ಕಠಿಣ ಕಾನೂನು ಕ್ರಮ ಕೈಗೊಳ್ಳದ ಕಾರಣ ಅಪರಾಧವೆಸಗುವುದು ಸುಲಭವಾಗಿದೆ; ಹೈಕೋರ್ಟ್ ಬೇಸರ

ಬೆಂಗಳೂರು: ಅಪರಾಧಿಗಳ ವಿರುದ್ಧ ಕಠಿಣ ನಿಲುವು ತಳೆಯದ ಹಿನ್ನೆಲೆಯಲ್ಲಿ ಕಾನೂನು ತನ್ನ ಪ್ರಾಮುಖ್ಯತೆ ಕಳೆದುಕೊಂಡಿದ್ದು, ಇದರಿಂದ ಅಪರಾಧ ಎಸಗುವುದು ಸುಲಭವಾಗಿದೆ ಎಂದು ಮೌಖಿಕವಾಗಿ ನುಡಿದಿರುವ ಹೈಕೋರ್ಟ್, ಅತ್ಯಾಚಾರ ಪ್ರಕರಣದ ಆರೋಪಿಯಾದ ತೆಲಂಗಾಣದ ಯುವಕನೊಬ್ಬನಿಗೆ ಜಾಮೀನು ನಿರಾಕರಿಸಿದೆ.

ಮಣಿಪಾಲ್‌ ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ವಿದ್ಯಾರ್ಥಿಯಾಗಿದ್ದಾಗ ಸಹಪಾಠಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧಿತನಾಗಿ 2 ತಿಂಗಳಿಂದ ಜೈಲಿನಲ್ಲಿರುವ ಗೋಪಿ ರೆಡ್ಡಿ ಕಾರ್ತಿಕ್‌ ರೆಡ್ಡಿ (23) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌. ನಟರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಾಡುವ ರೀತಿ ಕಾಲನ್ನೋ, ಕೈಯ್ಯನ್ನೋ ಕತ್ತರಿಸಿದರೆ ಮಾತ್ರ ಜನರು ಕಾನೂನು ಪಾಲಿಸಬೇಕು ಎಂದು ಅರ್ಥೈಸಿಕೊಳ್ಳಬಹುದು. ನಮ್ಮಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಎಲ್ಲರೂ ಸರಾಗವಾಗಿ ತೆಗೆದುಕೊಳ್ಳುತ್ತಾರೆ ಎಂದು ಮೌಖಿಕವಾಗಿ ಹೇಳಿತು.

ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಆತ ಇನ್ನೂ ನಾಲ್ಕೈದು ದಿನ ಜೈಲಿನಲ್ಲಿರಲಿ ಬಿಡಿ. ಜೈಲಿನ ಅನುಭವವಾಗಲಿ. ಶಿಕ್ಷೆ ವಿಧಿಸಿದರೆ ನೀವು ಮತ್ತೆ ಜೈಲಿಗೆ ಹೋಗಬೇಕಾಗಬಹುದು, ಯಾರಿಗೆ ಗೊತ್ತು ಎಂದ ನ್ಯಾಯಪೀಠ, ಅಂತಿಮವಾಗಿ ಅರ್ಜಿ ವಿಚಾರಣೆಯನ್ನು ಜೂನ್‌ 8ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ವಾದ ಮಂಡಿಸಿದ ಆರೋಪಿಯ ಪರ ವಕೀಲರು, ಅರ್ಜಿದಾರರು 2 ತಿಂಗಳಿಂದ ಜೈಲಿನಲ್ಲಿದ್ದಾರೆ. ಆತ ಯಾವುದೇ ಅಪರಾದ ಎಸಗಿಲ್ಲ. 3 ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಆರೋಪಿಯನ್ನು ನಿರಂತರವಾಗಿ ಜೈಲಿನಲ್ಲಿಟ್ಟಿದ್ದು, ಇದು ಅವರ ವೃತ್ತಿಪರ ಬದುಕಿಗೆ ಹಾನಿ ಮಾಡಲಿದೆ. ಆದ್ದರಿಂದ, ಆತನಿಗೆ ಜಾಮೀನು ಮಂಜೂರು ಮಾಡಬೇಕೆಂದು ಕೋರಿದರು.

ಪ್ರಕರಣವೇನು?
ಉಡುಪಿಯ ಮಹಿಳಾ ಪೊಲೀಸ್ ಠಾಣೆಗೆ 23 ವರ್ಷದ ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಉಡುಪಿಯ ಮಣಿಪಾಲ್ ತಂತ್ರಜ್ಞಾನ ಸಂಸ್ಥೆಯಲ್ಲಿ ಸಹಪಾಠಿಯಾಗಿದ್ದ ಆರೋಪಿ, 2023ರ ಜುಲೈನಲ್ಲಿ ಆಕೆಗೆ ಪ್ರೇಮ ನಿವೇದನೆ ಮಾಡಿದ್ದ. ಅದಕ್ಕೆ ಮೊದಲಿಗೆ ಸ್ಪಂದಿಸಿದ್ದ ಸಂತ್ರಸ್ತೆ ಕಾಲಾನಂತರದಲ್ಲಿ ಆತನ ನಡವಳಿಕೆಯ ಬಗ್ಗೆ ತಿಳಿದು ಆತನಿಂದ ಅಂತರ ಕಾಯ್ದುಕೊಂಡಿದ್ದರು. 2023ರ ಸೆಪ್ಟೆಂಬರ್‌ 12ರಂದು ತಮ್ಮಿಬ್ಬರ ಸಂಬಂಧದ ಬಗ್ಗೆ ಚರ್ಚಿಸುವುದಾಗಿ ಪುಸಲಾಯಿಸಿ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿದ್ದ. ಇದರಿಂದ, ಆಘಾತಕ್ಕೆ ಒಳಗಾಗಿ ಮಣಿಪಾಲ್‌ನ ಕೆಎಂಸಿಯಲ್ಲಿ ಚಿಕಿತ್ಸೆಯನ್ನೂ ಪಡೆದಿರುವುದಾಗಿ ದೂರಿನಲ್ಲಿ ಆರೋಪಿಸಿದ್ದರು. ಈ ದೂರು ಆಧರಿಸಿ ಅರ್ಜಿದಾರನ ವಿರುದ್ಧ ಐಪಿಸಿ ಸೆಕ್ಷನ್‌ 375(ಎ)(ಅತ್ಯಾಚಾರ) ಹಾಗೂ 376ರ (ಅತ್ಯಾಚಾರಕ್ಕೆ ಶಿಕ್ಷೆ) ಅಡಿ ಪ್ರಕರಣ ದಾಖಲಿಸಲಾಗಿದೆ.

 

 

Related Articles

Comments (0)

Leave a Comment