ಸಾರ್ವಜನಿಕವಾಗಿ ಬೇಡಿಕೆ ಕೇಳಿ ಬಂದಿದ್ದಕ್ಕೆ ಕೆಪಿಎಸ್ಸಿ ಅಧ್ಯಕ್ಷರ ಅಮಾನತು; ಹೈಕೋರ್ಟ್ಗೆ ವಿವರಣೆ
- by Prashanth Basavapatna
- July 22, 2026
- 7 Views
ಬೆಂಗಳೂರು: ಕರ್ನಾಟಕ ಲೋಕಾ ಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡಲು ಸಾರ್ವಜನಿಕವಾಗಿ ವ್ಯಾಪಕ ಬೇಡಿಕೆ ಕೇಳಿ ಬಂದಿದ್ದು, ಇದಕ್ಕಾಗಿಯೇ ಅವರನ್ನು ಅಮಾನತು ಮಾಡಲಾಗಿದೆ. ಆನಂತರ, ಈ ನಿರ್ಧಾರಕ್ಕೆ ರಾಜ್ಯ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳ ಪರ ವಕೀಲರು ಅಮಾನತು ಕ್ರಮವನ್ನು ಹೈಕೋರ್ಟ್ನಲ್ಲಿ ಸಮರ್ಥಿಸಿದರು.
ಕೆಪಿಎಸ್ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಪಡಿಸಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಜುಲೈ 10ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ,ಪರಿಸ್ಥಿತಿ ಬೇಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಅರ್ಜಿದಾರರನ್ನು ಅಮಾನತು ಮಾಡಿದ್ದಾರೆ. ಇದರ ಬೆನ್ನಿಗೇ ರಾಜ್ಯ ಸಚಿವ ಸಂಪುಟ ರಾಜ್ಯಪಾಲರ ನಿರ್ಧಾರವನ್ನು ಒಪ್ಪಿದೆ ಎಂದರು.
ಮುಂದುವರಿದು, ಈ ಪ್ರಕರಣಲ್ಲಿ ತುರ್ತು ಇತ್ತು. ಸಂಪುಟ ಸಭೆ ನಡೆಯಲು ಸಮಯ ಬೇಕಾಗುತ್ತದೆ. ಎಲ್ಲ ಸಚಿವರು ಲಭ್ಯರಾಗಬೇಕಾಗುತ್ತದೆ. ಸಾಹುಕಾರ್ ಅಮಾನತಿನ ಕುರಿತು ಸಾರ್ವಜನಿಕವಾಗಿ ವ್ಯಾಪಕ ಬೇಡಿಕೆ ಇತ್ತು. ಸಾಂವಿಧಾನಿಕ ಸಂಸ್ಥೆಯ ಅಧ್ಯಕ್ಷರಾದ ಸಾಹುಕಾರ್ ಅವರು ಅನುಮಾನಕ್ಕೆ ಆಸ್ಪದ ನೀಡದಂತಿರಬೇಕು. ಆದರೆ, ಅವರು ನಡೆದುಕೊಂಡಿರುವುದು ಸರಿಯಾಗಿಲ್ಲ ಮತ್ತು ಅಕ್ರಮದಿಂದ ಕೂಡಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಸಂಪುಟವು ಕರ್ನಾಟಕ ಸರ್ಕಾರ (ಕಲಾಪಗಳು) ನಿಯಮಗಳು1976, ನಿಯಮ 20(1)(ಬಿ) ಅಡಿ ಔಪಚಾರಿಕವಾಗಿ ಕೆಪಿಎಸ್ಸಿ ಅಧ್ಯಕ್ಷರ ಅಮಾನತು ಆದೇಶಕ್ಕೆ ಒಪ್ಪಿಗೆ ನೀಡಿದೆ. ಈ ಸಂಬಂಧ ಸರ್ಕಾರ ಮೆಮೊ ಸಲ್ಲಿಸಿದೆ. ರಾಜ್ಯಪಾಲರ ನಿಲುವನ್ನು ಒಪ್ಪಲಾಗಿದ್ದು, ಇದಕ್ಕೆ ಅವಕಾಶವಿದೆ ಎಂದು ಉದಯ ಹೊಳ್ಳ ತಿಳಿಸಿದರು.
