕರೆಯಲಾದ ಟೆಂಡರ್ ರದ್ದು ಕೋರಿ ಅರ್ಜಿ; ಜಿಬಿಎಗೆ ಹೈಕೋರ್ಟ್ ನೋಟಿಸ್
- by Prashanth Basavapatna
- August 31, 2026
- 7 Views
ಬೆಂಗಳೂರು: ನಗರದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕರೆಯಲಾಗಿರುವ ಟೆಂಡರ್ ರದ್ದು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಗ್ರೇಟರ್ ಬೆಂಗಳೂರು ಸೊಳ್ಳೆ ನಿಯಂತ್ರಣ ಗುತ್ತಿಗೆದಾರರ ಸಂಘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಜಿಬಿಎ ಮುಖ್ಯ ಆಯುಕ್ತರು, ಪಶ್ಚಿಮ ಪಾಲಿಕೆ, ಕೇಂದ್ರ ಪಾಲಿಕೆ, ಉತ್ತರ ಪಾಲಿಕೆ, ದಕ್ಷಿಣ ಪಾಲಿಕೆ, ಜಿಬಿಎ ವಿಶೇಷ ಆಯುಕ್ತ (ಆರೋಗ್ಯ), ಜಿಬಿಎ ಮುಖ್ಯ ಅರೋಗ್ಯಾಧಿಕಾರಿ ಹಾಗೂ ನಾಲ್ಕೂ ಪಾಲಿಕೆಗಳ ಆರೋಗ್ಯಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?
ಅರ್ಜಿದಾರ ಸಂಘದ ಸದಸ್ಯರು ಬಿಬಿಎಂಪಿಯ ಮೃತ ಹಾಗೂ ನಿವೃತ್ತ ನೌಕರರ ಕುಟುಂಬದ ಸದಸ್ಯರಾಗಿದ್ದಾರೆ. ಇವರ ಸೇವೆಯನ್ನು ಪರಿಗಣಿಸುವ ಸಂಬಂಧ 2013ರಲ್ಲಿ ಬಿಬಿಎಂಪಿ (ಜಿಬಿಎ) ನಿರ್ಣಯ ಕೈಗೊಂಡಿದೆ. ಅರ್ಜಿದಾರರ ಸಂಘದ ಕೆಲ ದೂರುಗಳಿದ್ದವು, ಅದನ್ನು ಆಧರಿಸಿ ಜಿಬಿಎ ವಿಶೇಷ ಆಯುಕ್ತರು (ಆರೋಗ್ಯ) 2026ರ ಜೂನ್ 15ರಂದು ಕೆಲವು ಶಿಫಾರಸುಗಳನ್ನು ಮಾಡಿ, ಟೆಂಡರ್ ಅಧಿಸೂಚನೆ ಹೊರಡಿಸುವ ಮೊದಲು ಈ ಶಿಫಾರಸುಗಳನ್ನು ಜಿಬಿಎ ಮುಖ್ಯ ಆಯುಕ್ತರ ಗಮನಕ್ಕೆ ತರಬೇಕು ಎಂದು ಹೇಳಿದ್ದರು. ಆದರೆ, ಅದನ್ನು ಪರಿಗಣಿಸದೆ, ಸೊಳ್ಳೆ ನಿಯಂತ್ರಣಕ್ಕೆ 2026 ಜುಲೈ 24ರಂದು ಟೆಂಡರ್ ಆಹ್ವಾನಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Related Articles
Thank you for your comment. It is awaiting moderation.


Comments (0)