ರಾಜ್ಯ ಚುನಾವಣಾ ಆಯೋಗದಿಂದ ಗ್ರೇಟರ್ ಬೆಂಗಳೂರಿಗೆ ಪರ್ಯಾಯ ಎಸ್‌ಐಆರ್ ಆಕ್ಷೇಪಿಸಿದ ಅರ್ಜಿ; ಹೈಕೋರ್ಟ್‌ನಲ್ಲಿ ಬುಧವಾರ ವಿಚಾರಣೆ
- by LegalSamachar
- July 7, 2026
- 4 Views
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಹಮ್ಮಿಕೊಂಡಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ, ರಾಜ್ಯ ಚುನಾವಣಾ ಆಯೋಗ ಬೆಂಗಳೂರಿನ ಕೆಲ ವಾರ್ಡ್‌ಗಳಿಗೆ ಪ್ರತ್ಯೇಕ ಹಾಗೂ ಸಮಾನಾಂತರ ಪರಿಷ್ಕರಣೆಗೆ ಆದೇಶಿಸಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಪರ್ಯಾಯ ಎಸ್ಐಆರ್ ನಡೆಸಲು ರಾಜ್ಯ ಚುನಾವಣಾ ಆಯೋಗ ಜೂನ್ 19ರಂದು ಹೊರಡಿಸಿರುವ ಆದೇಶ ರದ್ದುಪಡಿಸಲು ನಗರದ ವಿವೇಕ್ ಹಾಗೂ ಇತರರು ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಮಂಗಳವಾರ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜಿ ಕುರಿತು ಪ್ರಸ್ತಾಪಿಸಿದ ವಕೀಲ ವೆಂಕಟೇಶ್ ದಳವಾಯಿ, ತುರ್ತು ವಿಚಾರಣೆ ನಡೆಸುವಂತೆ ಕೋರಿದರು. ಇದನ್ನು ಆಲಿಸಿದ ನ್ಯಾಯಪೀಠ, ಬುಧವಾರ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಅರ್ಜಿದಾರರ ಆಕ್ಷೇಪವೇನು?
ಕೇಂದ್ರ ಸರ್ಕಾರ ಎಸ್‌ಐಆರ್ ನಡೆಸುವುದಾಗಿ 2025ರ ಅಕ್ಟೋಬರ್ 27ರಂದು ಪ್ರಕಟಿಸಿತ್ತು. ಅದರಂತೆ 2026ರ ಜೂನ್ 16ರಂದು ರಾಜ್ಯದಲ್ಲಿ ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಫ್ರೀಜ್ ಮಾಡಿತ್ತು. ಇದಾದ ಮೂರೇ ದಿನಗಳಲ್ಲಿ ಅಂದರೆ ಜೂನ್ 19ರಂದು ರಾಜ್ಯ ಚುನಾವಣಾ ಆಯೋಗ ಸಹ ಜಿಬಿಎಯ ಕೆಲವು ವಾರ್ಡ್‌ಗಳ ಮತಪಟ್ಟಿ ಪರಿಷ್ಕರಣೆ ನಡೆಸಲು ಆದೇಶಿಸಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 26ರಿಂದ ಈಗಾಗಲೇ ಜಿಬಿಎ ಸೇರಿ ರಾಜ್ಯದಾದ್ಯಂತ ಎಸ್ಐಆರ್ ಮನೆ ಮನೆ ಸರ್ವೇ ಆರಂಭವಾಗಿದೆ. ಒಂದೇ ಅವಧಿಯಲ್ಲಿ ಪ್ರತ್ಯೇಕವಾಗಿ ಪರ್ಯಾಯ ಎಸ್‌ಐಆರ್ ನಡೆಸುವುದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿವೆ. ಮೇಲಾಗಿ ಇದು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ರಾಜ್ಯ ಚುನಾವಣಾ ಆಯೋಗ ಜೂನ್ 19ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.


Comments (0)