ಈ ಹಂತದಲ್ಲಿ, ನಿರ್ಧಾರ ಕೈಗೊಂಡ ನಂತರ ಸಂಪುಟ ಒಪ್ಪಿಗೆ ನೀಡುವ ಪ್ರಶ್ನೆ ಎಲ್ಲಿದೆ? ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊಳ್ಳ ಅವರು ಓರಿಯಂಟಲ್ ಇನ್ಶೂರೆನ್ಸ್ ಪ್ರಕರಣದಲ್ಲಿ ಆರಂಭದಲ್ಲಿ ನಿಯಮಬಾಹಿರವಾದ ಆದೇಶವನ್ನು ಸಿಂಧುಗೊಳಿಸಬಹುದು ಎಂದು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಆದೇಶಿಸಿದೆ ಎಂದರು.
ವಿಸ್ತೃತ ಪೀಠವು ಅಕ್ರಮ ಆದೇಶವನ್ನು ಸಿಂಧುಗೊಳಿಸಬಹುದು ಎಂದು ಆದೇಶಿಸಿದೆ. ಅಮಾನತು ಆದೇಶಕ್ಕೂ ಮುಂಚಿನ ದಿನಕ್ಕೆ ಸಿಂಧುಗೊಳಿಸುವ ನಿರ್ಧಾರ ಅನ್ವಯಿಸುತ್ತದೆ. ಆದ್ದರಿಂದ, ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಸಾಹುಕಾರ್ ಅವರನ್ನು ಅಮಾನತು ಮಾಡಿರುವ ರಾಜ್ಯಪಾಲರ ಆದೇಶ ಸಿಂಧುವಾಗಿದೆ ಎಂದು ಸಮರ್ಥಿಸಿಕೊಂಡರು.
ಈ ವೇಳೆ, ಜಾತಿ ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸಿರುವುದು ಸಾಹುಕಾರ್ ಪುತ್ರಿ. ಸಾಹುಕಾರ್ ವಿರುದ್ಧ ಯಾವುದೇ ಆರೋಪ ಇಲ್ಲವಲ್ಲ ಎಂದು ನ್ಯಾಯಾಲಯ ಹೇಳಿತು. ಇದಕ್ಕೆ ಹೊಳ್ಳ ಅವರು, ಪುತ್ರಿಯ ಆದಾಯ ಪ್ರಮಾಣಪತ್ರದ ದುರ್ನಡತೆಯ ಬಗ್ಗೆ ಸಾಹುಕಾರ್ಗೆ ಮಾಹಿತಿ ಇತ್ತು. ಅದಾಗ್ಯೂ, ನಿರ್ಲಜ್ಜವಾಗಿ ಸಾಹುಕಾರ್ ನಡೆದುಕೊಂಡಿದ್ದಾರೆ. ತುರ್ತು ಇದ್ದುದರಿಂದ ಅವರನ್ನು ಅಮಾನತು ಮಾಡಲಾಗಿದೆ. ರಾಜ್ಯಪಾಲರ ಆದೇಶವನ್ನು ಸಂಪುಟ ಒಪ್ಪಿರುವುದರಿಂದ ಅದು ಸಿಂಧುವಾಗುತ್ತದೆ ಎಂದರು.
ಇದಕ್ಕೂ ಮುನ್ನ, ಸಾಹುಕಾರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ಅವರು, ಸಂಪುಟ ಸಭೆಯ ಸಲಹೆ ಮತ್ತು ಶಿಫಾರಸು ಆಧರಿಸಿ ರಾಜ್ಯಪಾಲರು ಅಮಾನತು ಆದೇಶ ಮಾಡದೇ ಇರುವುದರಿಂದ ಅದು ಅಸಾಂವಿಧಾನಿಕವಾಗುತ್ತದೆ. ಆದ್ದರಿಂದ, ಅಮಾನತು ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸಮಯದ ಅಭಾವದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)