ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ಜಿಎಸ್ಟಿ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಲಿಡ್ಕರ್
- by LegalSamachar
- July 8, 2026
- 4 Views
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ಬಡ್ಡಿ ಹಾಗೂ ದಂಡವೂ ಸೇರಿ ಒಟ್ಟು 5.02 ಕೋಟಿ ರೂ. ಪಾವತಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರಿ ಸ್ವಾಮ್ಯದ ‘ಲಿಡ್ಕರ್’ (ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ) ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.
ವಾಣಿಜ್ಯ ತೆರಿಗೆ ಇಲಾಖೆ ಹೊರಡಿಸಿರುವ ಆದೇಶ ಹಾಗೂ ಬ್ಯಾಂಕ್ ಖಾತೆಯಿಂದ ಜಪ್ತಿ ಮೂಲಕ ಹಣ ವಸೂಲಿ ಮಾಡಲು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಲಿಡ್ಕರ್ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ರಾಜ್ಯ ಆರ್ಥಿಕ ಇಲಾಖೆ (ವಾಣಿಜ್ಯ ತೆರಿಗೆ), ವಾಣಿಜ್ಯ ತೆರಿಗೆಯ ಸಹಾಯಕ ಆಯುಕ್ತರು (ಆಡಿಟ್) 1-2 ಹಾಗೂ (ಆಡಿಟ್) 3-9 ಮತ್ತು ಬ್ಯಾಂಕ್ ಬರೋಡಾ ವಸಂತನಗರ ಶಾಖೆಯ ಮ್ಯಾನೇಜರ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿಯು ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಾಗಿದೆ.
ಅರ್ಜಿಯಲ್ಲೇನಿದೆ?
ಪರಿಶಿಷ್ಟ ಜಾತಿಯ ಚರ್ಮ ಕುಶಲ ಕರ್ಮಿಗಳ ಕಲ್ಯಾಣ ಹಾಗೂ ಚರ್ಮ ಕೈಗಾರಿಕೆಯ ಅಭಿವೃದ್ಧಿಗಾಗಿ 1976ರಲ್ಲಿ ಸ್ಥಾಪನೆಯಾದ ಲಿಡ್ಕರ್ ಸಂಸ್ಥೆಯ 2021-22ನೇ ಹಣಕಾಸು ವರ್ಷದ ದಾಖಲೆಗಳ ಲೆಕ್ಕ ಪರಿಶೋಧನೆ ನಡೆಸಿದ್ದ ವಾಣಿಜ್ಯ ತೆರಿಗೆ ಇಲಾಖೆ 2025ರ ಡಿಸೆಂಬರ್ 18ರಂದು ಅಂತಿಮ ಆದೇಶ ಹೊರಡಿಸಿತ್ತು. ಇದರಲ್ಲಿ ಕೋಟ್ಯಂತರ ರೂ. ತೆರಿಗೆ ಬಾಕಿ ಪಾವತಿಸುವಂತೆ ಸೂಚಿಸಲಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಆದರೆ, ಈ ಪ್ರಕ್ರಿಯೆಯ ಯಾವುದೇ ನೋಟಿಸ್ಗಳು ಲಿಡ್ಕರ್ ಅಧಿಕಾರಿಗಳ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ, ನಿಗಮವು ವಿಚಾರಣೆಯಲ್ಲಿ ಭಾಗವಹಿಸಿರಲಿಲ್ಲ. ಇದರಿಂದ, ಇಲಾಖೆಯು ಏಕಪಕ್ಷೀಯವಾಗಿ ಆದೇಶ ಹೊರಡಿಸಿತ್ತಲ್ಲದೆ, 2,86,69,214 ರೂ. ಮೂಲ ತೆರಿಗೆಯ ಜತೆಗೆ 1,87,13,122 ಬಡ್ಡಿ ಹಾಗೂ 28,86,892 ದಂಡ ಸೇರಿ ಒಟ್ಟು 5,02,69,228 ರೂ. ಗಳನ್ನು ಪಾವತಿಸಬೇಕು ಎಂದು ಸೂಚನೆ ನೀಡಿತ್ತು. 