ಧರ್ಮಸ್ಥಳ ಸಾಮೂಹಿಕ ಅಂತ್ಯಸಂಸ್ಕಾರ ಪ್ರಕರಣ; 200 ಕೋಟಿ ಷಡ್ಯಂತ್ರದ ಆರೋಪ ಮಾಡಿದ್ದ ಚಿನ್ನಯ್ಯನ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್
- by Jagan Ramesh
- July 21, 2026
- 8 Views
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಶವಸಂಸ್ಕಾರ ಪ್ರಕರಣ ಕುರಿತ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶಿಸುವಂತೆ ಕೋರಿ ಆರೋಪಿ ಸಿ.ಎನ್. ಚಿನ್ನ (ಚಿನ್ನಯ್ಯ) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಪ್ರಕರಣದ ಅಂತಿಮ ವರದಿಯನ್ನು 2025ರ ನವೆಂಬರ್‌ನಲ್ಲೇ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಇದೇ ಜುಲೈ 15ರಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಸಲ್ಲಿಸಲಾಗಿದೆ ಎಂದು ಎಸ್‌ಐಟಿ ಪರ ವಕೀಲರ ಹೇಳಿಕೆ ಪರಿಗಣಿಸಿ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತು.
ಪ್ರಕರಣ ಸಂಬಂಧ ಶೀಘ್ರ ಕ್ರಮ ಕೈಗೊಳ್ಳಲು ಎಸ್ಐಟಿಗೆ ನಿರ್ದೇಶಿಸುವಂತೆ ಕೋರಿ ಮಂಡ್ಯ ಮೂಲದ, ಪ್ರಸ್ತುತ ಧರ್ಮಸ್ಥಳ ವಾಸ್ತವ್ಯ ಹೊಂದಿರುವ ಸಿ.ಎನ್. ಚಿನ್ನ (50) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಎಸ್‌ಐಟಿ ಪರ ಹಾಜರಾದ ಎಸ್‌ಪಿಪಿ ಬಿ.ಎನ್. ಜಗದೀಶ್ ಅವರು, ಶೀಘ್ರ ತನಿಖೆ ಪೂರ್ಣಗೊಳಿಸಲು ಎಸ್‌ಐಟಿಗೆ ನಿರ್ದೇಶಿಸಬೇಕು ಎನ್ನುವುದು ಅರ್ಜಿದಾರರ ಮನವಿಯಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ 2025ರ ನವೆಂಬರ್‌ನಲ್ಲೇ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸಲಾಗಿದೆ. ಹೆಚ್ಚುವರಿಯಾಗಿ ಎಫ್‌ಎಸ್‌ಎಲ್ ವರದಿಯನ್ನು 2026ರ ಜುಲೈ 15ರಂದು ಸಲ್ಲಿಸಲಾಗಿದೆ. ಆದ್ದರಿಂದ, ಅರ್ಜಿಯಲ್ಲಿ ಪರಿಗಣಿಸಬಹುದಾದ ಯಾವುದೇ ವಿಚಾರಗಳು ಉಳಿದಿಲ್ಲ. ಇಲ್ಲಿ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ, ಅಂತಿಮ ವರದಿಯ ಬಗ್ಗೆ ಆಕ್ಷೇಪಣೆಗಳಿದ್ದರೆ ಯಾರು ಬೇಕಿದ್ದರೂ ಆ ವರದಿಯನ್ನು ಪ್ರಶ್ನಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನು ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರದ ಪ್ರಕಾರ 2025ರ ನವೆಂಬರ್ ತಿಂಗಳಿನಲ್ಲೇ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು ಹಾಗೂ ಎಫ್‌ಎಸ್‌ಎಲ್ ವರದಿ ಸಲ್ಲಿಕೆ ಮಾತ್ರ ಬಾಕಿ ಇತ್ತು. ಆ ಎಫ್‌ಎಸ್‌ಎಲ್ ವರದಿಯನ್ನು ಜುಲೈ 15ರಂದು ಸಲ್ಲಿಸಲಾಗಿದೆ. ಇದರೊಂದಿಗೆ, ಅಂತಿಮ ವರದಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಹಾಲಿ ಅರ್ಜಿ ಹಾಗೂ ಅದರಲ್ಲಿನ ಮನವಿಗಳು ನಿರರ್ಥಕವಾಗಿವೆ ಎಂದು ಎಸ್‌ಪಿಪಿ ತಿಳಿಸಿದ್ದಾರೆ. ಅವರ ಈ ಹೇಳಿಕೆ ದಾಖಲಿಸಿಕೊಂಡು, ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಆದೇಶಿಸಿತು.
