ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ನಿರ್ದೇಶನ ಕೋರಿದ ಪಿಐಎಲ್; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Jagan Ramesh
- June 1, 2026
- 16 Views
ಬೆಂಗಳೂರು: ಅವಧಿ ಪೂರ್ಣಗೊಂಡು 15 ತಿಂಗಳು ಕಳೆದಿರುವ ಮಂಗಳೂರು ಮಹಾನಗರ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸುವಂತೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಅತ್ತಾವರ ನಿವಾಸಿ ಪತ್ರಕರ್ತ ರಹಿಮಾನ್ ಖಾನ್ ಲೊಹಾನಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿತು.
ಅರ್ಜಿಯಲ್ಲೇನಿದೆ?
ಸಂವಿಧಾನದ ಪರಿಚ್ಛೇದ 243-ಯು ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಅವುಗಳ ಅವಧಿ ಮುಗಿಯುವ ಮುಂಚಿತವಾಗಿ ಮುಂದಿನ ಅವಧಿಗೆ ಚುನಾವಣೆ ನಡೆಸಬೇಕು. ಮಂಗಳೂರು ಮಹಾನಗರ ಪಾಲಿಕೆಗೆ 2019ರ ನವೆಂಬರ್ 12ರಂದು ಕೊನೆಯ ಬಾರಿ ಚುನಾವಣೆ ನಡೆದಿದ್ದು, ಪಾಲಿಕೆಯ ಐದು ವರ್ಷದ ಅವಧಿಯು 2025ರ ಫೆಬ್ರವರಿ 27ರಂದು ಅದರ ಅವಧಿ ಮುಗಿದಿದೆ. ಆದರೆ, ಅವಧಿ ಪೂರ್ಣಗೊಂಡಿ 15 ತಿಂಗಳು ಕಳೆದಿದ್ದರೂ, ಚುನಾವಣೆ ನಡೆದಿಲ್ಲ. ಸದ್ಯ ಪಾಲಿಕೆಯು ಆಡಳಿತಾಧಿಕಾರಿಯ ಆಡಳಿತದಲ್ಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಚುನಾವಣೆ ವಿಳಂಬವಾಗಿರುವುದರಿಂದ ಪಾಲಿಕೆಗೆ ಚುನಾಯಿತ ಜನಪ್ರತಿನಿಧಿಗಳು ಇಲ್ಲದಂತಾಗಿದ್ದು, ಮಂಗಳೂರು ನಗರದ ನಾಗರಿಕರಿಗೆ ಉತ್ತಮ ಆಡಳಿತ ಸಿಗದಂತಾಗಿದೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಆದ್ದರಿಂದ, ಪಾಲಿಕೆಗೆ ತಕ್ಷಣವೇ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.



Comments (0)