ಕೆಪಿಎಸ್ಸಿ ಅಧ್ಯಕ್ಷರ ಅಮಾನತು; ಸಚಿವ ಸಂಪುಟದ ಸಲಹೆ, ಶಿಫಾರಸಿನ ಅವಶ್ಯಕತೆ ಕುರಿತು ವಾದ ಮಂಡಿಸಲಿರುವ ಸರ್ಕಾರ
- by Jagan Ramesh
- July 20, 2026
- 9 Views
ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಅಮಾನತುಪಡಿಸುವ ಮುನ್ನ ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸು ಮತ್ತು ಸಲಹೆಯನ್ನು ಆಧರಿಸುವ ಅಗತ್ಯವಿತ್ತೇ, ಒಂದು ವೇಳೆ ಶಿಫಾರಸು ಮತ್ತು ಸಲಹೆಯ ಅಗತ್ಯವಿದ್ದರೆ ಅದು ಘಟನಾಪೂರ್ವ (ಪ್ರಿಕರ್ಸರ್) ಅಥವಾ ಘಟನೋತ್ತರವಾಗಿರಬೇಕೆ ಎಂಬ ಬಗ್ಗೆ ಮಂಗಳವಾರ ವಾದ ಮಂಡಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ ತಿಳಿಸಿದೆ.
ಅಧಿಕಾರ ದುರುಪಯೋಗ ಹಾಗೂ ಸ್ವಜನ ಪಕ್ಷಪಾತದ ಆರೋಪದಲ್ಲಿ ಕೆಪಿಎಸ್ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ (ಎಜಿ) ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಸಚಿವ ಸಂಪುಟದ ಶಿಫಾರಸು ಮತ್ತು ಸಲಹೆ ಇಲ್ಲದೆಯೇ ರಾಜ್ಯಪಾಲರು ಅಮಾನತು ಆದೇಶ ಹೊರಡಿಸಿದ್ದಾರೆ ಎನ್ನುವುದು ಅರ್ಜಿದಾರರ ವಾದವಾಗಿದೆ. ಸದ್ಯ ರಾಜ್ಯಪಾಲರು ತೆಗೆದುಕೊಂಡ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿದಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಆಗ ನ್ಯಾಯಪೀಠ, ರಾಜ್ಯಪಾಲರ ನಿರ್ಧಾರವನ್ನು ಸಂಪುಟದಲ್ಲಿ ದೃಢೀಕರಿಸಲಾಗಿದೆ. ಆದರೆ, ಅದು ಸಚಿವ ಸಂಪುಟದ ಶಿಫಾರಸು ಮತ್ತು ಸಲಹೆ ಎನ್ನಲಾಗದು. ರಾಜ್ಯಪಾಲರ ಕ್ರಮವನ್ನು ನೀವು (ಸರ್ಕಾರ) ಅನುಮೋದಿಸುತ್ತಿಲ್ಲ, ಆ ರೀತಿ ಬಿಂಬಿಸಬೇಡಿ. ರಾಜ್ಯಪಾಲರು ಸರ್ಕಾರದ ಸಲಹೆ ಹಾಗೂ ಶಿಫಾರಸುಗಳ ಅಡಿಯಲ್ಲಿ ಸ್ವತಂತ್ರ ಕ್ರಮ ಕೈಗೊಳ್ಳುತ್ತಾರೆ. ಅವರು ಸರ್ಕಾರದ ಶಿಫಾರಸು ಮತ್ತು ಸಲಹೆಯನ್ನು ತಿರಸ್ಕರಿಸಬಹುದು ಅಥವಾ ಅಂಗೀಕರಿಸಬಹುದು. ಆದರೆ, ವಿಭಾಗೀಯ ಪೀಠದ ತೀರ್ಪಿನ ಅನುಸಾರ ಸಚಿವ ಸಂಪುಟದ ಶಿಫಾರಸು ಮತ್ತು ಸಲಹೆ ಮುಂಚಿತವಾಗಿಯೇ ಇರಬೇಕಾಗುತ್ತದೆ ಎಂದು ಹೇಳಿತು.