2026ರ ಏಪ್ರಿಲ್ 21ರಂದು ಲಿಡ್ಕರ್ ಖಾತೆ ಹೊಂದಿರುವ ವಸಂತನಗರದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಖಾತೆಯಿಂದ ನೇರವಾಗಿ ಹಣ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿತ್ತು. ಏಪ್ರಿಲ್ 24ರಂದು ಬ್ಯಾಂಕ್ ವ್ಯವಸ್ಥಾಪಕರು ಈ ಬಗ್ಗೆ ಮಾಹಿತಿ ನೀಡಿದಾಗಲೇ ನಮಗೆ ಇಡೀ ಜಿಎಸ್ಟಿ ಆಡಿಟ್ ಮತ್ತು ದಂಡದ ಪ್ರಕ್ರಿಯೆಯ ಗೊತ್ತಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಲಿಡ್ಕರ್ ಸಂಪೂರ್ಣವಾಗಿ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಸಂಸ್ಥೆಯಾಗಿದ್ದು, ತೆರಿಗೆ ವಂಚಿಸುವ ಯಾವುದೇ ಉದ್ದೇಶ ಹೊಂದಿಲ್ಲ. ಜಿಎಸ್ಟಿ ಪೋರ್ಟಲ್ನಲ್ಲಿ ನೋಟಿಸ್ಗಳನ್ನು ಅಪ್ಲೋಡ್ ಮಾಡಲಾಗಿದ್ದರೂ, ಅವು ಅಧಿಕಾರಿಗಳ ಗಮನಕ್ಕೆ ಬಾರದೇ ಹೋಗಿದ್ದರಿಂದ ನಿಗಮಕ್ಕೆ ತನ್ನ ವಾದ ಮಂಡಿಸಲು ಸೂಕ್ತ ಅವಕಾಶ ಸಿಕ್ಕಿಲ್ಲ ಎಂದು ಲಿಡ್ಕರ್ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಇಲಾಖೆಯು ಉಲ್ಲೇಖಿಸಿರುವ ‘ಇತರ ಆದಾಯ’ ವಹಿವಾಟು ವ್ಯತ್ಯಾಸ ಹಾಗೂ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಿಚಾರಗಳು ವಿವರವಾದ ದಾಖಲೆಗಳ ಮರುಪರಿಶೀಲನೆಗೆ ಒಳಪಡಬೇಕಾಗಿವೆ. ಈ ಸಂಬಂಧ ಮೇಲ್ಮನವಿ ಸಲ್ಲಿಸುವ ನಿಗದಿತ ಅವಧಿ ಮುಗಿದು ಹೋಗಿರುವುದರಿಂದ ಬೇರೆ ದಾರಿಯಿಲ್ಲದೆ ಅರ್ಜಿ ಸಲ್ಲಿಸಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆ ಹೊರಡಿಸಿರುವ 5.02 ಕೋಟಿ ರೂ. ತೆರಿಗೆ ಆದೇಶ ಹಾಗೂ ಬ್ಯಾಂಕ್ ಖಾತೆ ಮುಟ್ಟುಗೋಲು ನೋಟಿಸ್ಗೆ ತಕ್ಷಣವೇ ತಡೆ ನೀಡಬೇಕು. ಜತೆಗೆ, ನಿಗಮದ ಕಲ್ಯಾಣ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ತಡೆಯಲು, ದಾಖಲೆಗಳನ್ನು ಒದಗಿಸಲು ಮತ್ತೊಮ್ಮೆ ನ್ಯಾಯೋಚಿತ ಅವಕಾಶ ನೀಡಿ, ಹೊಸದಾಗಿ ಮರುವಿಚಾರಣೆ ನಡೆಸಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Related Articles
Thank you for your comment. It is awaiting moderation.


Comments (0)