ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್‌ ಕಾರ್ಡ್‌; ಪಶ್ಚಿಮ ಬಂಗಾಳದ ವ್ಯಕ್ತಿ ವಿರುದ್ಧದ ಪ್ರಕರಣ‌ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರು: ಬಾಂಗ್ಲಾದೇಶದ ನಿವಾಸಿಗಳಿಗೆ ನಕಲಿ ಆಧಾರ್‌ ಹಾಗೂ ಪ್ಯಾನ್‌ ಕಾರ್ಡ್‌ ಮಾಡಿಕೊಡುತ್ತಿದ್ದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್‌, ಆರೋಪಿಯ ನಡೆಯು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದೆ.

ಬೆಂಗಳೂರಿನ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸಬೇಕು ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳಿಸಲು ಜೈಲು ಅಧಿಕಾರಿಗಳಿಗೆ ‌ನಿರ್ದೇಶಿಸಬೇಕು ಎಂದು ಕೋರಿ ಪಶ್ಚಿಮ ಬಂಗಾಳ ಮೂಲದ (ಸದ್ಯ ಆನೇಕಲ್‌ ತಾಲೂಕಿನ ಅತ್ತಿಬೆಲೆ ನಿವಾಸಿ) ಅರ್ನಬ್‌ ಮಂಡಲ್‌ (27) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಈ ಪ್ರಕರಣಕ್ಕೆ ನಕಲಿ ಆರೋಪ ಅನ್ವಯಿಸುವುದಿಲ್ಲ. ಅರ್ಜಿದಾರ ವಿದೇಶಿಯನಲ್ಲದ ಕಾರಣ ವಿದೇಶಿಯರ ಕಾಯ್ದೆ ಸೆಕ್ಷನ್‌ 14 ಅನ್ವಯಿಸುವುದಿಲ್ಲ. 2024 ಜನವರಿ 22ರಂದು ಅರ್ಜಿದಾರ ಕಸ್ಟಡಿಯಲ್ಲಿದ್ದು, ಶಿಕ್ಷೆಯ ಅರ್ಧ ಭಾಗವನ್ನು ಜೈಲಿನಲ್ಲೇ ಕಳೆದಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅನ್ಯ ದೇಶದ ವ್ಯಕ್ತಿಗಳಿಗೆ ನಕಲಿ ಆಧಾರ್‌ ಕಾರ್ಡ್‌ ಮಾಡಿಕೊಡುವ ಮೂಲಕ ಅರ್ಜಿದಾರರು ಎಲ್ಲವನ್ನೂ ನಾಶಪಡಿಸುತ್ತಿದ್ದಾರೆ. ಭಾರತೀಯರಲ್ಲದಿದ್ದರೂ ನಕಲಿ ಆಧಾರ್‌ ಕಾರ್ಡ್‌ ನೀಡಲಾಗುತ್ತಿದೆ. ಅರ್ಜಿದಾರರು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತೀಕ್ಷ್ಣವಾಗಿ ನುಡಿಯಿತು.

ಮುಂದುವರಿದು, ದೇಶದ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ನಕಲಿ ಆಧಾರ್‌ ಕಾರ್ಡ್‌ ಮಾಡಿಕೊಡುವುದು ವ್ಯಾಪಕವಾಗಿದ್ದು, ಆದರೂ ಯಾವುದೇ ಅಪರಾಧವಾಗಿಲ್ಲ ಎನ್ನುತ್ತಿದ್ದೀರಿ? ಇದು ಸಾಕಾಗುವುದಿಲ್ಲವೇ ಬಂದವರಿಗೆಲ್ಲಾ ನಕಲಿ ಆಧಾರ್‌ ಕಾರ್ಡ್‌ ಮಾಡಿಕೊಟ್ಟಿದ್ದಾರೆ. ಅವರು ಭಾರತೀಯರೇ ಅಲ್ಲ. ಎತ್ತ ಸಾಗುತ್ತಿದ್ದೇವೆ? ಈ ದೇಶದ ಪ್ರಜೆಯಲ್ಲದವರ ಬಳಿಯೂ ಆಧಾರ್‌ ಕಾರ್ಡ್‌ ಇದೆ. ಏಕೆ? ಅರ್ಜಿದಾರರಂಥವರಿಂದ ಇದು ಸಾಧ್ಯವಾಗಿದೆ. ಬೇರೆಲ್ಲ ಹಕ್ಕು ಸಾಧಿಸಲು ಅವರಿಗೆ ಈ ನಕಲಿ ಆಧಾರ್ ಕಾರ್ಡ್ ಅಡಿಪಾಯವಾಗುತ್ತದೆ. ಜನರು ಇದನ್ನು ಮುಂದುವರಿಸಿದರೆ ಸರ್ಕಾರ ಹೇಗೆ ತಾನೆ ಕಣ್ಣಿಡಲು ಸಾಧ್ಯ? ಅರ್ಜಿದಾರರು ಭಾರತೀಯರಲ್ಲವೇ ಎಂದು ಪ್ರಶ್ನಿಸಿತು.

ಅರ್ಜಿದಾರ ಆರೋಪಿ ಜೈಲಿನಲ್ಲಿರುವುದೇ ಸೂಕ್ತವಾಗಿದೆ. ಬೇರೆ ಪರಿಹಾರ ಕೇಳಿದ್ದರೆ ನೋಡಬಹುದಿತ್ತು. ಆದರೆ, ಬಿಡುಗಡೆಗೆ ಆದೇಶಿಸಲಾಗದು. ಸಕ್ಷಮ ನ್ಯಾಯಾಲಯಕ್ಕೆ ವಿಚಾರಣೆ ಪೂರ್ಣಗೊಳಿಸಲು ಆದೇಶಿಸಲಾಗುವುದು. ಇಲ್ಲಿ ಮಧ್ಯಪ್ರವೇಶಿಸುವ ಅಗತ್ಯವೇ ಕಾಣುತ್ತಿಲ್ಲ. ಜಾಮೀನು ಕೋರಿ ಅರ್ಜಿ ಸಲ್ಲಿಸಿ, ಪ್ರಕರಣ ರದ್ದು ಕೋರಿ ಇಲ್ಲಿಗೆ ಬರಬೇಡಿ. ಆದೇಶದಲ್ಲಿ ಏನಾದರೂ ಬರೆದರೆ, ಅರ್ಜಿದಾರರಿಗೆ ಜಾಮೀನು ಸಿಗುವುದಿಲ್ಲ ಎಂದು ಹೇಳಿತು.

ಇದರಿಂದ ಅರ್ಜಿದಾರರ ಪರ ವಕೀಲರು, ಅರ್ಜಿ ಹಿಂಪಡೆಯಲು ಸಿದ್ಧರಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರುವುದಾಗಿ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ಕಾನೂನಿನ ಪ್ರಕಾರ ಸೂಕ್ತ ಪರಿಹಾರ ಕೋರಬಹುದು ಎಂದು ತಿಳಿಸಿ, ಅರ್ಜಿ ಇತ್ಯರ್ಥಪಡಿಸಿತು.

 

 

Related Articles

Comments (0)

Leave a Comment