ಶ್ರೀಸಾಯಿ ಮಂಡಳಿಗೆ ಕಾಡು ಮಲ್ಲೇಶ್ವರ ದೇವಾಲಯದ ಜಾಗ ಗುತ್ತಿಗೆ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಕಾಡು ಮಲ್ಲೇಶ್ವರ ದೇವಾಲಯಕ್ಕೆ ಸೇರಿದ 6 ಸಾವಿರ ಚದರ ಅಡಿ ಜಾಗವನ್ನು 10 ವರ್ಷದ ಅವಧಿಗೆ ಶ್ರೀ ಸಾಯಿ ಮಂಡಳಿಗೆ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್, ಅರ್ಜಿ ವಿಚಾರಣಾ ಹಂತದಲ್ಲಿರುವಾಗ ಗುತ್ತಿಗೆ ಕರಾರು ಅನುಷ್ಠಾನಗೊಂಡರೆ ಅದು ಅರ್ಜಿ ಕುರಿತ ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಡಲಿದೆ ಎಂದು ಸ್ಪಷ್ಟಪಡಿಸಿದೆ.

ಕಾಡು ಮಲ್ಲೇಶ್ವರ ದೇವಾಲಯಕ್ಕೆ ಸೇರಿದ 6 ಸಾವಿರ ಚದರ ಅಡಿ ಜಾಗವನ್ನು 10 ವರ್ಷದ ಗುತ್ತಿಗೆ ಅವಧಿಗೆ ಶ್ರೀ ಸಾಯಿ ಮಂಡಳಿಗೆ ಮಾಸಿಕ 5.15 ಲಕ್ಷ ರೂ. ಬಾಡಿಗೆ ಮಂಜೂರು ಮಾಡಿರುವ 2026ರ ಫೆಬ್ರವರಿ 5ರ ಸಚಿವ ಸಂಪುಟದ ನಿರ್ಣಯವನ್ನು ರದ್ದುಪಡಿಸಬೇಕು ಎಂದು ಕೋರಿ ಬಿ.ಆರ್. ಅನಿಲ್ ಕುಮಾರ್ ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಮುಜರಾಯಿ ಇಲಾಖೆ, ಹಿಂದು ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಆಯುಕ್ತರು ಮತ್ತು ಶ್ರೀ ಸಾಯಿ ಮಂಡಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿತು.

ಇದೇ ವೇಳೆ, ಅರ್ಜಿ ವಿಚಾರಣಾ ಹಂತದಲ್ಲಿರುವಾಗ ಗುತ್ತಿಗೆ ಕರಾರು ಅನುಷ್ಠಾನಗೊಂಡರೆ ಅದು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಸ್ಪಷ್ಟಪಡಿಸಿತು.

Related Articles

Comments (0)

Leave a Comment