ಮಗಳ ಅಕ್ರಮ ನೇಮಕಾತಿಗೆ ಸಹಕರಿಸಿದ ಆರೋಪ; ಶಿವಶಂಕರಪ್ಪ ಸಾಹುಕಾರ್ ಹುದ್ದೆ ತ್ಯಜಿಸುವ ನಿರ್ಣಯಕ್ಕೆ ಸೀಮಿತ ತಡೆಯಾಜ್ಞೆ
- by LegalSamachar
- July 14, 2026
- 9 Views
ಬೆಂಗಳೂರು: ಪುತ್ರಿಯ ಅಕ್ರಮ ನೇಮಕಾತಿಗೆ ಸಹಕರಿಸುವ ಮೂಲಕ ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಎಸಗಿದ ಆರೋಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (ಸದ್ಯ ಅಮಾನತಿನಲ್ಲಿರುವ) ತಕ್ಷಣ ರಾಜೀನಾಮೆ ಕೊಟ್ಟು, ಹುದ್ದೆ ತ್ಯಜಿಸಬೇಕು ಎಂದು ಆಯೋಗದ ಸಭೆಯಲ್ಲಿ ಕೈಗೊಳ್ಳಲಾಗಿದ್ದ ಹೆಚ್ಚುವರಿ ನಿರ್ಣಯಕ್ಕೆ ಸೀಮಿತವಾಗಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿದೆ.
ಈ ವಿಚಾರವಾಗಿ 2026ರ ಜೂನ್ 19ರಂದು ಆಯೋಗದ ಸಭೆಯಲ್ಲಿ ಕೈಗೊಂಡ ನಿರ್ಣಯ ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಕೆಪಿಎಸ್‌ಸಿ ಸಭೆಯಲ್ಲಿ ಜೂನ್ 19ರ ಕೆಪಿಎಸ್‌ಸಿ ಸಭೆಯಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯದ ಜಾರಿಗೆ ಜುಲೈ 10ರಂದು ಈ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈ ನಿರ್ಣಯವು ವಾಸ್ತವವಾಗಿ 13 ಕಾರ್ಯಸೂಚಿ (ಅಜೆಂಡಾ) ಅಂಶಗಳನ್ನು ಒಳಗೊಂಡಿದ್ದು, ಹೆಚ್ಚುವರಿ ಕಾರ್ಯಸೂಚಿಯು ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸುವ ನಿರ್ಣಯಕ್ಕೆ ಸಂಬಂಧಿಸಿದ್ದಾಗಿದೆ. ನಿರ್ಣಯದ 1ರಿಂದ 13ರವರೆಗಿನ ಅಜೆಂಡಾಗಳಿಗೆ ಸಂಬಂಧಿಸಿದಂತೆ, ಅರ್ಜಿದಾರರೇ ಸಭೆಯಿಂದ ಸ್ವತಃ ಹಿಂದೆ ಸರಿದಿದ್ದು, ಆ ಅಂಶಗಳನ್ನು ಪರಿಗಣಿಸಲು ಸಭೆಯನ್ನು ಮುಂದುವರಿಸಬಹುದು ಎಂದು ನಿರ್ದೇಶಿಸಿದ್ದರು. ಆದ್ದರಿಂದ, ಜೂನ್ 19ರ ನಿರ್ಣಯಕ್ಕೆ ನೀಡಲಾದ ತಡೆಯಾಜ್ಞೆಯು ಕೇವಲ ರಾಜೀನಾಮೆಗೆ ಸಂಬಂಧಿಸಿದ ಹೆಚ್ಚುವರಿ ವಿಷಯಕ್ಕೆ ಸೀಮಿತವಾಗಿ ಮುಂದುವರಿಯಲಿದ್ದು, 1 ರಿಂದ 13 ರವರೆಗಿನ ಅಜೆಂಡಾಗಳಿಗೆ ತಡೆಯಾಜ್ಞೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಇದೇ ವೇಳೆ, ಮುಂದಿನ ಕೆಪಿಎಸ್‌ಸಿ ಸಭೆಯಲ್ಲಿ ಪ್ರತಿವಾದಿಗಳು ಹೆಚ್ಚುವರಿ ಕಾರ್ಯಸೂಚಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಕಾಯ್ದೆ-1959ರ ಸೆಕ್ಷನ್ 7ರ ಅನುಸಾರ ಸಭೆಯ ಮುಂದೆ ಮಂಡಿಸಬಹುದಾಗಿದೆ. ಅದಾಗ್ಯೂ, ಅಧ್ಯಕ್ಷರ ರಾಜೀನಾಮೆಗೆ ಸಂಬಂಧಿಸಿದ ಹೆಚ್ಚುವರಿ ಅಜೆಂಡಾ ಕುರಿತು ಈ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)