ಅಡ್ವೊಕೇಟ್ ಜನರಲ್ ಅವರು, ಈ ಕುರಿತು ಮಂಗಳವಾರ ವಾದ ಮಂಡಿಸುವುದಾಗಿ ತಿಳಿಸಿದರು. ಆಗ ನ್ಯಾಯಪೀಠ, ಇದನ್ನು ನಾಳೆಯೇ ಮುಗಿಸುವುದು ಉತ್ತಮ, ಸುಮ್ಮನೆ ಪ್ರಕರಣವನ್ನು ಮುಂದೂಡಲಾಗುತ್ತಿದೆ ಎಂದು ಹೇಳಿತು.
ಎಜಿ ಪ್ರತಿಕ್ರಿಯಿಸಿ, ವಾಸ್ತವವಾಗಿ ಅರ್ಜಿಯ ಕಳೆದ ವಿಚಾರಣಾ ದಿನಾಂಕದಂದು ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಸೇರಿಸಲಾಗಿದೆ. ಇಡೀ ಪ್ರಕರಣವೇ ಸಚಿವ ಸಂಪುಟದ ಸಲಹೆ ಹಾಗೂ ಶಿಫಾರಸಿನ ಮೇಲಿದೆ ಎಂದಾದರೆ ಅರ್ಜಿದಾರರು ಮೊದಲು ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಬೇಕಿತ್ತು ಎಂದರು.
ಅದಕ್ಕೆ ನ್ಯಾಯಪೀಠ, ಪ್ರಕರಣದಲ್ಲಿ ವಾದ ಆರಂಭಿಸಿದ ನಂತರವಷ್ಟೇ ಅವರಿಗೂ ಶಿಫಾರಸು ಮತ್ತು ಸಲಹೆಯ ಬಗ್ಗೆ ಅರಿವಾಗಿದೆ ಎಂದು ಲಘುಧಾಟಿಯಲ್ಲಿ ಹೇಳಿತಲ್ಲದೆ, ಸರ್ಕಾರಕ್ಕೆ ನಾಳೆ ಸಮಯ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚು ಕಾಲಾವಕಾಶ ನೀಡಲಾಗದು. ಪ್ರಕರಣದಲ್ಲಿ ಸಚಿವ ಸಂಪುಟದ ಶಿಫಾರಸು ಮತ್ತು ಸಲಹೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದಷ್ಟೇ ಇಲ್ಲಿರುವ ವಿಚಾರವಾಗಿದೆ ಎಂದು ಹೇಳಿತು.
ಇದಕ್ಕೆ ಸಮ್ಮತಿಸಿದ ಶಶಿಕಿರಣ್ ಶೆಟ್ಟಿ, ಸಚಿವ ಸಂಪುಟದ ಶಿಫಾರಸು ಮತ್ತು ಸಲಹೆ ಅಗತ್ಯವಿದೆಯೇ, ಒಂದು ವೇಳೆ ಅಗತ್ಯವಿದ್ದರೆ, ಅದು ಘಟನಾಪೂರ್ವವಾಗಿರಬೇಕೇ (Precursor) ಅಥವಾ ಘಟನೋತ್ತರವಾಗಿರಬೇಕೇ ಎಂಬ ವಿಷಯದ ಮೇಲೆ ಮಂಗಳವಾರ ವಾದ ಮಂಡಿಸುವುದಾಗಿ ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಂಗಳವಾರಕ್ಕೆ (ಜುಲೈ 21) ಮುಂದೂಡಿತು. ಇದೇ ವೇಳೆ, ಅರ್ಜಿಗೆ ಕೆಪಿಎಸ್ಸಿ ಸಲ್ಲಿಸಿದ್ದ ಆಕ್ಷೇಪಣೆಗಳನ್ನು ನ್ಯಾಯಪೀಠ ದಾಖಲೆಗೆ ತೆಗೆದುಕೊಂಡಿತು.
Related Articles
Thank you for your comment. It is awaiting moderation.


Comments (0)