ಮಧ್ಯಂತರ ಅರ್ಜಿಗಳೂ ಇತ್ಯರ್ಥ:
ಇದೇ ವೇಳೆ, ಅರ್ಜಿಯಲ್ಲಿ ತಮ್ಮ ವಿರುದ್ಧ ಅನಗತ್ಯ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ಆಕ್ಷೇಪಿಸಿ ಚಿತ್ರದುರ್ಗದ ರಮಾ ನಾಗರಾಜ್ ಹಾಗೂ ಜಯಂತ್ ಎಂಬುವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನೂ ನ್ಯಾಯಾಲಯ ಇತ್ಯರ್ಥಪಡಿಸಿದೆ.
ರಿಟ್ ಅರ್ಜಿಯಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಧ್ಯಂತರ ಅರ್ಜಿದಾರರ ಮನವಿಯಾಗಿದೆ. ಅರ್ಜಿಯಲ್ಲಿ ಅಥವಾ ಇನ್ನಾವುದೇ ರೀತಿಯಲ್ಲಿ ಮಾಡಲಾದ ಸುಳ್ಳು ಹೇಳಿಕೆಯಿಂದ ಮಧ್ಯಂತರ ಅರ್ಜಿದಾರರಿಗೆ ಅನ್ಯಾಯವಾಗಿದ್ದರೆ, ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅವರಿಗೆ ಸದಾ ಮುಕ್ತ ಅವಕಾಶವಿರುತ್ತದೆ. ಅರ್ಜಿಯಲ್ಲಿ ಅವರ ವಿರುದ್ಧ ಮಾಡಲಾದ ಆರೋಪಗಳ ಕುರಿತು ಈ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಅರ್ಜಿಯಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದ ಚಿನ್ನಯ್ಯ:
ಪ್ರಕರಣದಲ್ಲಿ ನನ್ನನ್ನು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ, ಸುಮಾರು 200 ಕೋಟಿ ರೂ. ಗಳ ಷಡ್ಯಂತ್ರವಾಗಿದೆ ಎಂದು ಅರ್ಜಿಯಲ್ಲಿ ಗಂಭೀರ ಆರೋಪ ಮಾಡಿದ್ದ ಚಿನ್ನಯ್ಯ, ಷಡ್ಯಂತ್ರದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಎಂ.ಡಿ. ಸಮೀರ್, ಅಜಯ್, ದಿನೇಶ್ ಸೇರಿದಂತೆ ಹಲವರ ಪಾತ್ರದ ಬಗ್ಗೆ ಉಲ್ಲೇಖಿಸಿದ್ದಾರೆ. ಇದಲ್ಲದೆ, ಬಹುಭಾಷಾ ನಟ ಪ್ರಕಾಶ್ ರಾಜ್ ಹೆಸರನ್ನೂ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದ.
ಧರ್ಮಸ್ಥಳದಲ್ಲಿ ಈ ಹಿಂದೆ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ನನ್ನನ್ನು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠ್ಠಲ್ ಗೌಡ, ಜಯಂತ್ ಹಾಗೂ ಮತ್ತಿತರರು ಸಂಪರ್ಕಿಸಿ, ಧರ್ಮಸ್ಥಳದಲ್ಲಿ ಸಾವಿರಾರು ಹೆಣಗಳನ್ನು ಹೂಳಲಾಗಿದೆ ಎಂದು ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಲಾಗಿತ್ತು. ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯಿಂದ ನನ್ನನ್ನು ಜಯಂತ್ ಎಂಬಾತನ ಮನೆಗೆ ಕರೆದೊಯ್ದು, ಅಲ್ಲಿ ಅಯ್ಯಪ್ಪ ಸ್ವಾಮಿ ಟವಲ್ ಮೇಲೆ ಮಾನವನ ತಲೆಬುರುಡೆ, ಮಣ್ಣು ಮತ್ತು ಅರ್ಧ ಬಾಟಲಿ ನೀರನ್ನು ಇಟ್ಟು, ತಲೆಬುರುಡೆಯನ್ನು ಕೈಯಲ್ಲಿ ಹಿಡಿಯುವಂತೆ ಹೆದರಿಸಲಾಗಿತ್ತು. ತಲೆ ಬುರುಡೆ ಮುಟ್ಟುವ ರೀತಿಯಲ್ಲಿ ಫೋಟೋಗಳನ್ನು ತೆಗೆಯಲಾಗಿತ್ತು. ನಂತರ ವಕೀಲರಾದ ಕೆ.ವಿ. ಧನಂಜಯ್ ಅವರ ಕಚೇರಿಗೆ ಕರೆದೊಯ್ಯಲಾಗಿತ್ತು ಎಂದು ಚಿನ್ನಯ್ಯ ಅರ್ಜಿಯಲ್ಲಿ ವಿವರಿಸಿದ್ದ.
