ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಸ್ವಾಧೀನ ಅಧಿಸೂಚನೆ ಪ್ರಶ್ನಿಸಿದ್ದ ಪಿಐಎಲ್ ವಜಾ

ಬೆಂಗಳೂರು: ಬಿಡದಿ ಟೌನ್​ಶಿಪ್ ಅಭಿವೃದ್ಧಿ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಗಾಗಿ ಅಂದಾಜು 516 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಂಪ್ಲಾಪುರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಕೆ.ಬಿ. ರಾಜೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿದಾರರು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ-1987 ಸೆಕ್ಷನ್ 17ರ ಅಡಿಯಲ್ಲಿ ಭೂ ಸ್ವಾಧೀನಕ್ಕೆ ಸರ್ಕಾರ ಹೊರಡಿಸಿತುವ ಅಧಿಸೂಚನೆಯನ್ನು ಪ್ರಶ್ನಿಸಿದ್ದಾರೆ. ಅರ್ಜಿ ವಿಚಾರಣೆ ವೇಳೆ, ಅಭಿವೃದ್ಧಿ ಯೋಜನೆಯಡಿ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಕೇಂದ್ರ ಸರ್ಕಾರದ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯ್ದೆ-2013ರ‌ ನೀಡಬೇಕಾದ ಪ್ರಮಾಣದಲ್ಲಿ ರೈತರಿಗೆ ಪರಿಹಾರ ನಿಗದಿಪಡಿಸಿಲ್ಲ ಅಂಶವನ್ನಷ್ಟೇ ಆಧರಿಸಿ ವಾದ ಮಂಡಿಸಿದ್ದಾರೆ. ಆದರೆ, ಭೂಸ್ವಾಧೀನ ಅಧೀಸೂಚನೆಯು ಯಾವ ಕಾಯ್ದೆ ಹಾಗೂ ಕಾನೂನು ಉಲ್ಲಂಘಿಸುತ್ತದೆ ಎಂದು ತಿಳಿಸಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

ಇದೇ ವೇಳೆ, ಅಧಿಸೂಚನೆಯ ಮೆರಿಟ್ (ವಿಚಾರಣಾ ಅರ್ಹತೆ) ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಅಧಿಸೂಚನೆಗೆ ಸಂಬಂಧಿಸಿದ ವಿಷಯಗಳನ್ನು ತಡೆಹಿಡಿದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರು ವಾದ ಮಂಡಿಸಿ, ಅಭಿವೃದ್ದಿ ಯೋಜನೆಗಾಗಿ 4,900ಕ್ಕೂ ಅಧಿಕ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಭೂ ಸ್ವಾಧೀನಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದು, ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಣಾಮ‌ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ‌ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಮುಂದುವರಿದು, ಭೂ ಸ್ವಾಧೀನ ಅಧಿಸೂಚನೆ ಹೊರಡಿಸುವ ಮುನ್ನ ಸಾಮಾಜಿಕ ಮತ್ತು ಪರಿಸರ ಪರಿಣಾಮ ಅಧ್ಯಯನ ನಡೆಸಿಲ್ಲ. ಈ ಯೋಜನೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ. ರಿಯಲ್ ಎಸ್ಟೇಟ್ ಯೋಜನೆ ಇದಾಗಿದೆ. ಪರಿಹಾರ ‌ಪ್ರಮಾಣವು ಕೇಂದ್ರ ಸರ್ಕಾರದ ಯೋಜನೆಗೆ ಅನುಗುಣವಾಗಿಲ್ಲ. ಪುನರ್ವಸತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ‌ ಎಂದು ಆಕ್ಷೇಪಿಸಿದರು.

ಅರ್ಜಿದಾರರ ಮನವಿ:
ಬಿಡದಿ ತಾಲೂಕಿನ ಕೆಂಪಯ್ಯನ ಪಾಳ್ಯದ 384.22, ಮಂಡಲಹಳ್ಳಿಯ 71.13 ಮತ್ತು ವಡೇರಹಳ್ಳಿಯ 63.10 ಎಕರೆ ಸೇರಿದಂತೆ ಒಟ್ಟು 519 ಎಕರೆ ಕೃಷಿ ಜಮೀನಿನ ಭೂಸ್ವಾಧೀನಕ್ಕೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಭೂಸ್ವಾಧೀನ ಕಾಯ್ದೆಯ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ‌ಮಾಡದೆ ಜಮೀನು ಸ್ವಾಧೀನಕ್ಕೆ‌ ರಾಜ್ಯ ಸರ್ಕಾರ ಮುಂದಾಗಿದೆ. ಆದ್ದರಿಂದ, ಬಿಡದಿಯ ಭೂ ಸ್ವಾಧೀನಪಡಿಸಿಕೊಳ್ಳುವ ಸಂಬಂಧ 2026ರ ಜೂನ್ 13ರಂದು ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಕೃಷಿ ಭೂಮಿಯನ್ನು ನಾಶಪಡಿಸುವ ಬದಲು, ಉತ್ತರ ಕರ್ನಾಟಕದ ಬರಪೀಡಿತ ಅಥವಾ ಕೈಗಾರಿಕಾ ಭೂ ಬ್ಯಾಂಕ್ ‌ಗಳಿರುವ ಹಿಂದುಳಿದ ಪ್ರದೇಶಗಳಿಗೆ ಈ ಯೋಜನೆಯನ್ನು ವಿಕೇಂದ್ರೀಕರಿಸಲು ತಜ್ಞರ ಸಮಿತಿ ರಚಿಸಬೇಕು. ಅಲ್ಲಿಯವರೆಗೆ ಈ ಯೋಜನೆಗೆ ಸಂಬಂಧಿಸಿದ ಎಲ್ಲ ಭೂಸ್ವಾಧೀನ ಮತ್ತು ಟೆಂಡರ್ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಪಿಐಎಲ್‌ನಲ್ಲಿ ಮನವಿ ಮಾಡಲಾಗಿತ್ತು.

Related Articles

Comments (0)

Leave a Comment