ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ; ಪ್ರಕರಣದಿಂದ ದಿನೇಶ್ ಗುಂಡೂರಾವ್ ಕೈಬಿಟ್ಟ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ
- by LegalSamachar
- July 17, 2026
- 24 Views
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಅದರ ಸದಸ್ಯರ ಬಗ್ಗೆ ಮಾನಹಾನಿಕಾರಕ ಹೇಳಿಕೆ ನೀಡಿದ ಆರೋಪದಲ್ಲಿ ದಾಖಲಿಸಲಾಗಿದ್ದ ಖಾಸಗಿ ದೂರಿನಿಂದ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕೈಬಿಟ್ಟಿರುವ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಆರ್‌ಎಸ್ಎಸ್ ಬೆಂಬಲಿಗ ಬೆಂಗಳೂರಿನ ಜಯನಗರದ ನಿವಾಸಿ ಎ. ತೇಜಸ್ ಎಂಬುವರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಯಾದ ಮಾಜಿ ಸಚಿವ ಹಾಗೂ ಗಾಂಧಿನಗರ ವಿಧಾನಸಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿತು. ಅರ್ಜಿದಾರ ತೇಜಸ್ ಪರ ವಕೀಲ ವೆಂಕಟೇಶ್ ಪಿ. ದಳವಾಯಿ ಹಾಜರಿದ್ದರು.
ಪ್ರಕರಣವೇನು?
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದಿನೇಶ್ ಗುಂಡೂರಾವ್ ಇನ್ನಿತರರು ಸಾಮಾಜಿಕ ಮಾಧ್ಯಮಗಳು, ಸಾರ್ವಜನಿಕ ಹೇಳಿಕೆಗಳು ಹಾಗೂ ಸಂದರ್ಶನಗಳಲ್ಲಿ ಆರ್‌ಎಸ್ಎಸ್ ಹಾಗೂ ಅದರ ಸದಸ್ಯರ ಕುರಿತು ಮಾನಹಾನಿಕಾರಕ ಆರೋಪಗಳನ್ನು ಮಾಡಿದ್ದರು. ಅದಕ್ಕೆ ತೇಜಸ್ ಅವರು ಮೂವರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ದೂರುದಾರರ ಹೇಳಿಕೆ ದಾಖಲಿಸಿಕೊಂಡಿದ್ದ ವಿಚಾರಣಾ ನ್ಯಾಯಾಲಯ, ಮೂವರು ಆರೋಪಿತರಿಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಇಬ್ಬರ ವಿರುದ್ಧದ ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ವಿಚಾರಣಾ ನ್ಯಾಯಾಲಯ, ದಿನೇಶ್ ಗುಂಡೂರಾವ್ ವಿರುದ್ಧದ ವಿಚಾರಣಾ ಪ್ರಕ್ರಿಯೆಯನ್ನು ಕೈಬಿಟ್ಟು 2026ರ ಜೂನ್ 26ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ತೇಜಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.


Comments (0)