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ನನ್ನನ್ನು ಕೂಡಿಹಾಕಲಾಗಿತ್ತು. ರಾತ್ರಿ ವೇಳೆ ಗಿರೀಶ್ ಮಟ್ಟಣ್ಣವರ್ ಹಾಸಿಗೆ ಮೇಲೆ ಮಲಗುತ್ತಿದ್ದರೆ, ನನ್ನನ್ನು ನೆಲದ ಮೇಲೆ ಮಲಗಿಸಿ ಅವರ ಕೈಕಾಲು ಹಾಗೂ ತಲೆ ಮಸಾಜ್ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು. ತಪ್ಪಿಸಿಕೊಂಡು ಹೋಗದಂತೆ ಪ್ರದೀಪ್ ಎಂಬಾತ ಕಾವಲು ಕಾಯುತ್ತಿದ್ದ. ‘ಕುಡ್ಲ ರ‌್ಯಾಂಪೇಜ್’ ಯೂಟ್ಯೂಬ್ ಚಾನೆಲ್‌ನ ಅಜಯ್ ಹಾಗೂ ಮತ್ತೊಬ್ಬ ಯೂಟ್ಯೂಬರ್ ಎಂ.ಡಿ. ಸಮೀರ್ ಎಂಬುವವರು ನನ್ನಿಂದ ಬಲವಂತವಾಗಿ 30-35 ವಿಡಿಯೊ ಹೇಳಿಕೆಗಳನ್ನು ರೆಕಾರ್ಡ್ ಮಾಡಿಸಿದ್ದರು ಎಂದು ಚಿನ್ನಯ್ಯನ ಅರ್ಜಿಯಲ್ಲಿ ವಿವರಿಸಿದ್ದ.
ಕೇರಳ, ಚಿತ್ರದುರ್ಗದಿಂದ ಫಂಡಿಂಗ್ ಆರೋಪ:
ಪ್ರಕರಣದ ಸಂಬಂಧ ಇಷ್ಟು ದೊಡ್ಡ ಮಟ್ಟದ ಕಾನೂನು ಹೋರಾಟ ಮತ್ತು ತನಿಖೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ನಾನು ಮಹೇಶ್ ಶೆಟ್ಟಿ ಹಾಗೂ ಗಿರೀಶ್ ಅವರನ್ನು ಕೇಳಿದಾಗ ಮೊದಲು ಅದರ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದ್ದರು. ಆದರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಸಾಕ್ಷ್ಯ ನುಡಿಯಲು ಒಪ್ಪಿದಾಗ, ಕೇರಳದಿಂದ ಹಣ ಬರುತ್ತಿದೆ ಹಾಗೂ ಚಿತ್ರದುರ್ಗದ ರಮಾ ನಾಗರಾಜ್ ಎಂಬುವವರು ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರಲು ನಿಯಮಿತವಾಗಿ ಫಂಡಿಂಗ್ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ವಿವರಿಸಿದ್ದ.
ಅಲ್ಲದೆ, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣವರ್ ಬಂಗಲೆಗುಡ್ಡದ ಸ್ಥಳ ಗುರುತಿಸಿ ಅಲ್ಲಿ ಉತ್ಖನನ ನಡೆಸಿ ಸರ್ಕಾರದ ಹಣ ವ್ಯಯ ಮಾಡಿಸುವಂತೆ ಸೂಚಿಸಿದರು. ಯೋಜನೆಯ ಬಜೆಟ್ 200 ಕೋಟಿ ಇದ್ದು, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ 50 ಲಕ್ಷ ರೂ. ನೀಡುವುದಾಗಿ ಆಮಿಷ ಒಡ್ಡಲಾಗಿತ್ತು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಎಂ.ಡಿ. ಸಮೀರ್, ಅಜಯ್, ದಿನೇಶ್ ಅವರು ಹೇಳಿದ ಜಾಗಗಳನ್ನು ಎಸ್‌ಐಟಿಗೆ ತೋರಿಸುವಂತೆ ಸೂಚಿಸಿದ್ದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ಆರೋಪಿಸಿದ್ದ.
ನಟ ಪ್ರಕಾಶ್ ರಾಜ್ ಹೆಸರೂ ಉಲ್ಲೇಖ:
ಕೇರಳದ ರೆಸಾರ್ಟ್ ಒಂದರಲ್ಲಿ ತಂಗಿದ್ದಾಗ, ಗಿರೀಶ್ ಮಟ್ಟಣ್ಣವರ್ ಅವರು ಖ್ಯಾತ ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ನನಗೆ ಮೊಬೈಲ್ ನೀಡಿದ್ದರು. ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ, ಗಿರೀಶ್ ಹೇಳಿಕೊಟ್ಟಂತೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡು, 29ರಂದು ಬಂದು ನಾನು ನಿನ್ನನ್ನು ಆಲಂಗಿಸುತ್ತೇನೆ ಎಂದು ಧೈರ್ಯ ತುಂಬಿದ್ದರು ಎಂದು ರಿಟ್ ಅರ್ಜಿಯಲ್ಲಿ ಚಿನ್ನಯ್ಯ ವಿವರಿಸಿದ್ದ.
Related Articles
Thank you for your comment. It is awaiting moderation.


Comments (0)