ಜಿಬಿಎ ವಾರ್ಡ್‌ಗಳಿಗೆ ಪರ್ಯಾಯ ಎಸ್‌ಐಆರ್ ಆಕ್ಷೇಪಿಸಿದ ಅರ್ಜಿ; ರಾಜ್ಯ, ಕೇಂದ್ರ ಚುನಾವಣಾ ಆಯೋಗಗಳಿಗೆ ಹೈಕೋರ್ಟ್ ನೋಟಿಸ್
- by Jagan Ramesh
- July 8, 2026
- 113 Views
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೆಲ ವಾರ್ಡ್‌ಗಳಿಗೆ ಪರ್ಯಾಯ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಕ್ಷರಣೆಗೆ (ಎಸ್‌ಐಆರ್) ಮುಂದಾಗಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ರಿಟ್ ಅರ್ಜಿ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ದೇಶದಾದ್ಯಂತ ಕೇಂದ್ರ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಎಸ್ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ, ಬೆಂಗಳೂರಿನ ಕೆಲ ವಾರ್ಡ್‌ಗಳಿಗೆ ಪ್ರತ್ಯೇಕ ಹಾಗೂ ಸಮಾನಾಂತರ ಎಸ್ಐಆರ್ ನಡೆಸಲು ರಾಜ್ಯ ಚುನಾವಣಾ ಆಯೋಗ ಜೂನ್ 19ರಂದು ಹೊರಡಿಸಿರುವ ಆದೇಶ ರದ್ದು ಕೋರಿ ಬೆಂಗಳೂರಿನ ವಿವೇಕ್ ಸೇರಿ 5 ಮಂದಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಗೆ ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಎಲ್ಲ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?
ಕೇಂದ್ರ ಸರ್ಕಾರ ಎಸ್‌ಐಆರ್ ನಡೆಸುವುದಾಗಿ 2025ರ ಅಕ್ಟೋಬರ್ 27ರಂದು ಪ್ರಕಟಿಸಿತ್ತು. ಅದರಂತೆ 2026ರ ಜೂನ್ 16ರಂದು ರಾಜ್ಯದಲ್ಲಿ ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಫ್ರೀಜ್ ಮಾಡಿತ್ತು. ಇದಾದ ಮೂರೇ ದಿನಗಳಲ್ಲಿ ಅಂದರೆ ಜೂನ್ 19ರಂದು ರಾಜ್ಯ ಚುನಾವಣಾ ಆಯೋಗ ಸಹ ಜಿಬಿಎಯ ಕೆಲವು ವಾರ್ಡ್‌ಗಳ ಮತಪಟ್ಟಿ ಪರಿಷ್ಕರಣೆ ನಡೆಸಲು ಆದೇಶಿಸಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 26ರಿಂದ ಈಗಾಗಲೇ ಜಿಬಿಎ ಸೇರಿ ರಾಜ್ಯದಾದ್ಯಂತ ಎಸ್ಐಆರ್ ಮನೆ ಮನೆ ಸರ್ವೇ ಆರಂಭವಾಗಿದೆ. ಒಂದೇ ಅವಧಿಯಲ್ಲಿ ಪ್ರತ್ಯೇಕವಾಗಿ ಪರ್ಯಾಯ ಎಸ್‌ಐಆರ್ ನಡೆಸುವುದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿವೆ. ಮೇಲಾಗಿ ಇದು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ರಾಜ್ಯ ಚುನಾವಣಾ ಆಯೋಗ ಜೂನ್ 19ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.


Comments (0)